ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2.50 ಕೋಟಿ ಮೌಲ್ಯದ ವಸ್ತು ವಶ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಶ್ಚಿಮ ವಿಭಾಗದ ಪೊಲೀಸರು ದರೋಡೆ, ಸುಲಿಗೆ, ವಂಚನೆ ಮುಂತಾದ 110 ಅಪರಾಧ ಪ್ರಕರಣಗಳನ್ನು ಭೇದಿಸಿ 2.50 ಕೋಟಿ ರೂಪಾಯಿ ಮೌಲ್ಯದ ಏಳು ಕೆ.ಜಿ ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

`ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ಸಿಬ್ಬಂದಿ ಕೇವಲ ಒಂದೂವರೆ ತಿಂಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿದ್ದಾರೆ. ಒಟ್ಟು 126 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆ, ಐದು ದರೋಡೆಗೆ ಹೊಂಚು, ಹನ್ನೆರಡು ಸುಲಿಗೆ, ಹದಿನೆಂಟು ಸರಗಳವು, ಹದಿನೆಂಟು ಕನ್ನ ಕಳವು ಪ್ರಕರಣಗಳು ಬಗೆಹರಿದಿವೆ~ ಎಂದು ಅಪರಾಧ ವಿಭಾಗದ (ಪಶ್ಚಿಮ) ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳವು, ಸರಗಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಏಳು ಕೆ.ಜಿ ಬೆಳ್ಳಿ ವಸ್ತುಗಳು, 59 ದ್ವಿಚಕ್ರ ವಾಹನ, ಒಂಬತ್ತು ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದರು.

ಸಿಕ್ಕಿ ಬಿದ್ದ ಮೋಜುಗಾರ ಕಳ್ಳ: ಮೋಜಿನ ಜೀವನ ನಡೆಸುವ ಸಲುವಾಗಿ ಕಳವು ಮಾಡುತ್ತಿದ್ದ ಕುಮಾರಸ್ವಾಮಿ ಲೇಔಟ್‌ನ ಲಕ್ಷ್ಮಣ್‌ಕುಮಾರ್ ಉರುಫ್ ಸುಳಿ (19) ಹಾಗೂ ಆತನ ಸಹಚರರಾದ ಗೌಡನಪಾಳ್ಯದ ಶಿವಕುಮಾರ್ (32), ಬನಶಂಕರಿ ಎರಡನೇ ಹಂತದ ಮಹೇಶ್‌ರಾವ್ (31), ನಾಯಂಡನಹಳ್ಳಿಯ ರಕ್ಷಿತ್‌ರಾಜು (34) ಮತ್ತು ಆರ್‌ಬಿಐ ಕಾಲೊನಿಯ ಪ್ರಶಾಂತ (20) ಎಂಬುವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 46 ಲಕ್ಷ ರೂಪಾಯಿ ಮೌಲ್ಯದ ಒಂದು ಕೆ.ಜಿ ಆರುನೂರು ಗ್ರಾಂ ಚಿನ್ನಾಭರಣ ಮತ್ತು ಸುಮಾರು ಮೂರು ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದರು.

ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ ಸುಳಿ, ತನ್ನ ಸಹಚರರ ಜತೆ ಸೇರಿ ಮನೆಯ ಕಿಟಕಿ ಸರಳುಗಳನ್ನು ಕೊಯ್ದು ಒಳ ನುಗ್ಗುತ್ತಿದ್ದ. ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ.

ದುಬಾರಿ ಬೆಲೆಯ ಕಾರು ಇಟ್ಟುಕೊಂಡಿದ್ದ ಆತ ಮೋಜಿನ ಜೀವನ ನಡೆಸುತ್ತಿದ್ದ. ಬೈಕ್‌ವೊಂದನ್ನು ಮರು ವಿನ್ಯಾಸಗೊಳಿಸಲು ಆತ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಬಡಾವಣೆಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಆತ ಹೇರಳವಾಗಿ ಧನ ಸಹಾಯ ಮಾಡುತ್ತಿದ್ದ. ಸ್ನೇಹಿತರನ್ನು ಕಾರಿನಲ್ಲಿ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಎಂದು ಅವರು ಮಾಹಿತಿ ನೀಡಿದರು.

ಮನೆ ಬೀಗ ಒಡೆದು ಕಳವು ಮಾಡುತ್ತಿದ್ದ ಸುನಿಲ್ ಕುಮಾರ್ (33) ಹನುಮಂತ (42), ಸುನಿಲ್ (31) ಮತ್ತು ಸಂಜಯ್ ಎಂಬುವರನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ಹನ್ನೆರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಒಟ್ಟು ಹದಿನೈದು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು. 

ಬಸವೇಶ್ವರನಗರ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಜಗದೀಶ್ ಎಂಬುವರ ಮನೆಯಲ್ಲಿ ಸುಮಾರು ಒಂದು ಕೆ.ಜಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ ವೇಳೆ ಆರೋಪಿ ಆಭರಣವಿದ್ದ ಕೈಚೀಲ ಎಸೆದು ಪರಾರಿಯಾಗಿದ್ದಾನೆ.

ಬೆಳಗಿನ ಜಾವ ಗಸ್ತಿನಲ್ಲಿದ್ದ ಸಿಬ್ಬಂದಿಗೆ ದುಷ್ಕರ್ಮಿಯೊಬ್ಬ ಕಳವು ಮಾಡಿ ಪರಾರಿಯಾಗುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಆರೋಪಿಯನ್ನು ಬೆನ್ನಟ್ಟಿದಾಗ ಆಭರಣ ಸಿಕ್ಕಿದೆ. ಪರಾರಿಯಾಗಿರುವ ವ್ಯಕ್ತಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಪ್ಪ ಹೇಳಿದರು.

ಇನ್‌ಸ್ಪೆಕ್ಟರ್‌ಗಳಾದ ರಾಜೇಂದ್ರ ಕುಮಾರ್, ಲೋಕೇಶ್ವರ, ವಿ.ನಾರಾಯಣಸ್ವಾಮಿ, ರಾಮಲಿಂಗೇಗೌಡ, ಬಿ.ಜಿ.ರತ್ನಾಕರ್, ನೂರುಲ್ಲಾ ಷರೀಫ್, ಪಿ.ಚಂದ್ರಶೇಖರ್, ನಾಗೇಶ್‌ಕುಮಾರ್, ಪಿ.ಎಂ.ಯೋಗೇಂದ್ರ ಕುಮಾರ್, ಲಕ್ಷ್ಮಿನಾರಾಯಣಪ್ರಸಾದ್, ವಾಸುದೇವ ವಿ ನಾಯಕ್ ಮತ್ತು ಎಸ್‌ಐ ಸಿದ್ದೇಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT