ಭಾನುವಾರ, ಮೇ 22, 2022
22 °C

26/11ರ ಮುಂಬೈ ದಾಳಿ ವಿಚಾರಣೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಮುಂಬೈನಲ್ಲಿ ನಡೆದ 26/11ರ ಉಗ್ರರ ದಾಳಿ ಪ್ರಕರಣದ ಆರೋಪಿಗಳ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಬೇರೆಡೆಗೆ ವರ್ಗಾವಣೆಯಾಗಿದ್ದು, ಹೊಸ ನ್ಯಾಯಾಧೀಶರ ನೇಮಕವಾಗಿಲ್ಲದ ಕಾರಣ ವಿಚಾರಣೆಯನ್ನು ಮುಂದೂಡಿದೆ.ಇದೇ 5ರಂದು ನಡೆದ ವಿಚಾರಣೆ ವೇಳೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಭಯೋತ್ಪಾದಕ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಶಾಹಿದ್ ರಫೀಕ್ ಅವರು, ಪಂಜಾಬ್ ಪ್ರಾಂತ್ಯದ ಜಂಗ್ ಜಿಲ್ಲೆಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿ ವರ್ಗಾವಣೆಯಾದರು. ಅವರಿಂದ ತೆರವಾದ ಜಾಗಕ್ಕೆ ಹೊಸದಾಗಿ ಯಾರನ್ನೂ ನೇಮಕ ಮಾಡಿಲ್ಲ. ಹಾಗಾಗಿ ವಿಚಾರಣೆಯನ್ನು ಈ ತಿಂಗಳ 16ರವರೆಗೆ ಮುಂದೂಡಲಾಗಿದೆ ಎಂದು ಆರೋಪಿ ಲಖ್ವಿ ಪರ ವಕೀಲ ಖ್ವಾಜಾ ಹ್ಯಾರಿಸ್ ಅಹ್ಮದ್ ತಿಳಿಸಿದರು.2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗಿಯಾದ ಶಂಕೆಯಿಂದ ಲಷ್ಕರ್-ಎ-ತೊಯ್ಬಾ ಸಂಘಟನೆ ಕಮಾಂಡರ್ ಜಾಕೀರ್ ರೆಹಮಾನ್ ಲಖ್ವಿ ಮತ್ತು ಇತರ ಆರು ಪಾಕಿಸ್ತಾನಿಯರನ್ನು ಬಂಧಿಸಲಾಗಿತ್ತು.ಮೂಲಗಳ ಪ್ರಕಾರ, ಪಾಕ್ ಮಾಜಿ ಅಧ್ಯಕ್ಷೆ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಚೌಧರಿ ಹಬೀಬ್-ಉರ್-ರೆಹಮಾನ್ ಅವರನ್ನೇ ಈ ಪ್ರಕರಣದ ವಿಚಾರಣೆಗಾಗಿ ನೇಮಿಸುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.