ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

437 ಎಂಜಿನಿಯರುಗಳಿಗೆ ಸೇವಾ ಭದ್ರತೆ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗಾಗಿ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಂಡಿದ್ದ 417 ಎಂಜಿನಿಯರು­ಗಳನ್ನು ಸೇವೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ನಾಗರಿಕ ಸೇವೆಗಳ (ಜಲಸಂಪನ್ಮೂಲ ಸೇವೆಗಳ ಸಹಾಯಕ ಮತ್ತು ಕಿರಿಯ ಎಂಜಿನಿಯರುಗಳ ವಿಶೇಷ ನೇಮಕಾತಿ) ತಿದ್ದುಪಡಿ ಮಸೂದೆ’ಗೆ ರಾಜ್ಯಪಾಲರು ಗುರುವಾರ ಅಂಕಿತ ಹಾಕಿದ್ದಾರೆ.

417 ಎಂಜಿನಿಯರುಗಳ ನೇಮಕಾತಿ­ಯನ್ನು ರದ್ದು ಮಾಡಿದ್ದ ಸುಪ್ರೀಂ­ಕೋರ್ಟ್‌, ಅವರನ್ನು ಮರು ನೇಮಕ ಮಾಡಿಕೊಳ್ಳಲು ಒಂದು ವರ್ಷ ಗಡುವು ನೀಡಿತ್ತು. ಈ ಗಡುವು ಶುಕ್ರ­ವಾರಕ್ಕೆ ಕೊನೆಯಾಗುತ್ತಿತ್ತು. ಈ ಕಾರಣದಿಂದ ಆ ಎಲ್ಲ ಎಂಜಿನಿಯರು­ಗಳನ್ನು ಸೇವೆಯಲ್ಲಿ ಮುಂದುವರಿ­ಸುವು­ದಕ್ಕೆ ಅವಕಾಶ ಕಲ್ಪಿಸುವ ಮಸೂದೆಗೆ ಬೆಳಗಾವಿಯಲ್ಲಿ ನಡೆದ ವಿಧಾನ­ಮಂಡಲ ಅಧಿವೇಶನದಲ್ಲಿ ಉಭಯ ಸದನಗಳ ಒಪ್ಪಿಗೆ ದೊರಕಿತ್ತು.

‘ಈ ಮಸೂದೆಗೆ ರಾಜ್ಯಪಾಲ ಎಚ್‌.ಆರ್.ಭಾರದ್ವಾಜ್ ಅವರು ಗುರುವಾರವೇ ಅಂಕಿತ ಹಾಕಿದ್ದಾರೆ. ಇದರಿಂದಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ನೇಮಕಗೊಂಡಿದ್ದ ಎಂಜಿನಿಯರುಗಳು ಸೇವೆಯಲ್ಲಿ ಮುಂದುವರಿಯಲಿದ್ದಾರೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಶುಕ್ರವಾರ ವಿಧಾನಸೌಧದಲ್ಲಿ ಪತ್ರಕರ್ತರಿಗೆ ತಿಳಿಸಿದರು.

ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕುವುದು ತಡವಾದರೆ ಸಮಸ್ಯೆ ಉಂಟಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಗಡುವನ್ನು ಡಿಸೆಂಬರ್‌ 17ರವರೆಗೂ ವಿಸ್ತರಿಸಿತ್ತು. ಆದರೆ, ಈಗ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿರುವುದರಿಂದ ಇನ್ನು ಯಾವುದೇ ಸಮಸ್ಯೆಯೂ ಉಳಿದಿಲ್ಲ ಎಂದರು.

ಈ ಎಂಜಿನಿಯರುಗಳು ಸೇವೆಯಲ್ಲಿ ಮುಂದುವರಿದಿದ್ದರೂ, 1999ರ ಅವಧಿಗೆ ಅರ್ಹತೆಗಳನ್ನು ನಿಗದಿಪಡಿಸಿ ಮರುನೇಮಕ ಮಾಡಿಕೊಳ್ಳಬೇಕಾಗುತ್ತದೆ. ಆಗ ಸಹಾಯಕ ಮತ್ತು ಕಿರಿಯ ಎಂಜಿನಿಯರುಗಳ ಹುದ್ದೆಗೆ ಅರ್ಜಿ ಹಾಕುವ ಅರ್ಹತೆ ಹೊಂದಿದ್ದ ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾಗುತ್ತದೆ. 450 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು. ಅಗತ್ಯ ಕಂಡುಬಂದಲ್ಲಿ 550 ಹುದ್ದೆಗಳಿಗೆ ನೇಮಕಾತಿ ನಡೆಸುವುದಕ್ಕೂ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT