ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ನಿಮಿಷಗಳಲ್ಲಿ ದುರ್ಗಾಶಕ್ತಿ ಅಮಾನತು: ವಿಡಿಯೋದಲ್ಲಿ ಎಸ್ ಪಿ. ನಾಯಕ ಭಾಟಿ

Last Updated 2 ಆಗಸ್ಟ್ 2013, 9:58 IST
ಅಕ್ಷರ ಗಾತ್ರ

ಲಖನೌ (ಐಎಎನ್ಎಸ್):  ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು 'ಕೇವಲ 41 ನಿಮಿಗಳಲ್ಲಿ' ಅಮಾನತುಗೊಳ್ಳುವಂತೆ ಮಾಡಿದ್ದೇನೆ ಎಂಬುದಾಗಿ ಸಮಾಜವಾದಿ ಪಕ್ಷದ (ಎಸ್ ಪಿ) ಹಿರಿಯ  ನಾಯಕ  ಪ್ರತಿಪಾದಿಸಿದ್ದನ್ನು ತೋರಿಸುವ ವಿಡಿಯೋ ಒಂದು ಶುಕ್ರವಾರ ವಿವಾದ ಹುಟ್ಟು ಹಾಕಿದ್ದು, ಉತ್ತರ ಪ್ರದೇಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅಧಿಕಾರಿಯ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ನಿಲುವನ್ನು ದೃಢಪಡಿಸಿದ ಸ್ವಲ್ಪ ಹೊತ್ತಿನಲ್ಲೇ ಈ ವಿಡಿಯೋ ಪ್ರಸಾರಗೊಂಡಿದೆ ಮಹಿಳಾ ಅಧಿಕಾರಿಗೆ ನೀಡಿದ ಆದೇಶವನ್ನು ರದ್ದು ಪಡಿಸುವ ಪ್ರಶ್ನೆಯೇ ಇಲ್ಲ ಎಂದು ಯಾದವ್ ಸ್ಪಷ್ಟ ಪಡಿಸಿದ್ದರು.

ರಾಜ್ಯದಲ್ಲಿ ಸಚಿವ ಸ್ಥಾನ ಮಾನ ಹೊಂದಿದ ಕೃಷಿ ಮಂಡಳಿ ಅಧ್ಯಕ್ಷ ನರೇಂದ್ರ ಭಾಟಿ ಅವರು ಗ್ರೇಟರ್ ನೋಯ್ಡಾದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಾ ತಾನು ಮುಖ್ಯಮಂತ್ರಿ ಮತ್ತು ಪಕ್ಷದ  ಮುಖ್ಯಸ್ಥ ಮುಲಯಂ ಸಿಂಗ್ ಯಾದವ್ ಅವರಿಗೆ ಬೆಳಿಗ್ಗೆ 10.30ರ ಸುಮಾರಿಗೆ ದೂರವಾಣಿ ಮಾಡಿದ್ದು, 11.11ರ ವೇಳೆಗೆ ನಾಗಪಾಲ್ ಅವರಿಗೆ ಅಮಾನತು ಆದೇಶ ನೀಡಲಾಯಿತು ಎಂದು ಹೇಳಿಕೊಂಡದ್ದು ಈ ವಿಡಿಯೋದಲ್ಲಿ ದಾಖಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೋಯ್ಡಾದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ನರೇಂದ್ರ ಭಾಟಿ 'ಪ್ರಜಾಪ್ರಭುತ್ವದ ಶಕ್ತಿಯನ್ನು ನಾನು ತೋರಿಸಿದ್ದೇನೆ' ಎಂಬುದಾಗಿ ಹೇಳಿದ್ದೂ ಈ ವಿಡಿಯೋದಲ್ಲಿ ಇದೆ.

ಕಳೆದ ವಾರ ನಾಗಪಾಲ್ ಅವರ ಅಮಾನತು ಆದ ದಿನದಿಂದಲೂ ಭಾಟಿ ಅವರು ವಿವಾದದ ಸುಳಿಯಲ್ಲೇ ಇದ್ದಾರೆ. ಮರಳು ಮಾಫಿಯಾ ಒತ್ತಡಕ್ಕೆ ಒಳಗಾಗಿ ಭಾಟಿ ಅವರು ನಾಗಪಾಲ್ ಅವರನ್ನು ಅಮಾನತು ಮಾಡಿಸಿದ್ದಾರೆ ಎಂಬ ಆರೋಪ ನಿರಂತರ ಕೇಳಿ ಬಂದಿತ್ತು. ನಾಗಪಾಲ್ ಅವರು ಮರಳು ಮಾಫಿಯಾ ವಿರುದ್ಧ ದಿಟ್ಟ ನಿಲುವು ತಾಳಿದ್ದುದು ಇದಕ್ಕೆ ಕಾರಣವಾಗಿತ್ತು.

ಭಾಟಿ ಅವರು ಮರಳು ಮಾಫಿಯಾ ಜೊತೆ ಷಾಮೀಲಾಗಿದ್ದಾರೆ ಎಂದು ನೋಯ್ಡಾದ ಬಿಜೆಪಿ ಶಾಸಕ ಮಹೇಶ ಶರ್ಮಾ ಆಪಾದಿಸಿದ್ದು, ಮರಳು ಮಾಫಿಯಾ ಜೊತೆಗೆ ಭಾಟಿ ಸಂಪರ್ಕಗಳ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT