ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30x40 ನಿವೇಶನದಲ್ಲಿ ಅದ್ದೂರಿ ಮನೆ!

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ಕನಸು.... 1..2...3...ಇದು ಕನಸಿನ ಕೌಂಟ್‌ಡೌನ್ ಅಲ್ಲ. ಬೆಂಗಳೂರಿನಲ್ಲಿ ಎಂ.ಎಸ್.ರಾಮಯ್ಯ ಎನ್‌ಕ್ಲೇವ್(ಬಡಾವಣೆ), 3ನೇ ಕ್ರಾಸ್, ನಾಗಸಂದ್ರ ಅಂಚೆ ವಿಳಾಸದಲ್ಲಿನ ಮನೆಯೊಂದರ ಹೆಸರು ಮತ್ತು ಡೋರ್ ನಂಬರ್!

ಆ ಮನೆಯ ಮೂವರು ಸದಸ್ಯರಿಗೂ `ಸ್ವಂತ ಮನೆ~ ಹೀಗಿರಬೇಕು, ಹಾಗಿರಬೇಕು ಎಂದು ಅಪಾರ ಕನಸುಗಳಿದ್ದವು. ಕಡೆಗೆ ಅವರ ಎಲ್ಲ ಕನಸುಗಳೂ ಆ 30 x 40 ಅಡಿ ಉದ್ದ-ಅಗಲದ ನಿವೇಶನದಲ್ಲಿ ನನಸಾದವು. ಹಾಗಿದ್ದೂ ಅವರು ಆ ಮನೆಗೆ `ಕನಸು~ ಎಂದೇ ಹೆಸರಿಟ್ಟರು.

ಆದರೆ, ಆ ಮನೆ ನಿರ್ಮಾಣಕ್ಕೂ ಮುನ್ನವೇ ನಿವೇಶನಕ್ಕೆ 123 ಎಂಬ ಸಂಖ್ಯೆ ಬಂದಿತ್ತು. ಅದು ಆ ಮನೆಯಲ್ಲಿ ವಾಸಿಸುವವರ (ಮೂರು ಮಂದಿ) ಸಂಖ್ಯೆಯನ್ನೂ ನಿರ್ಧರಿಸಿದಂತೆ ಇದ್ದುದು ಮಾತ್ರ ಕಾಕತಾಳೀಯ!

ರಸ್ತೆಯಿಂದ ಒಂದೂವರೆ ಅಡಿಯಷ್ಟು ಕೆಳಕ್ಕಿಳಿದರೆ(ಸೆಲ್ಲಾರ್) ಟಾಟಾ ಸುಮೊಗಿಂತ ದೊಡ್ಡ ಎಸ್‌ಯುವಿ(ವ್ಯಾನ್) ನಿಲ್ಲಿಸಿಯೂ ಪಕ್ಕದಲ್ಲಿ ಎರಡು ಮೋಟಾರ್ ಬೈಕ್ ನಿಲ್ಲಿಸಲು ಸಾಧ್ಯವಾಗುವಷ್ಟು ಅಳತೆಯ ಪಾರ್ಕಿಂಗ್(12x 18ಅಡಿ). ಅದರ ಮಗ್ಗಲಲ್ಲೇ ಮನೆಯೊಡೆಯ ದೇವರಾಜ್ ಅವರ ಪುಟ್ಟ(9x11 ಅಡಿ ಉದ್ದಗಲ) ವಾತಾನುಕೂಲಿತ ಕಚೇರಿ.
 
ಅದರ ಪಕ್ಕದಲ್ಲಿಯೇ ನೆಲದಡಿ ದೊಡx ನೀರಿನ ಸಂಗ್ರಹಾಗಾರ. ಅದರ ಮೇಲ್ಭಾಗದ 14x 20 ಅಡಿ ಜಾಗ ವ್ಯರ್ಥವಾಗದಂತೆ ವಿಸ್ತಾರವಾದ ಹೋಂ ಥಿಯೇಟರ್. ಪ್ರೊಜೆಕ್ಟರ್ ಇರುವ 35ಎಂಎಂ ಸ್ಕ್ರೀನ್. ಇದೂ ಸಹ ವಾತಾನಕೂಲಿತ. ಇದೆಲ್ಲದರ ಜತೆಗೆ ಅಲ್ಲೊಂದು ಪುಟ್ಟ ಸರ್ವೆಂಟ್ ರೂಮ್(10x 10 ಅಡಿ) ಮತ್ತು ಪುಟ್ಟ ಶೌಚಗೃಹ.

ಮನೆಯ ಎಡಪಾರ್ಶ್ವದಲ್ಲಿರುವ 14 ಮೆಟ್ಟಿಲು ಏರಿದರೆ ಮುಖ್ಯ ಬಾಗಿಲು. ಆದರೆ, ಅಲ್ಲಿ ಮೂರಡಿಯ ದಡಿಯ `ಚಿಂಟು~ (ಶ್ವಾನ) ಕಾವಲು. ಅದೂ ಸಾಲದೆಂಬಂತೆ `ಅತ್ಯಾಧುನಿಕ ಕಣ್ಗಾವಲು ಕ್ಯಾಮೆರಾ~ ಸಹ ಜೋಡಿಸಲಾಗಿದೆ.

ಸೆಲ್ಲಾರ್ ಮೂಲಕವೂ ಮನೆ ಪ್ರವೇಶಿಸಬಹುದು. ಅಲ್ಲಿ ಶಂಕುವಿನ ಆಕಾರದಲ್ಲಿ ಸುತ್ತಿಕೊಂಡಂತೆ ಇರುವ ಮೂರೂಕಾಲು ಅಡಿ ಅಗಲದ (ಎಲೆಕ್ಟೀವ್ ಸ್ಟೇರ್‌ಕೇಸ್) ಮೆಟ್ಟಿಲುಗಳ ಸಾಲು. ಈ ಮೆಟ್ಟಿಲಿನ ಪಕ್ಕದ ಗೋಡೆ ಪೂರ್ಣ ಗಾಜಿನ ಇಟ್ಟಿಗೆಗಳಿಂದ ಕಟ್ಟಿರುವುದರಿಂದ ಮನೆಯೊಳಕ್ಕೆ ದಾರಾಳ ಬೆಳಕು.

ಈ `ಎಲೆಕ್ಟೀವ್ ಸ್ಟೇರ್‌ಕೇಸ್~ ಮಾಮೂಲಿ ಮಹಡಿ ಮೆಟ್ಟಿಲುಗಳಿಗಿಂತ  ಹೆಚ್ಚು ಜಾಗ ಆಕ್ರಮಿಸಿಕೊಳ್ಳುತ್ತದೆ. ಆದರೆ, ಮೆಟ್ಟಿಲುಗಳನ್ನು ಏರುವುದು ಬಹಳ ಸುಲಭ. ಮೆಟ್ಟಿಲೇರಿದ ಶ್ರಮ ಕಾಣುವುದಿಲ್ಲ.

ಸೆಲ್ಲಾರ್‌ನಿಂದ ಮೇಲೇರಿದರೆ ನೆಲಮಹಡಿ. ಇಲ್ಲಿ ಹಜಾರ(ದೊಡx ಹಾಲ್(20x13 ಅಡಿ), ಶೌಚಾಲಯವನ್ನೊಳಗೊಂಡ ಅತಿಥಿ ಕೊಠಡಿ, ವಿಶಾಲವಾದ ಡೈನಿಂಗ್ ಹಾಲ್, ಜತೆಗೆ ಓಪನ್ ಕಿಚನ್(ಎರಡೂ ಸೇರಿ 25x12 ಅಡಿ). ಒಂದೆಡೆಗೆ ದೇವರಕೋಣೆ(5.5x 5 ಅಡಿ). ಕಿಚನ್ ಪಕ್ಕದ ಬಾಗಿಲು ತೆರೆದರೆ ಪಾತ್ರೆ ತೊಳೆಯಲು, ಬಟ್ಟೆ ಒಣಗಿಸಲು 5x 20 ಅಡಿ ಉದ್ದಗಲದ ಯುಟಿಲಿಟಿ.

ಮತ್ತೆ ಅದೇ ಶಂಕುವಿನಾಕಾರದ ಮೆಟ್ಟಿಲುಗಳನ್ನು ಮೇಲೇರಿದರೆ ಮೊದಲ ಮಹಡಿ. ಅಲ್ಲಿ ಎರಡು ಸುವಿಶಾಲ ಕೊಠಡಿಗಳು. ಅದರಲ್ಲೊಂದು 14x20 ಅಡಿ ಅಳತೆಯ ದೊಡx ಮಾಸ್ಟರ್ ಬೆಡ್‌ರೂಂ. ಅದಕ್ಕೆ ಬಾತ್‌ರೂಂ ಮತ್ತು ಡ್ರೆಸ್ಸಿಂಗ್ ರೂಂ ಅಟಾಚ್ ಆಗಿದೆ. ಇನ್ನೊಂದು ರೂಂ ಸಹ 12x20 ಅಡಿ ವಿಸ್ತಾರವಾಗಿದೆ.

ಅದಕ್ಕೂ ಬಾತ್‌ರೂಂ ಮತ್ತು ಡ್ರೆಸ್ಸಿಂಗ್ ರೂಂ ಅಟಾಚ್ ಆಗಿದೆ. ಎರಡೂ ಕೊಠಡಿಗಳಿಗೂ ತುಸು ದೊಡxದೇ ಆದ ಬಾಲ್ಕನಿ ಇರುವುದು ವಿಶೇಷ. ಇಲ್ಲಿನ ಮತ್ತೊಂದು ಗಮನಾರ್ಹ ಸಂಗತಿ ಎಂದರೆ, 10 ಅಡಿ ಅಂತರದಲ್ಲಿರುವ ಎರಡೂ ಕೊಠಡಿಗಳ ಬಾಗಿಲ ನಡುವಿನ ಮರದ ಹಲಗೆಗಳ ಸೇತುವೆ!

ಇಲ್ಲಿಂದ ಎರಡನೇ ಮಹಡಿಗೆ ಸಾಗಿದರೆ ಅಲ್ಲಿರುವುದು ಸುಸಜ್ಜಿತ ಅತ್ಯಾಧುನಿಕ ವ್ಯಾಯಾಮಶಾಲೆ. ಕಸರತ್ತು ಮಾಡಿ ಬೆವರು ಸುರಿಸಿದರೆ ದೇಹದ ಆರೈಕೆಗೆ ಪಕ್ಕದಲ್ಲಿಯೇ ಮತ್ತೊಂದು ಶೌಚಗೃಹ(ಬಾತ್ ಟಬ್ ಸಹಿತ). ಈ ಮಹಡಿಯಲ್ಲಿನ ಉಳಿದ ಜಾಗ ಟೆರೇಸ್‌ಗೆ ಮೀಸಲು.

ದೇವರಾಜ್-ಜಮುನ-ಪ್ರಜ್ಚಲ್ ಅವರ ಮನೆ `ಕನಸು~ ಕುಟುಂಬದವರ ಎಲ್ಲ ಕನಸುಗಳನ್ನೂ ವಾಸ್ತವಕ್ಕಿಳಿಸಿದೆ. ಅವರ ಎಲ್ಲ ಅಗತ್ಯಗಳನ್ನೂ ಈಡೇರಿಸುವಂತಿದೆ. ಹಾಗಾಗಿಯೇ ಬರೋಬ್ಬರಿ 32 ಚದರದಲ್ಲಿ ಹರಡಿಕೊಂಡಿದೆ.

ಒಂದು 30x40 ಅಡಿಯ ನಿವೇಶನದಲ್ಲಿ ಹಾಲ್, ಎರಡು ರೂಂ. ಅಡುಗೆ ಕೋಣೆ ಇರುವ ಸಾಮಾನ್ಯ `ಮಾದರಿ~ ಮನೆಯನ್ನೂ ಒಂದು ಮಿತಿಯಾದ ಬಜೆಟ್‌ನಲ್ಲಿ ಕಟ್ಟಬಹುದು.  ಅದ್ದೂರಿ ಮನೆಯನ್ನೂ ನಿರ್ಮಿಸಿಕೊಳ್ಳಬಹುದು.

ಆಸೆಗಳು, ಬೇಡಿಕೆಗಳು 50x 80 ಅಡಿ ಉದ್ದಗಲ ನಿವೇಶನದಷ್ಟು ದೊಡxದಾಗಿವೆ. ಆದರೆ, ನಿವೇಶನ ಮಾತ್ರ 30x 40 ಅಡಿಯಷ್ಟು ಚಿಕ್ಕದಿದೆ, ಏನು ಮಾಡುವುದು ಎಂದು ಕೊರಗಬೇಕಿಲ್ಲ. ಆ 1200 ಚದರಡಿ ಜಾಗದಲ್ಲಿಯೇ ಎಲ್ಲ ಕನಸುಗಳನ್ನೂ ನನಸಾಗಿಸಿಕೊಳ್ಳುವಂತಹ ಸುವಿಶಾಲವಾದ, ಎಲ್ಲ ಆಧುನಿಕ ಸೌಲಭ್ಯಗಳೂ ಇರುವ ಮನೆಯನ್ನು ನಿರ್ಮಿಸಬಹುದು. ಅದಕ್ಕೆ `ಕನಸು-123~ ಗೃಹವೇ ಸಾಕ್ಷಿ.

(ರಾಧಾ ರವಣಂ ಮೊ: 98453 93580)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT