ಶನಿವಾರ, ಮಾರ್ಚ್ 6, 2021
18 °C
ರಾಜ್ಯದ 38 ನಗರಗಳಿಗೆ 637 ನಗರ ಸಾರಿಗೆ ಬಸ್‌ಗಳ ಸೌಲಭ್ಯ

2499 ಹೊಸ ಬಸ್‌ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2499 ಹೊಸ ಬಸ್‌ ಸಂಚಾರ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಿಗೆ ವಿವಿಧ ಮಾದರಿಯ 2499 ಹೊಸ ಬಸ್‌ಗಳು ಸೇರ್ಪಡೆ ಆಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ವಿಧಾನಸೌಧದ ಮುಂಭಾಗ 241 ನಗರ ಸಾರಿಗೆ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಅವರು, ಹೊಸ ಬಸ್‌ಗಳು ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ ಎಂದು ಹೇಳಿದರು.ಮೂರು ವರ್ಷದ ಅವಧಿಯಲ್ಲಿ 26,660 ಜನರಿಗೆ ಕೆಎಸ್‌ಆರ್‌ಟಿಸಿ ಉದ್ಯೋಗ ಕಲ್ಪಿಸಿದೆ. ದೇಶದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಹೊಂದಿರುವ ಹೆಗ್ಗಳಿಕೆಗೆ ರಾಜ್ಯ ಸಾರಿಗೆ ಸಂಸ್ಥೆ ಪಾತ್ರವಾಗಿದೆ ಎಂದರು.ನೌಕರರ ವೇತನವನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದೆ. ಶೇ 1ರಷ್ಟು ವೇತನ ಹೆಚ್ಚಳ ಮಾಡಿದರೆ ಸರ್ಕಾರಕ್ಕೆ ₹ 150 ಕೋಟಿ ಹೊರೆಯಾಗಲಿದೆ. ಆ ಭಾರ ತಡೆದುಕೊಂಡು ಇದೇ ಮೊದಲ ಬಾರಿಗೆ ಶೇ 12.5ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ನೌಕರರು ಪ್ರಯಾಣಿಕರ ಹಿತಕ್ಕಾಗಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸರು ತರಬೇಕು ಎಂದು ಸಲಹೆ ಮಾಡಿದರು.ಈಗಿರುವ ಬಸ್‌ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಜೊತೆಗೆ ಹೊಸ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಎಲ್ಲಾ ಬಸ್ ಡಿಪೋ, ಬಸ್ ನಿಲ್ದಾಣ, ಪ್ರಾದೇಶಿಕ ಹಾಗೂ ಎಂದು ಅವರ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದರು.ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ರಾಜ್ಯದ 38 ನಗರಗಳಿಗೆ 637 ನಗರ ಸಾರಿಗೆ ಬಸ್‌ಗಳ ಸೇವೆ ಆರಂಭಿಸಲಾಗುತ್ತಿದೆ. ಅದರಲ್ಲಿ ಮೊದಲ ಹಂತದಲ್ಲಿ 241 ಬಸ್‌ಗಳನ್ನು ಮುಖ್ಯಮಂತ್ರಿ ಅವರು ಸೇವೆಗೆ ಸಮರ್ಪಿಸಿದ್ದಾರೆ.ಇವು ಹಾಸನ,  ಶಿವಮೊಗ್ಗ, ಮೈಸೂರು, ತುಮಕೂರು, ಮಂಡ್ಯ, ರಾಮನಗರ, ಕೋಲಾರ, ದಾವಣಗೆರೆ, ಭದ್ರಾವತಿ, ಚಿತ್ರದುರ್ಗ, ಮಂಗಳೂರು ಮತ್ತು ಉಡುಪಿ ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಸಂಚರಿಸಲಿವೆ ಎಂದರು.ರಾಜ್ಯದ ಸಾರಿಗೆ ಸಂಸ್ಥೆ ಕಾರ್ಯ ನಿರ್ವಹಣೆ ಉತ್ತಮವಾಗಿದ್ದು, ಈವರಗೆ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ 215 ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಕೆಎಸ್‌ಆರ್‌ಟಿಸಿಗೆ 131 ಪ್ರಶಸ್ತಿಗಳು ಲಭಿಸಿವೆ ಅವರು ವಿವರಿಸಿದರು.ಇದೇ ಸಂದರ್ಭದಲ್ಲಿ ಕಲಾಸಿಪಾಳ್ಯದಲ್ಲಿ ₹ 60 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್‌ ನಿಲ್ದಾಣಕ್ಕೆ ಶಂಕುಸ್ಥಾಪನೆ, ಅಂಜನಾಪುರ ಬಸ್‌ ಡಿಪೋ ಮತ್ತು ಗುಂಜೂರಿನಲ್ಲಿ ₹ 7.79 ಕೋಟಿ  ವೆಚ್ಚದಲ್ಲಿ ನಿರ್ಮಾಣ ಆಗಿರುವ ಸಿಬ್ಬಂದಿ ವಸತಿ ಗೃಹಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ವಿಶೇಷ ಸೌಲಭ್ಯಗಳು

*  ಚಾಲನಾ ಸುರಕ್ಷತೆಗಾಗಿ ಹಿಂಬದಿ ನೋಟದ ಕ್ಯಾಮೆರಾ

*  ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ

*  ಧ್ವನಿ ಮತ್ತು ಎಲ್‌ಇಡಿ ಸ್ಕ್ರೀನ್ ಮೂಲಕ ಮುಂಬರುವ ನಿಲ್ದಾಣಗಳ  ಮಾಹಿತಿ

*  ಸ್ವಯಂ ಚಾಲಿತ ಬಾಗಿಲು ಮುಚ್ಚಿದಾಗ ಮಾತ್ರ ವಾಹನ ಚಾಲನೆಯಾಗುವ ವ್ಯವಸ್ಥೆ

* ಅಂಗವಿಕಲರು ಹತ್ತಲು ಮತ್ತು ಇಳಿಯಲು ರ್‌್ಯಾಂಪ್ ವ್ಯವಸ್ಥೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.