ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4,200 ಮೆ. ವಾ. ವಿದ್ಯುತ್ ಉತ್ಪಾದನೆ ಗುರಿ

Last Updated 22 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನವೀಕರಿಸಬಹುದಾದ ಇಂಧನ ಮೂಲಗಳಿಂದ 2014ರ ವೇಳೆಗೆ 4,200 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಇಲ್ಲಿ ಹೇಳಿದರು.

ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಕ್ರೆಡಲ್) ಹಾಗೂ ಕೇಂದ್ರದ ನವೀಕರಿಸಬಹುದಾದ ಇಂಧನ ಇಲಾಖೆ ಆಯೋಜಿಸಿದ್ದ `ರಾಜೀವ್ ಗಾಂಧಿ ಅಕ್ಷಯ ಊರ್ಜಾ ದಿನಾಚರಣೆ~ ಮತ್ತು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆಯ ಶೇಕಡ 0.25ರಷ್ಟು ಸೌರವಿದ್ಯುತ್ ಉತ್ಪಾದಿಸಬೇಕು ಎಂಬ ದೃಷ್ಟಿಯಿಂದ ಪ್ರತ್ಯೇಕ ಸೌರವಿದ್ಯುತ್ ನೀತಿ ಜಾರಿಗೊಳಿಸಲಾಗಿದೆ. ಈ ನೀತಿಯ ಅನ್ವಯ 2016ರ ವೇಳೆಗೆ 200 ಮೆಗಾವಾಟ್ ಸೌರವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

14,391 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ವಿವಿಧ ಯೋಜನೆಗಳನ್ನು ಖಾಸಗಿ ಕಂಪೆನಿಗಳಿಗೆ ವಹಿಸಲಾಗಿದೆ. ಇದರಲ್ಲಿ 3,300 ಮೆಗಾ ವಾಟ್ ವಿದ್ಯುತ್ತನ್ನು ಈಗಾಗಲೇ ಉತ್ಪಾದಿಸಲಾಗುತ್ತಿದೆ. ಪವನ ಶಕ್ತಿಯಿಂದ 1,800 ಮೆಗಾ ವಾಟ್, ಜೈವಿಕ ಶಕ್ತಿಯಿಂದ 87 ಮೆಗಾ ವಾಟ್, ಸೌರ ಶಕ್ತಿಯಿಂದ 9 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ವಿವರಿಸಿದರು.

ದುಬಾರಿ ವಿದ್ಯುತ್: ಸೌರಶಕ್ತಿಯಿಂದ ಉತ್ಪಾದಿಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಕೇಂದ್ರ ಸರ್ಕಾರ 17 ರೂಪಾಯಿ ನಿಗದಿ ಮಾಡಿದೆ. ಇದು ಬಹಳ ದುಬಾರಿ. ಕಡಿಮೆ ಬಂಡವಾಳ ಹೂಡಿ ಹೆಚ್ಚಿನ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸವಾಲು ನಮ್ಮ ಮುಂದಿದೆ ಎಂದರು.

ಕೆಲವು ಖಾಸಗಿ ಕಂಪೆನಿಗಳು ಅನುಮತಿ ಪಡೆದು ಆರೇಳು ವರ್ಷವಾದರೂ ಯೋಜನೆಯನ್ನು ಆರಂಭಿಸದೆ ಇರುವ ನಿದರ್ಶನಗಳಿವೆ. ಅಲ್ಲದೆ ಆ ಯೋಜನೆಗಳನ್ನು ಬೇರೆ ಕಂಪೆನಿಗಳಿಗೆ ವಹಿಸಲೂ ಆಗದ ಸ್ಥಿತಿ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳು ಅನುಮತಿ ಪಡೆದ ನಂತರ ತ್ವರಿತವಾಗಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಕೋರಿದರು.

ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಮನೆಗೂ ಒಂದಲ್ಲ ಒಂದು ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಡಾ. ಹಂದೆ ಅವರ ಸಹಕಾರವನ್ನೂ ಪಡೆಯಲಾಗುವುದು ಎಂದು ಶೋಭಾ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಹರೀಶ್ ಹಂದೆ, `ಈ ದೇಶದ ಬಡವನನ್ನು ಸಬ್ಸಿಡಿ ದರದಲ್ಲಿ ದುಡಿಯುವಂತೆ ಮಾಡಿ ಶ್ರೀಮಂತರು ಜೀವನ ನಡೆಸುತ್ತಿದ್ದಾರೆ. ಬಡವನ ತಾಳ್ಮೆಯನ್ನು ಬಹಳ ದಿನ ಪರೀಕ್ಷೆಗೆ ಒಡ್ಡುವುದು ಒಳ್ಳೆಯದಲ್ಲ~ ಎಂದರು.

ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕಳೆದ 15 ವರ್ಷಗಳಲ್ಲಿ ನಡೆದ ವಿದ್ಯುದೀಕರಣ ಯೋಜನೆಗಳ ಬಗ್ಗೆ ವಿದೇಶಿ ವಿ.ವಿ.ಗಳಲ್ಲಿ ಸುಮಾರು 15 ಪಿಎಚ್.ಡಿ. ಪ್ರಬಂಧಗಳು ಸಿದ್ಧಗೊಂಡಿವೆ. ಗ್ರಾಮೀಣ ವಿದ್ಯುದೀಕರಣ ಯೋಜನೆಗಳ ಅಧ್ಯಯನಕ್ಕೆ ಕರ್ನಾಟಕ ಉತ್ತಮ ಮಾದರಿ ಎಂದು ಶ್ಲಾಘಿಸಿದರು.

ಕ್ರೆಡಲ್ ಅಧ್ಯಕ್ಷ ನಿಂಬಣ್ಣನವರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ. ರವಿಕುಮಾರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸದ್ಯಕ್ಕೆ ಕ್ರಮ ಇಲ್ಲ: ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಪಡೆದವರ ವಿರುದ್ಧ ಸರ್ಕಾರ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಅಕ್ರಮ ಅಡುಗೆ ಅನಿಲ ಸಂಪರ್ಕ ಮತ್ತು ಪಡಿತರ ಚೀಟಿ ಪತ್ತೆ ಮಾಡುವ ಕಾರ್ಯ ಮುಂದುವರಿಯಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟ ಪಡಿಸಿದರು.

`ಕೆಲವು ದೊಡ್ಡ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಇದೆ, ಅದು ಅವರಿಗೆ ಅಗತ್ಯವೂ ಹೌದು. ರಾಜ್ಯದಲ್ಲಿ ವಾರಸುದಾರರೇ ಇಲ್ಲದ 30 ಲಕ್ಷ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಮಾಡಲಾಗಿದೆ. ಇದರಿಂದಾಗಿ ಅರ್ಹರಿಗೂ ಅಡುಗೆ ಅನಿಲ ಸಂಪರ್ಕ ಸಿಗುತ್ತಿಲ್ಲ. ಸರ್ಕಾರ ಈ ವಿಚಾರದ ಬಗ್ಗೆ ಗಮನ ಹರಿಸಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT