ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ ವೈದ್ಯರ ನೇಮಕ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಇನ್ನು ಮೂರು ತಿಂಗಳಲ್ಲಿ ಭರ್ತಿ ಮಾಡುವುದಾಗಿ ಸರ್ಕಾರ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ. ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿಯನ್ನು ರೂಪಿಸಲಾಗಿದೆ. ಶೀಘ್ರದಲ್ಲಿ ನಿಯಮಕ್ಕೆ ಅಂತಿಮ ತಿದ್ದುಪಡಿ ಮಾಡಿ ನೇಮಕಾತಿ ನಡೆಸಲಾಗುವುದು ಎಂದು ಸರ್ಕಾರಿ ವಕೀಲರು ಕೋರ್ಟ್‌ಗೆ ತಿಳಿಸಿದರು.

ಎಲ್ಲ ರಾಜ್ಯಗಳಲ್ಲಿನ ಮಾನಸಿಕ ಆಸ್ಪತ್ರೆಗಳಲ್ಲಿ ಬಹಳಷ್ಟು ಸೌಲಭ್ಯಗಳು ಅಗತ್ಯ ಇರುವ ಬಗ್ಗೆ ಪ್ರಕರಣ ಒಂದರ ವಿಚಾರಣೆ ವೇಳೆ ಸುಪ್ರಿಂಕೋರ್ಟ್ 1996ರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದರ ಆಧಾರದ ಮೇಲೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸ್ವಯಂ ಪ್ರೇರಿತವಾಗಿ ಅದೇ ಸಾಲಿನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.

‘ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನದ ಮೇರೆಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 30 ಮಾನಸಿಕ ಆರೋಗ್ಯ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ’ ಎಂದು ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ, ಎಲ್ಲ ಘಟಕಗಳಿಗೂ ಅವಶ್ಯ ಇರುವಷ್ಟು ಔಷಧ ಪೂರೈಕೆ ಹಾಗೂ ಸಿಬ್ಬಂದಿ ನೇಮಕಾತಿ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಆದುದರಿಂದ ಮಾನಸಿಕ ಆರೋಗ್ಯ ಘಟಕಗಳಲ್ಲಿ ಸರಬರಾಜು ಆಗುತ್ತಿರುವ ಔಷಧಗಳ ಬಗ್ಗೆ ಅವರು ಸಂಪೂರ್ಣ ಮಾಹಿತಿ ಬಯಸಿದ್ದಾರೆ.

ಮಾನಸಿಕ ಆಸ್ಪತ್ರೆಗೆ ಮೂಳೆತಜ್ಞ!
ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾನಸಿಕ ಆಸ್ಪತ್ರೆಗೆ ಮೂಳೆ ತಜ್ಞರನ್ನು ನಿರ್ದೇಶಕರನ್ನಾಗಿ ಮಾಡಿರುವುದು ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಗಮನಕ್ಕೆ ಬಂತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು, ‘ಇದೆಂಥ ಸರ್ಕಾರ? ಮಾನಸಿಕ ಆಸ್ಪತ್ರೆಗೆ ಈ ವಿಷಯದಲ್ಲಿ ತಜ್ಞರಾಗಿರುವವರನ್ನು ನೇಮಕ ಮಾಡುವುದನ್ನು ಬಿಟ್ಟು ಯಾರನ್ನು ಮಾಡಲಾಗಿದೆ? ಇದನ್ನು ನೋಡಿದರೆ ಕಾನೂನು ಕಾಲೇಜಿಗೆ ಕನ್ನಡದ ಪಂಡಿತರನ್ನು ನೇಮಕ ಮಾಡಿದಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಸೌಲಭ್ಯ ಇದ್ದರೂ ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಿಲ್ಲದಿದ್ದರೆ ಹೀಗೆಯೇ ಆಗುವುದು ಎಂದ ಅವರು ಈ ನೇಮಕಾತಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳಿ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT