ಬುಧವಾರ, ಏಪ್ರಿಲ್ 14, 2021
24 °C

371 ನೇ ಕಲಂ ತಿದ್ದುಪಡಿ: ವಿಜಾಪುರ ಜಿಲ್ಲೆ ಸೇರ್ಪಡೆ:ಸಿಎಂ ಹೇಳಿಕೆ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371 ನೇ ಕಲಂ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಲ್ಲಿ ವಿಜಾಪುರ ಸೇರ್ಪಡೆ ಕುರಿತು ಸಿಎಂ ಜಗದೀಶ ಶೆಟ್ಟರ ನೀಡಿರುವ ಹೇಳಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಅಧ್ಯಕ್ಷ ಶರಣು ಗದ್ದುಗೆ ಒತ್ತಾಯಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಜನರು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಇದೀಗ ಅದಕ್ಕೆ ಪ್ರತಿಫಲ ದೊರೆಯುವ ಸಮಯ ಬಂದಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಇಂತಹ ಗೊಂದಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ವಿಜಾಪುರ, ಬಾಗಲಕೋಟೆ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ಸಂವಿಧಾನದ 371 ನೇ ಕಲಂ ತಿದ್ದುಪಡಿ ತರುವ ಮೂಲಕ ವಿಶೇಷ ಸ್ಥಾನ ಮಾನ ಕಲ್ಪಿಸಲಾಗುತ್ತಿದೆ. ಇದೀಗ ವಿಜಾಪುರ ಜಿಲ್ಲೆಯ ಸೇರ್ಪಡೆ ಮಾಡಲು ಹೊರಟರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲೆಯ ಇಬ್ಬರು ವೀರ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ, ಹುತಾತ್ಮರಾಗಿದ್ದಾರೆ. ಆದರೆ, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಂತಹ ವೀರರ ಸ್ಮರಣೆ ಮಾಡದೇ ಇರುವುದು ಜಿಲ್ಲಾಡಳಿತದ ದೊಡ್ಡ ಲೋಪ. ಕೂಡಲೇ ಈ ವೀರರ ಸ್ಮರಣೆಗಾಗಿ ಮತ್ತೊಮ್ಮೆ ಕಾರ್ಯಕ್ರಮ ಏರ್ಪಡಿಸಬೇಕು. ಅವರ ಕುಟುಂಬದವರನ್ನು ಕರೆದು ಗೌರವಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಈಗಲೂ ಹಲವಾರು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಕರವೇ ಹಲವು ಹೋರಾಟಗಳನ್ನು ಮಾಡಿದೆ. ಆದರೆ ಸರ್ಕಾರ, ಜಿಲ್ಲಾಡಳಿತ ಯಾವುದೇ ಗಮನ ನೀಡುತ್ತಿಲ್ಲ. ದೋರನಳ್ಳಿ ಹಾಲು ಶಿಥಿಲೀಕರಣ ಘಟಕದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಹಾಲು ಒಕ್ಕೂಟ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ವಾಸ್ತು ವಿದ್ವಾನ್ ಅಯ್ಯಣ್ಣಗೌಡ ಪಾಟೀಲರ ಸಂಕಲ್ಪದಂತೆ ನಾಡಿನಲ್ಲಿ ಉತ್ತಮ ಮಳೆ, ಬೆಳೆ ಹಾಗೂ ಸರ್ವತೋಮುಖ ಪ್ರಗತಿಗಾಗಿ ಪ್ರಾರ್ಥಿಸಿ, 1008 ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮವನ್ನು ಕನ್ನಡ ಮಠವೆಂದೇ ಖ್ಯಾತವಾಗಿರುವ ಶಹಾಪುರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಈ ದೇಶದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವಿದೆ. ಭಾರತಾಂಬೆ, ಕನ್ನಡಾಂಬೆಯ ಮಕ್ಕಳಾದ ನಾವು, ಈ ನಾಡಿನ ಹೆಣ್ಣುಮಕ್ಕಳನ್ನು ಗೌರವಿಸುವ ಮೂಲಕ ಈ ನಾಡಿಗೆ ಒಳ್ಳೆಯದನ್ನು ಮಾಡುವಂತೆ ದೇವರನ್ನು ಪ್ರಾರ್ಥಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಇದೇ ಸಂದರ್ಭದಲ್ಲಿ ಬಸವಯ್ಯ ಶರಣರ ರುದ್ರಾಕ್ಷಿ ತುಲಾಭಾರ ನಡೆಯಲಿದೆ ಎಂದು ತಿಳಿಸಿದರು.ಚನ್ನವೀರ ಶಿವಾಚಾರ್ಯರು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಬಸವಯ್ಯ ಶರಣರು ನೇತೃತ್ವ ವಹಿಸಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಅಯ್ಯಣ್ಣಗೌಡ ಪಾಟೀಲ, ದೇವು ಪಾಟೀಲ, ಸಿದ್ಧು ರಡ್ಡಿ, ವೆಂಕಟೇಶ ಬೋನೇರ್, ಮಹೇಶ ಸುಬೇದಾರ, ಸುಜ್ಞಾನ ಮುಂತಾದವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.