ಗುರುವಾರ , ಮಾರ್ಚ್ 4, 2021
29 °C

30 ದಿನದಲ್ಲಿ ಎತ್ತಿನಹೊಳೆ ಕಾಮಗಾರಿ ಆರಂಭ:ವೀರಪ್ಪ ಮೊಯಿಲಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

30 ದಿನದಲ್ಲಿ ಎತ್ತಿನಹೊಳೆ ಕಾಮಗಾರಿ ಆರಂಭ:ವೀರಪ್ಪ ಮೊಯಿಲಿ ಭರವಸೆ

ದೊಡ್ಡಬಳ್ಳಾಪುರ: ಮುಂದಿನ 30 ತಿಂಗಳಲ್ಲಿ ಎತ್ತಿನ ಹೊಳೆ ಯೋಜನೆಯ ಸಂಪೂರ್ಣ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರದ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.ನಗರದ ಬೆಸೆಂಟ್ ಪಾರ್ಕ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಾಗಿ ಏರ್ಪಡಿಸಲಾಗಿದ್ದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಜನೆಯ ಸಮಗ್ರ ಚರ್ಚೆಗೆ ಏಪ್ರಿಲ್ 10ರಂದು ಸಭೆ ಕರೆಯಲಾಗಿದೆ ಎಂದರು.ಯೋಜನೆಯ ಸಾಧಕ ಬಾಧಕಗಳನ್ನು ಮುಖ್ಯಮಂತ್ರಿ, ನೀರಾವರಿ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ನೀರಾವರಿ ತಜ್ಞರೊಡನೆ ಚರ್ಚಿಸಿ ತಾಂತ್ರಿಕ ಒಪ್ಪಿಗೆ ಪಡೆಯಲಾಗಿದೆ. ಯೋಜನೆಯಿಂದ ಈ ಪ್ರದೇಶದ ಜನರಿಗೆ 25 ಟಿಎಂಸಿ ನೀರು ದೊರೆಯಲಿದ್ದು ಇದಕ್ಕೆ  80 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ.

ಸಂಸದರ ನಿಧಿಯಿಂದ 5 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು ಎಂದು ಹೇಳಿದರು.ಕೃಷ್ಣ ನದಿ ನೀರಾವರಿ ಯೋಜನೆಗೆ 45 ವರ್ಷ ಕಾಯಬೇಕಾಯಿತು. ಕಾವೇರಿ ನದಿ ಯೋಜನೆಗೆ 40 ವರ್ಷ ಬೇಕಾಯಿತು. ಅಂತೆಯೇ ಡಾ.ಪರಮಶಿವಯ್ಯನವರ ವರದಿಯನ್ನು ಪೂರ್ಣ ಅನುಷ್ಠಾನಗೊಳಿಸಲು ನಾಲ್ಕು ದಶಕಗಳೇ ಬೇಕು ಎಂದ ಹೇಳಿದ ಸಚಿವರು ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿರುವ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಗೆ ಹೊಸ ಪ್ರಸ್ತಾವನೆ ಕಳುಹಿಸಿದರೆ ಮಂಜೂರು ಮಾಡಿಸಲು ಅಗತ್ಯ  ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ವೇದಿಕೆಯಲ್ಲಿದ್ದ ಶಾಸಕರು, ಗಣ್ಯರಿಗೆ ಬೇವು-ಬೆಲ್ಲ ವಿತರಣೆ ಮಾಡುವ ಮೂಲಕ ಮೊಯಿಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಕೆಪಿಸಿಸಿ ಕಾರ್ಯದರ್ಶಿ ಬಾವ, ಶಾಸಕರಾದ ಎಂ.ವೆಂಕಟಸ್ವಾಮಿ, ಎನ್.ಸಂಪಂಗಿ, ಎನ್. ಎಚ್.ಶಿವಶಂಕರರೆಡ್ಡಿ, ಮಾಜಿ ಸಚಿವ ಆಂಜಿನಮೂರ್ತಿ, ಮಾಜಿ ಶಾಸಕ ವಿ.ಕೃಷ್ಣಪ್ಪ, ನಾಗರಾಜ್, ಆಂಜಿನಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಚ್ಚೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ ಎಸ್.ಸಿ.ಘಟಕದ ಚಿನ್ನಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣ ಗೌಡ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ನಗರ ಬ್ಲಾಕ್ ಅಧ್ಯಕ್ಷ ತಿ.ರಂಗರಾಜು, ಕಾರ್ಯದರ್ಶಿ ಡಿ.ವಿ.ಅಶ್ವತ್ಥಪ್ಪ, ಕಾಂಗ್ರೆಸ್ ಎಸ್.ಸಿ, ಎಸ್‌ಟಿ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜಿ.ನಾಗೇಶ್, ನಗರ ಘಟಕದ ಅಧ್ಯಕ್ಷ ಬಿ.ಮುನಿರಾಜು ಮತ್ತಿತರರು  ಹಾಜರಿದ್ದರು.ಟೀಕಾ ಪ್ರಹಾರಬರದ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕುರಿತು ಡಾ.ಪರಮಶಿವಯ್ಯ ಅವರು ನೀಡಿರುವ ವರದಿಯ ಬಗ್ಗೆ ಅಧಿಕಾರದಲ್ಲಿದ್ದಾಗ ಮಾತನಾಡದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಇಲ್ಲದಾಗ ಪರಮಶಿವಯ್ಯ ವರದಿಯ ನೆನಪಾಗಿದೆ. ಕುಮಾರಸ್ವಾಮಿ ಈ ವಿಷಯದಲ್ಲಿ ಜನರಿಗೆ ಮೋಸಮಾಡಲು ಹೊರಟಿದ್ದಾರೆ ಎಂದು ವೀರಪ್ಪ ಮೊಯಿಲಿ ಟೀಕಾ ಪ್ರಹಾರ ನಡೆಸಿದರು.ಕೇವಲ ಒಂದೂವರೆ ವರ್ಷ ಆಡಳಿತ ನಡೆಸಿರುವ ಕುಮಾರಸ್ವಾಮಿ ಅವರಿಗೆ ಅನುಭವದ ಕೊರತೆ ಇದೆ. ಹೀಗಾಗಿಯೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. 40 ವರ್ಷಗಳ ಕಾಲ ರಾಜ್ಯವೂ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಎತ್ತಿನ ಹೊಳೆ ಯೋಜನೆ ಬಗ್ಗೆ ಯಾರ ಎಷ್ಟೆಲ್ಲಾ ಟೀಕೆ ಮಾಡುತ್ತಾರೆ ಎಂಬುದನ್ನು ನೋಡಿದ್ದೇನೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.