ಶನಿವಾರ, ಮೇ 15, 2021
23 °C

22 ವರ್ಷ ಅಲೆದರೂ ಅಧಿಕಾರಿಗಳು ಕಿವಿಗೊಡಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಎರಡನೇ ಮಹಾ ಯುದ್ಧದಲ್ಲಿ ಮಿತ್ರ ರಾಷ್ಟ್ರಗಳ ಪರ ಹೋರಾಟ ನಡೆಸಿದ ಇಲ್ಲಿಯ ಶಾಂತಿನಗರದ ನಿವೃತ್ತ ಸೈನಿಕರೊಬ್ಬರು ಜೀವನೋಪಾಯಕ್ಕಾಗಿ ಜಾಗ ಕೋರಿ ಕಳೆದ 22 ವರ್ಷಗಳಿಂದ ಇಲ್ಲಿಯ ಪುರಸಭೆಗೆ ಎಡತಾಕುತ್ತಿರುವ ವಿಷಯ ಲೋಕಾಯುಕ್ತ ಪೊಲೀಸ್ ಅಧಿಕಾರಿ ಎದುರು ಪ್ರಸ್ತಾಪವಾದಾಗ ಅಕ್ಷರಶಃ ಅಲ್ಲಿದ್ದವರ ಮನ ಕಲುಕಿದ ಘಟನೆ  ಇತ್ತೀಚೆಗೆ ನಡೆಯಿತು.ಲೋಕಾಯುಕ್ತ ಡಿವೈಎಸ್‌ಪಿ ಎಚ್.ಜಿ. ಪಾಟೀಲ ನೇತೃತ್ವದ ತಂಡದ ಎದುರು ಕಣ್ಣೀರು ಕೋಡಿ ಹರಿಸಿದ ವಯೋವೃದ್ಧರು ತಾವು ಈಗಾಗಲೇ ಸೇನೆ ಮತ್ತು ಆರ್.ಪಿ.ಎಫ್. ತುಕುಡಿಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿದ್ದು, ಆದರೆ ಇದುವರೆಗೆ ಜೀವನೋಪಾಯಕ್ಕೆ ಯಾವುದೇ ದಾರಿ ಇಲ್ಲವಾಗಿದೆ ಎಂದು ಅಲವತ್ತುಕೊಂಡರು.ಇಲ್ಲಿಯ ಶಾಂತಿ ನಗರದ ನಿವಾಸಿಯಾಗಿರುವ ಈ ನಿವೃತ್ತ ಸೈನಿಕ ಎ.ಎಂ ಅಗರ್‌ಖೇಡ್ ಎಂಬುವವರು ಈ ಇಳಿವಯಸ್ಸಿನಲ್ಲಿ ಸೈಕಲ್ ಶಾಪ್ ಒಂದನ್ನು ಆರಂಭಿಸಲು ಜಾಗ ಕೋರಿ ಸ್ಥಳೀಯ ಪುರಸಭೆಗೆ ಕಳೆದ 22 ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರು ಎನ್ನಲಾಗಿದೆ.ಆದರೆ ಇವರ ಮನವಿಗೆ ಇಲ್ಲಿಯವರೆಗೆ ಪುರಸಭೆಯ ಯಾವುದೇ ಅಧಿಕಾರಿ ಸ್ಪಂದಿಸದಿರು ವುದರಿಂದ ಹತಾಶರಾಗಿದ್ದ ಅವರು ಕೊನೆಯ ದಾರಿಯೆಂಬಂತೆ ಇಂದು ಲೋಕಾಯುಕ್ತರ ಎದುರು ತಮ್ಮ ಅಹವಾಲನ್ನು ಹೇಳಿಕೊಂಡಾಗ ಅಲ್ಲಿ ಸೇರಿದ್ದ ಅಧಿಕಾರಿಗಳು ಬೆಚ್ಚಿಬೆರಗಾಗುವುದೊಂದೇ ಬಾಕಿ ಉಳಿದಿದೆ.ಸತ್ತಿ ರಸ್ತೆಯ ಕೆಲವು ನಿವಾಸಿಗಳು ತಮ್ಮ ಅಹ ವಾಲು ಸಲ್ಲಿಸಿ ಸದ್ಯ ಮೇಲ್ದರ್ಜೆಗೆ ಏರಿಸಲಾಗುತ್ತಿರುವ ಅಥಣಿ ಮಹಿಷವಾಡಗಿ ರಸ್ತೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು  ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಗತ್ಯವಿಲ್ಲದಿದ್ದರೂ ರಸ್ತೆಯ ಎತ್ತರವನ್ನು ಹೆಚ್ಚಳ ಮಾಡಿರುವುದರಿಂದ ಮಳೆಯ ನೀರು ನೇರವಾಗಿ ಮನೆ ಯೊಳಕ್ಕೆ ನುಸುಳುತ್ತಿದ್ದು, ಇದರಿಂದ ಜೀವನ ನರಕ ಯಾತನೆಯಾದಂತಾಗಿದೆ ಎಂದು ಆರೋಪಿಸಿದರು.ಪ್ರಗತಿಯಲ್ಲಿರುವ ರಸ್ತೆಯ ಎತ್ತರಿಸುವ  ಕಾಮಗಾರಿಯನ್ನು  ಸ್ಥಗಿತಗೊಳಿಸಿ ಮೊದಲಿದ್ದಂತೆಯೇ ರಸ್ತೆಯನ್ನು ಕೆಳಸ್ತರಕ್ಕೆ ಇಳಿಸುವಂತೆ  ಕೂಡಲೇ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಬೇಕು ಎಂದು ಲೋಕಾಯುಕ್ತ ಅಧಿಕಾರಿಗಳನ್ನು ಒತ್ತಾಯಿಸಿದರು.ಇದೇ ವೇಳೆ ಸಂಭೋಜಿ ಎಂಬ ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿ ತಮ್ಮ ಮನೆಯ ಎದುರು ಬಹಳ ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಕಟ್ಟೆಯೊಂದನ್ನು ಯಾವುದೇ ಮುನ್ಸೂಚನೆಯಿಲ್ಲದೇ  ತೆರವುಗೊಳಿಸಿ ರುವುದನ್ನು ಆಕ್ಷೇಪಿಸಿದರು.ನಂತರ ಮಾತನಾಡಿದ ಲೋಕಾಯುಕ್ತ ಡಿ.ವೈ.ಎಸ್.ಪಿ ಎಚ್.ಜಿ ಪಾಟೀಲ, ಸಾರ್ವಜನಿಕ ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಇಲಾಖೆ ಪ್ರತಿತಿಂಗಳು ಆಯಾ ತಾಲ್ಲೂಕು ಕೇಂದ್ರದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವೇಳೆ ತಮ್ಮ ಬಳಿ ಬರುವ ಸಂಬಂಧಪಟ್ಟ ದೂರುಗಳ ಕುರಿತು ಆಯಾ ಇಲಾಖೆಗಳಿಗೆ ತಕ್ಷಣ ನೋಟಿಸು ನೀಡುವುದರ ಜೊತೆಗೆ ಅದರ ಮುಂದಿನ ಬೆಳವಣಗೆಗಳ ಬಗ್ಗೆ ನಿಗಾಯಿಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.