ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸಾವಿರ ಯುವಕರಿಗೆ ತರಬೇತಿ

ರಾಜೀವ್‌ಗಾಂಧಿ ಚೈತನ್ಯ ಯೋಜನೆ ಜಾರಿಗೆ ಜಿಲ್ಲಾ ಪಂಚಾಯಿತಿ ಸಿದ್ಧತೆ
Last Updated 4 ಡಿಸೆಂಬರ್ 2013, 6:59 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಯುವಜನರಿಗೆ ಸ್ವಉದ್ಯೋಗ ಮತ್ತು ವೃತ್ತಿ ಕೌಶಲ ಉದ್ಯೋಗ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಯೋಜನೆ ಪ್ರಸ್ತಾಪಿಸಿದ್ದಾರೆ. ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿ 40 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗ್ರಾಮ ಸಭೆ ಮೂಲಕವೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಈ ಸಂಬಂಧ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಡಿ. 10ರೊಳಗೆ ಫಲಾನುಭವಿಗಳ ಆಯ್ಕೆಪಟ್ಟಿ ಸಲ್ಲಿಸಲು ಸೂಚಿಸ ಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಕೆ.ಎಚ್‌. ನರಸಿಂಹ ಮೂರ್ತಿ ಮಂಗಳವಾರ ತಿಳಿಸಿದರು.

18ರಿಂದ 35ವರ್ಷದವರು ಸೌಲಭ್ಯಕ್ಕೆ ಅರ್ಹರು. ಕನಿಷ್ಠ 8ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗೆ ಮಾತ್ರ ಯೋಜನೆ ಅನ್ವಯಿಸಲಿದೆ. ಆಯ್ಕೆಯಲ್ಲಿ ಮೀಸಲಾತಿ ಪಾಲಿಸಲಾಗುತ್ತದೆ. ಆಯ್ಕೆಯಾದ ಯುವಜನರು ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಈಗಾಗಲೇ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

25 ಸಾವಿರ ಮಂದಿಗೆ ತರಬೇತಿ
ಜಿಲ್ಲೆಯಲ್ಲಿ ಪ್ರತಿವರ್ಷ 5 ಸಾವಿರದಂತೆ ಮುಂದಿನ 5 ವರ್ಷದಲ್ಲಿ 25 ಸಾವಿರ ಯುವಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕೃಷಿ ಆಧಾರಿತ ಹಾಗೂ ಕೃಷಿ ಹೊರತಾದ ತರಬೇತಿ ನೀಡಲಾಗುವುದು. ತರಬೇತಿ ಪಡೆದವರಿಗೆ ಬ್ಯಾಂಕ್‌ಗಳ ಮೂಲಕ ₨ 1 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ, ₨ 10 ಸಾವಿರ ಸಹಾಯಧನ ಕೂಡ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ತರಬೇತಿ ಪಡೆದ ಕನಿಷ್ಠ 5 ಫಲಾನುಭವಿಗಳು ಒಟ್ಟುಗೂಡಿ ಸ್ವಉದ್ಯೋಗ ಚಟುವಟಿಕೆ ನಡೆಸಬೇಕಿದೆ ಎಂದು ವಿವರಿಸಿದರು.

ನರ್ಸರಿ, ಬೀಜೋತ್ಪಾದನೆ, ಬಾತುಕೋಳಿ ಸಾಕಣೆ, ಕೃಷಿ ಮೌಲ್ಯವರ್ಧನೆ, ಪುಷ್ಪೋದ್ಯಮ. ಅಡಿಕೆ ತಟ್ಟೆ ತಯಾರಿಕೆ, ಪಶು ಆಹಾರ ಉತ್ಪಾದನೆ, ಹೈನುಗಾರಿಕೆ, ಮೀನುಗಾರಿಕೆ, ಮಾವು– ತೆಂಗು ಕೋಯ್ಲು, ಟಿವಿ ದುರಸ್ತಿ ಸೇರಿದಂತೆ ವಿವಿಧ ಸ್ವಉದ್ಯೋಗದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಸಿದ್ದಲಿಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT