ಶುಕ್ರವಾರ, ಮೇ 7, 2021
26 °C

27ರಿಂದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಸಂಸ್ಥೆಯ ಸಿಬ್ಬಂದಿ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ಇದೇ ಏ. 27ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿಗಮದ ಕಾರ್ಮಿಕ ಸಂಘಗಳ ಜಂಟಿ ಸಮಿತಿ ತೀರ್ಮಾನಿಸಿದೆ~ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಜಿ.ಟಿ. ರಂಗೇಗೌಡ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿವರ ನೀಡಿದರು.ಸಂಸ್ಥೆಯ ಸುಮಾರು 1.10ಲಕ್ಷ ಸಿಬ್ಬಂದಿ ಕಳೆದ 15ವರ್ಷಗಳಿಂದ ವೇತನ ಬಡ್ತಿ ಇಲ್ಲದೆ ದುಡಿಯುತ್ತಿದ್ದಾರೆ. ದಿನೇ ದಿನೇ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಿದೆ. ಸಂಸ್ಥೆಯ ಅಂಗೀಕೃತ ಯೂನಿಯನ್‌ಗಳ ಜತೆಗೆ ಮಾಡಿರುವ ಒಪ್ಪಂದಕ್ಕೂ ಗೌರವ ಗೊಡುತ್ತಿಲ್ಲ.ಅಧಿಕಾರಿಗಳೇ ನಡೆಸಿರುವ ಸಮೀಕ್ಷೆ ಪ್ರಕಾರ ಎಲ್ಲ ವಿಭಾಗಗಳಲ್ಲೂ ಶೇ 30ರಷ್ಟು ಹುದ್ದೆಗಳು ಖಾಲಿ ಇವೆ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಚಿವರಿಂದ ಆರಂಭಿಸಿ ಮುಖ್ಯಮಂತ್ರಿವರೆಗೆ ಎಲ್ಲರಲ್ಲೂ ಹಲವು ಬಾರಿ ಮನವಿ ಮಾಡಲಾಗಿದೆ. ಈಚೆಗೆ ಹಾಸನದಲ್ಲಿ ಬೃಹತ್ ಸಮ್ಮೇಳನವನ್ನೂ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಗಮನಿಸುವ ಗೋಜಿಗೂ ಹೋಗಿಲ್ಲ, ಇದರಿಂದಾಗಿ ಮುಷ್ಕರ ಅನಿವಾರ್ಯವಾಗಿದೆ ಎಂದು ಅವರು ನುಡಿದರು.ಸಂಸ್ಥೆಯ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳಲ್ಲಿ ಲಂಚ ತಾಂಡವವಾಡುತ್ತಿದೆ. ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ಬಿಟ್ಟರೆ ಎಲ್ಲರೂ ಲಂಚಕೋರರೇ ಆಗಿದ್ದಾರೆ. ಒಳ್ಳೆಯ ಬಸ್ ಸಿಗಬೇಕಾದರೂ ಕಂಡಕ್ಟರ್ ಲಂಚ ಕೊಡಬೇಕು. ಹಳೆಯ ಬಸ್ಸುಗಳಿಗೇ ಪೇಂಟ್ ಮಾಡಿಸಿ ಓಡಿಸುತ್ತಾರೆ. ಮೈಲೇಜ್ ಸಿಗದಿದ್ದರೆ ಚಾಲಕನ ವೇತನದಿಂದ ಹಣ ಕಡಿತ ಮಾಡುತ್ತಾರೆ. ಪ್ರತಿ ತಿಂಗಳೂ ಕಂಡಕ್ಟರ್ ಹಾಗೂ ಚಾಲಕರು ದಂಡ ನೀಡಬೇಕಾದ ಸ್ಥಿತಿ ಇದೆ ಎಂದು ರಂಗೇಗೌಡ ಆರೋಪಿಸಿದರು.ಈಚೆಗಷ್ಟೇ ಯೂನಿಯನ್‌ನ ಪ್ರತಿನಿಧಿಗಳು ಪುನಃ ಅಶೋಕ್ ಹಾಗೂ ಮುಖ್ಯಮಂತ್ರಿಯನ್ನು ಭೇಟಿಮಾಡುವ ಪ್ರಯತ್ನ ಮಾಡಿದ್ದರೂ ಅವರು ಮಾತುಕತೆ ನಡೆಸ ಒಪ್ಪಲಿಲ್ಲ. ಈ ಕಾರಣದಿಂದ ಮುಷ್ಕರ ನಡೆಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಸಾರ್ವಜನಿಕರಿಗೆ ಆಗುವ ಅನಾನುಕೂಲತೆ ಬಗ್ಗೆ ನಮಗೂ ಬೇಸರವಿದೆ.ಆದರೆ ಒಂದು ಲಕ್ಷಕ್ಕೂಹೆಚ್ಚು ಸಿಬ್ಬಂದಿ ಹಾಗೂ ಅವರನ್ನು ನಂಬಿರುವವರಿಗೆ ಅನುಕೂಲ ಕಲ್ಪಿಸುವುದೂ ಅನಿವಾರ್ಯವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಏ. 27ಕ್ಕೂ ಮೊದಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದರೆ ಮುಷ್ಕರ ಕೈಬಿಡುತ್ತೇವೆ. ಅಥವಾ ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುತ್ತೇವೆ ಎಂದರು.64ಲಕ್ಷ ರೂಪಾಯಿ ಬಾಕಿ: ಸಂಸ್ಥೆಯ ಸಿಬ್ಬಂದಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಹಕಾರ ಸಂಘವನ್ನು ಸ್ಥಾಪಿಸಲಾಗಿತ್ತು. ಆ ಸಂಘ ಪ್ರಸಕ್ತ ವಾರ್ಷಿಕ 14 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಆದರೆ ಈಚಿನ ಕೆಲವು ತಿಂಗಳಿಂದ ಸಂಸ್ಥೆಯವರು ಸಿಬ್ಬಂದಿಯ ವೇತನದಿಂದ ಕಡಿತ ಮಾಡುವ ಹಣವನ್ನು ಸಹಕಾರ ಸಂಘಕ್ಕೆ ನೀಡುತ್ತಿಲ್ಲ. ಹೀಗೆ 64 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದೆ.ಅಧಿಕಾರಿಗಳ ಬಳಿ ಹೋಗಿ ಇದನ್ನು ಕೇಳಿದರೆ ಸಂಘದ ಅಧ್ಯಕ್ಷರನ್ನೇ ವರ್ಗಾವಣೆ ಮಾಡುವ, ಅವರ ವಿರುದ್ಧ ದೂರು ದಾಖಲಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ರಂಗೇಗೌಡ ಅವರು ನುಡಿದರು.ಯೂನಿಯನ್ ಅಧ್ಯಕ್ಷ ಡಿ.ಜೆ. ಶಿವನಂಜೇಗೌಡ, ಹನುಮಂತೇಗೌಡ, ಗಣೇಶ್, ದೇವರಾಜು ಹಾಗೂ ಚನ್ನಬಸಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.