ಮಂಗಳವಾರ, ಮೇ 18, 2021
22 °C

34ಮಂದಿಗೆ ಡೆಂಗೆ, 48 ಮಂದಿಗೆ ಮಲೇರಿಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೇಂದ್ರ ಸ್ಥಾನವಾದ ಬಿ.ಸಿ.ರೋಡ್‌ನ ಪ್ರಮುಖ ವೃತ್ತದಲ್ಲಿನ  ತ್ಯಾಜ್ಯದಿಂದಾಗಿ  ಸ್ಥಳೀಯ ಜನತೆ ಮತ್ತು ವಾಹನ ಸವಾರರು ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತ್ತಿದ್ದಾರೆ.ಕಳೆದ ವರ್ಷ ಇಲ್ಲಿಗೆ ಸಮೀಪದ ಜುಮಾದಿಗುಡ್ಡೆ ಎಂಬಲ್ಲಿ ಒಂದೇ ಮನೆಯ ಇಬ್ಬರು ಸಹೋದರರು `ಇಲಿಜ್ವರ'ದಿಂದ ಸಾವನ್ನಪ್ಪಿದ ಘಟನೆ ಇನ್ನೂ ಜನರ ಮನಸ್ಸಿನಿಂದ ಮರೆತಿಲ್ಲ. ಇದೀಗ ತಾಲ್ಲೂಕಿನಲ್ಲಿ ಮುಂಗಾರು ಮಳೆ ಆರಂಭಗೊಳ್ಳುತ್ತಿದ್ದಂತೆಯೇ ಒಟ್ಟು 34 ಮಂದಿ ಶಂಕಿತ ಡೆಂಗೆ ಜ್ವರ ಪೀಡಿತರ ಪೈಕಿ 18 ಮಂದಿಗೆ ಡೆಂಗೆ ದೃಢಪಟ್ಟಿದೆ. ಇನ್ನೊಂದೆಡೆ ಒಟ್ಟು 48 ಮಂದಿ ಮಲೇರಿಯಾ ಜ್ವರಕ್ಕೆ ತುತ್ತಾಗಿರುವುದು ಇಲ್ಲಿನ ಜನರನ್ನು ಮತ್ತಷ್ಟು ಕಂಗೆಡಿಸಿದೆ. ತಾಲ್ಲೂಕಿನ ಸರಪಾಡಿ-ಶಂಭೂರು ಗ್ರಾಮಕ್ಕೆ ಅಡ್ಡವಾಗಿ ನೇತ್ರಾವತಿ ನದಿಯಲ್ಲಿ ಅಣೆಕಟ್ಟೆ ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಮೂಲಕ ಲಾಭ ಗಳಿಸುತ್ತಿರುವ ಆಂಧ್ರ ಮೂಲದ ಎಎಂಆರ್ ಮತ್ತು ಋತ್ವಿಕ್ ಕಿರು ಜಲ ವಿದ್ಯುತ್ ಘಟಕ ಸಮೀಪದಲ್ಲಿರುವ ನಾವೂರ ಮತ್ತು ದೈವಸ್ಥಳ ಸರಕಾರಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಇಂತಹ ಪ್ರಕರಣಗಳು ಪ್ರಥಮವಾಗಿ ಕಂಡು ಬರುತ್ತಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.ಇದೀಗ ನಾವೂರು-1, ರಾಯಿ-1, ಪಂಜಿಕಲ್ಲು-2, ದೈವಸ್ಥಳ-2, ಕಲ್ಲಡ್ಕ-1, ವಾಮದಪದವು-1, ಪುದು-3, ಸಜಿಪನಡು-3, ಕನ್ಯಾನ-2 , ಬಂಟ್ವಾಳ-2 ಹೀಗೆ ಒಟ್ಟು 18 ಮಂದಿ ಡೆಂಗೆ ಜ್ವರಪೀಡಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.ತಾಲ್ಲೂಕಿನ ವಾಮದಪದವು ಮತ್ತು ವಿಟ್ಲದಲ್ಲಿ ಎರಡು ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು 19 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ `ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ಮಾಹಿತಿ ಶಿಬಿರ' ನಡೆಸಲಾಗಿದೆ. ಡೆಂಗೆ ಮತ್ತು ಮಲೇರಿಯಾ ಜ್ವರಪೀಡಿತ ಪ್ರದೇಶಗಳಲ್ಲಿ ಫಾಗಿಂಗ್ ಮಾಡಲಾಗಿದ್ದು, ಜನಜಾಗೃತಿ ಕರಪತ್ರ ವಿತರಿಸಲಾಗಿದೆ. ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕೂಡಾ ಈ ಬಗ್ಗೆ `ಆರೋಗ್ಯ ಶಿಕ್ಷಣ' ಎಂಬ ಮಾಹಿತಿ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್ ತ್ಯಾಜ್ಯ ರಾಶಿಗೆ ಶಾಶ್ವತ ಮುಕ್ತಿ ಕಾಣಿಸುವುದರ  ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಮತ್ತಷ್ಟು ಹೆಚ್ಚಿನ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆ ನೀಗಿಸುವ ಅನಿವಾರ್ಯತೆ ಸ್ವತಃ ಜಿಲ್ಲೆಯವರೇ ಆಗಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಮೇಲಿದೆ. ಸ್ವತಃ ಪರಿಸರ ಖಾತೆ ಹೊಂದಿರುವ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಪ್ರಮಾಣ ವಚನ ಸ್ವೀಕರಿಸಿ ಬೆಂಗಳೂರಿನಿಂದ ವಾಪಾಸಾಗುತ್ತಿದ್ದಂತೆಯೇ ಬಿ.ಸಿ.ರೋಡ್‌ನಲ್ಲಿ ತ್ಯಾಜ್ಯ ರಾಶಿಯನ್ನು  ತರಾತುರಿಯಲ್ಲಿ ವಿಲೇವಾರಿ ಮಾಡಿರುವ ಪುರಸಭೆ ಬಳಿಕ ಮೇಲ್ಭಾಗಕ್ಕೆ ಜೆಸಿಬಿ ಮೂಲಕ ಮಣ್ಣು ಹಾಕಿ ಮರೆಮಾಚಿತ್ತು. ಈ ಹಿಂದೆ ಬಂಟ್ವಾಳ ಪುರಸಭೆ ವತಿಯಿಂದ ಸಜಿಪನಡು ಗ್ರಾಮದ ಕಂಚಿನಡ್ಕ ಎಂಬಲ್ಲಿ ಆರಂಭಿಸಲು ಉದ್ದೇಶಿಸಿದ್ದ ತ್ಯಾಜ್ಯ ಸಂಸ್ಕರಣಾ ಘಟಕವು `ರಾಜಕೀಯ' ಪ್ರವೇಶದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.