ಗುರುವಾರ , ಜನವರಿ 23, 2020
29 °C

30ಕ್ಕೆ ಬಿಎಸ್‌ವೈ ಬೆಂಬಲಿಗ ಶಾಸಕರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಶಾಸಕರು ಇದೇ 30 ಅಥವಾ ಅದಕ್ಕಿಂತ ಮೊದಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೆರೆಮರೆಯ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಬಿಜೆಪಿಯೊಳಗಿನ ಚಟುವಟಿಕೆಗಳು ಮತ್ತೆ ಗರಿಗೆದರುವ ಸೂಚನೆ ಇದೆ.ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ನಾಯಕ ಎಂದು ನಿರ್ಣಯಿಸಬೇಕು. ಆಗ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಯಡಿಯೂರಪ್ಪ ಅವರಿಗೆ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ ಎನ್ನುವುದು ಈ ಶಾಸಕರ ಯೋಜನೆಯಾಗಿದೆ.ಇದು ಸಾಧ್ಯವಾಗದಿದ್ದಲ್ಲಿ, ಬಜೆಟ್ ಮಂಡನೆಗೂ ಮುನ್ನವೇ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಆಲೋಚನೆಯೂ ಯಡಿಯೂರಪ್ಪ ಬೆಂಬಲಿಗ ಶಾಸಕರಿಗೆ ಇದೆ ಎನ್ನಲಾಗಿದೆ.ಆದರೆ ಸದಾನಂದ ಗೌಡರ ಪರ ಇರುವ ಬಿಜೆಪಿ ಶಾಸಕರು ಮತ್ತು ಸಚಿವರಿಗೆ ವಿಧಾನ ಮಂಡಲದ ಅಧಿವೇಶನ ಮುಗಿಯುವ ಮುನ್ನವೇ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರದಲ್ಲಿ ಒಲವಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬೆಂಬಲವೂ ಇವರಿಗೆ ಇದೆ ಎಂದು ಮೂಲಗಳು ತಿಳಿಸಿವೆ.ಬದಲಾವಣೆ ಇಲ್ಲ: ಈ ಮಧ್ಯೆ ಕಾಂಗ್ರೆಸ್ಸಿನಲ್ಲೂ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಪರ-ವಿರುದ್ಧ ನಿಲುವು ವ್ಯಕ್ತವಾಗತೊಡಗಿದೆ. ಈ ಕುರಿತ ಸಂದೇಹಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. `ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ವರಿಷ್ಠರಿಂದ ಸೂಚನೆ ಬಂದಿದೆ. ವಿಧಾನಸಭೆಗೆ ಚುನಾವಣೆ ನಡೆಯುವವರೆಗೆ ಪ್ರದೇಶ ಕಾಂಗ್ರೆಸ್ ಸಮಿತಿಯ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ~ ಎಂದು `ಪ್ರಜಾವಾಣಿ~ಯ ಜೊತೆ ಮಾತನಾಡಿದ ಅವರು ತಿಳಿಸಿದರು.`ನನ್ನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸಲಾಗುತ್ತದೆ ಎಂಬ ಮಾತುಗಳು ಸಂಪೂರ್ಣ ಆಧಾರರಹಿತ~ ಎಂದು ಅವರು ಹೇಳಿದರು.ಇದೇ ವೇಳೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಆಸ್ಟ್ರೇಲಿಯಾ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಅವರು ಪ್ರವಾಸ ಮೊಟಕುಗೊಳಿಸಿರುವುದರ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ. ಆರೋಗ್ಯದ ಸಮಸ್ಯೆಯ ಕಾರಣದಿಂದಾಗಿ ಅವರು ಮರಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪೂರ್ವನಿಗದಯಂತೆ ಅವರು ಇದೇ 29ರಂದು ಬೆಂಗಳೂರಿಗೆ ಮರಳಬೇಕಿತ್ತು.ಕಾಂಗ್ರೆಸ್‌ನಿಂದ ಎನ್‌ಸಿಪಿಗೆ?: ಕಾಂಗ್ರೆಸ್ ಶಾಸಕರಾದ ಮಾಲೀಕಯ್ಯ  ಗುತ್ತೇದಾರ್, ಬಿ.ಸಿ. ಪಾಟೀಲ್ ಅವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿದ್ದು, ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಪಕ್ಷದಿಂದ ತಕ್ಷಣ ಹೊರ ಹೋಗುವ ಸಾಧ್ಯತೆ ಇಲ್ಲ. ಒತ್ತಡ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಅಷ್ಟೆ ಎಂದು ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)