ಭಾನುವಾರ, ಜನವರಿ 19, 2020
26 °C

229 ವಿದ್ಯಾರ್ಥಿಗಳಿಗೆ ದೃಷ್ಟಿ ದೋಷ!

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಇದು ನಂಬಲು ಅಸಾಧ್ಯ ಎನಿಸಿದರೂ ದಿಟವಾದ ಸುದ್ದಿ. ತಾಲ್ಲೂಕಿನ ಸರ್ಕಾರಿ ಶಾಲೆಗಳು ಸೇರಿ ವಿವಿಧ ಶಾಲೆಗಳ ಒಟ್ಟು 229 ವಿದ್ಯಾರ್ಥಿಗಳು ನಾನಾ ಬಗೆಯ ದೃಷ್ಟಿ ದೋಷದಿಂದ ಬಳಲುತ್ತಿರು­ವುದನ್ನು ಶಿಕ್ಷಣ ಇಲಾಖೆ ಪತ್ತೆ ಹಚ್ಚಿದೆ.ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಕಾರ್ನಿಯಾ ತೊಂದರೆ, ಸಮೀಪ ದೃಷ್ಟಿ, ದೂರ ದೃಷ್ಟಿ, ಜಾರುರೆಪ್ಪೆ, ಸೋಮಾರಿ ಕಣ್ಣು, ಡಯಾಬಿಟಿಕ್‌ ರೆಟಿನೋಪತಿ ಹಾಗೂ ಮೆಳ್ಳಗಣ್ಣು ಸಮಸ್ಯೆ­ಯಿಂದ ಬಳಲುತ್ತಿರುವುದನ್ನು ಋಜುವಾತು­ಪಡಿಸಿದೆ. ಸಂಪೂರ್ಣ ಅಂಧತ್ವಕ್ಕೆ ಕಾರಣವಾಗಲ್ಲ ಅಪಾಯಕಾರಿ ’ಗ್ಲಕೋಮಾ’ ಸಮಸ್ಯೆ ಕೆಲವು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿರುವ ಆತಂಕ­ಕಾರಿ ಸಂಗತಿಯೂ ಬೆಳಕಿಗೆ ಬಂದಿದೆ. ಇಷ್ಟಾದರೂ ಪೋಷಕರು ತಮ್ಮ ಮಕ್ಕಳ ನೇತ್ರ ಸಮಸ್ಯೆಯನ್ನು ಗುರುತಿಸಿಲ್ಲ ಎಂಬುದು ಅಚ್ಚರಿ ಹುಟ್ಟಿಸುತ್ತದೆ. ಶಿಕ್ಷಣ ಇಲಾಖೆಯ ಐಇಆರ್‌ಟಿ (ಸಂಯೋಜಿತ ಶಿಕ್ಷಣ ಸಂಪನ್ಮೂಲ) ಶಿಕ್ಷಕರು ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ವೇಳೆ ಈ ಅಂಶ ಬೆಳಕಿಗೆ ಬಂದಿದೆ.ಕಾರಣಗಳು

ದೃಷ್ಟಿ ಸಮಸ್ಯೆಗೆ ಹಲವು ಕಾರಣಗಳನ್ನು ತರಬೇತಿ ಪಡೆದ ತಜ್ಞ ಶಿಕ್ಷಕರು ಪಟ್ಟಿ ಮಾಡಿದ್ದಾರೆ.

1. ಅಪೌಷ್ಠಿಕತೆ, 2. ಅನುವಂಶೀಯತೆ, 3. ಸಕ್ಕರೆ ಕಾಯಿಲೆ ಹಾಗೂ 4. ಸ್ವಯಂಕೃತ ಕಾರಣ (ಅಪಾಯಕಾರಿ ಧೂಮ, ಧೂಳು, ಬೆಂಕಿಯ ಹವೆ)ದಿಂದ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸದೇ ಇರವುದು ಮಕ್ಕಳ ನೇತ್ರ ಸಮಸ್ಯೆಗೆ ಮೂಲ ಕಾರಣ­ವಾ­ಗುತ್ತದೆ. 3ರಿಂದ 6 ವರ್ಷ ವಯಸ್ಸಿನ ಮಕ್ಕಳಲ್ಲಿ ಸಮಸ್ಯೆ ಸ್ಪಷ್ಟವಾಗಿ ಗೋಚರಿಸುತ್ತದೆ. ಕಣ್ಣಿನ ದೋಷವನ್ನು ಸಕಾಲದಲ್ಲಿ ಗುರುತಿಸಿದರೆ ಶಸ್ತ್ರಚಿಕಿತ್ಸೆ ಇಲ್ಲವೆ ಸರಳ ಚಿಕಿತ್ಸೆಯ ಮೂಲಕ ದೋಷ ಸರಿಪಡಿಸಲು ಸಾಧ್ಯವಿದೆ. ಸಮಸ್ಯೆ ಗುರುತಿಸುವುದು ತಡವಾದರೆ, ಇಲ್ಲವೆ ನಿರ್ಲಕ್ಷ್ಯ ವಹಿಸಿದರೆ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ.ಪರಿಹಾರ

ಕಣ್ಣಿನ ಸಮಸ್ಯೆ ಬಾರದಂತೆ ನೋಡಿಕೊಳ್ಳ­ಬೇಕಾದರೆ ಮಕ್ಕಳಿಗೆ ಎಳವೆಯಿಂದಲೇ ಸಮೃದ್ಧ ಪೋಷಕಾಂಶ (ವಿಟಮಿನ್‌ ಎ, ಬಿ, ಸಿ ಮತ್ತು ಡಿ) ಇರುವ ಹಸಿರು ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಕೊಡಬೇಕು. ವರ್ಷಕ್ಕೊಮ್ಮೆ  ನೇತ್ರ ತಪಾಸಣೆ ಮಾಡಿಸಬೇಕು. ತಾಲ್ಲೂಕು ಇಲ್ಲವೆ ಜಿಲ್ಲೆಯ ಯಾವುದೇ ಶಾಲೆಯ ವಿದ್ಯಾರ್ಥಿಗೆ ಕಣ್ಣಿನ ದೋಷ ಇದ್ದರೆ ಶಿಕ್ಷಣ ಇಲಾಖೆ ವಿವೇಕಾನಂದ ಸೇವಾಶ್ರಮದ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತದೆ. ಕೃತಕ ಕಣ್ಣು ಜೋಡಣೆ ಸೌಲಭ್ಯ ಕೂಡ ಪಡೆದುಕೊಳ್ಳಬಹುದು ಎಂದು ಐಇಆರ್‌ಟಿ ಶಿಕ್ಷಕ ಸಯ್ಯದ್‌ಖಾನ್‌ ಬಾಬು ಹೇಳುತ್ತಾರೆ. ನೆರವಿನ ಅಗತ್ಯ ಇರುವವರು ಮೊ. 99645 08263 ಸಂಪರ್ಕಿಸಬಹುದು.

 

ಪ್ರತಿಕ್ರಿಯಿಸಿ (+)