ಶುಕ್ರವಾರ, ಆಗಸ್ಟ್ 6, 2021
21 °C

`46 ಡೆಂಗೆ ಪ್ರಕರಣ ದೃಢ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: `ಜಿಲ್ಲೆಯಲ್ಲಿ ಒಟ್ಟು 46 ಡೆಂಗೆ ಪ್ರಕರಣಗಳು ದೃಢಪಟ್ಟಿದ್ದು 146 ಜನರು ಶಂಕಿತ ಜ್ವರದಿಂದ ಬಳಲಿ ಚೇತರಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ 15 ಜನರು ಡೆಂಗೆ ಜ್ವರದಿಂದ ಬಳಲಿ ಈಗ ಚೇತರಿಸಿಕೊಂಡಿದ್ದಾರೆ' ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅಶೋಕಕುಮಾರ ಹೇಳಿದರು.ಡೆಂಗೆ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಅವರು ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಡೆಂಗೆ ಜ್ವರ ವ್ಯಾಪಕವಾಗಿ ಹರಡಿದ್ದರಿಂದ ಗಡಿಭಾಗದ ಮುಂಡಗೋಡಕ್ಕೂ ಬಂದಿರುವ ಶಂಕೆಯಿದೆ. ಡೆಂಗೆ ಜ್ವರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಪ್ರತಿದಿನ ಹತ್ತುನಿಮಿಷ ಮಕ್ಕಳಿಗೆ ಡೆಂಗೆ ಬಗ್ಗೆ ಶಿಕ್ಷಕರು ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಮಕ್ಕಳಿಗೆ ತಿಳಿಹೇಳುವ ಕೆಲಸ ಮಾಡಲಿದ್ದಾರೆ.ಶಾಲೆಯಲ್ಲಿ ಮಕ್ಕಳಿಗೆ ಜ್ವರ ಕಾಣಿಸಿಕೊಂಡರೆ ಕೂಡಲೆ ಕ್ರಮ ಕೈಗೊಂಡು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಅಲ್ಲದೆ ಮಕ್ಕಳ ಮನೆಯಲ್ಲಿ ನೀರು ಸಂಗ್ರಹಣೆಯನ್ನು ಪರೀಕ್ಷಿಸಿ ಅದರಲ್ಲಿ ಲಾರ್ವಾ ಇರುವುದು ಗಮನಕ್ಕೆ ಬಂದರೆ ಕೂಡಲೇ ಮಾಹಿತಿ ನೀಡಲು ಸೂಚಿಸಲಾಗಿದೆ' ಎಂದರು.`40 ಜನರ ತಂಡವು ಈಗಾಗಲೇ ತಾಲ್ಲೂಕಿನ ಡೆಂಗೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರಿಗೆ ಡೆಂಗೆ ಜ್ವರದ ಬಗ್ಗೆ ತರಬೇತಿ ನೀಡಲಾಗಿದ್ದು ತಮ್ಮ ವ್ಯಾಪ್ತಿಯ ಓಣಿಗಳಲ್ಲಿ ಸ್ವಚ್ಛತೆಯ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ.ಬಾಚಣಕಿ ಗ್ರಾ.ಪಂ.ವ್ಯಾಪ್ತಿಯ ನ್ಯಾಸರ್ಗಿ ಗ್ರಾಮದಲ್ಲಿ ಎರಡು ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದ್ದರೂ ಇನ್ನೂ ತನಕ ಕ್ರಮ ಕೈಗೊಂಡಿಲ್ಲ ಎಂದ ವೈದ್ಯಾಧಿಕಾರಿ ನೀರು ಸಂಗ್ರಹಗೊಳ್ಳದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು' ಎಂದರು.`ಜಿಲ್ಲೆಯಲ್ಲಿ 22 ಸಾಮಾನ್ಯ ಹಾಗೂ 28 ತಜ್ಞ ವೈದ್ಯ ಹುದ್ದೆಗಳು ಖಾಲಿಯಿದ್ದು ಅವುಗಳ ಭರ್ತಿಗೆ ಸರ್ಕಾರ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ. ತಾಲ್ಲೂಕಿನಲ್ಲಿ 22 ನಕಲಿ ವೈದ್ಯರು ಇರುವುದು ಪತ್ತೆ ಹಚ್ಚಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ತಾಲ್ಲೂಕು ಪರಿಶೀಲನಾ ಸಮಿತಿಗೆ ಸೂಚಿಸಲಾಗಿದೆ. ವೈದ್ಯಕೀಯ ಮಾನದಂಡಗಳನ್ನು ಹೊರತುಪಡಿಸಿ ಸೇವೆ ನೀಡುತ್ತಿರುವ ನಕಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳುವದು ನಿಶ್ಚಿತವಾಗಿದೆ `ಎಂದರು.ಡೆಂಗೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಡಾ.ಅಶೋಕಕುಮಾರ ಮನೆ ಮನೆಗೆ ತೆರಳಿ ಜನರ ಆರೋಗ್ಯ ವಿಚಾರಿಸಿದರು. ಆರೋಗ್ಯ ಸಹಾಯಕಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.