ಭಾನುವಾರ, ಮೇ 9, 2021
25 °C
ಕರವೇ ಅಧ್ಯಕ್ಷ ನಾರಾಯಣಗೌಡ ಜನ್ಮದಿನಾಚರಣೆ

47 ಯುವಕರಿಂದ ರಕ್ತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಗೌಡ ಅವರ 47ನೇ ಜನ್ಮದಿನವನ್ನು ಕರವೇ ಜಿಲ್ಲಾ ಘಟಕವು ಈ ಬಾರಿ ವಿಶೇಷವಾಗಿ ಆಚರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆಯಿತು.ನಾರಾಯಣಗೌಡರ 47ನೇ ಜನ್ಮದಿನದ ಅಂಗವಾಗಿ ಕರವೇ ಸಂಘಟನೆ 47 ಕಾರ್ಯಕರ್ತರು ರಕ್ತದಾನ ಮಾಡಿದರು. ನಾರಾಯಣಗೌಡರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸುವ ಉದ್ದೇಶದಿಂದ ಕರವೇ ಜಿಲ್ಲಾ ಘಟಕವು  `ರಕ್ತದಾನ ಶಿಬಿರ'ವನ್ನು ಸೋಮವಾರ ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ, ಸರ್ಕಾರಿ ವೈದ್ಯಕೀಯ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಂಡಿತ್ತು.ರಕ್ತದಾನ ಶಿಬಿರ ಉದ್ಘಾಟಿಸಿದ ಸಾಹಿತಿ ಭಗತರಾಜ ನಿಜಾಮಕರ ಮಾತನಾಡಿ, ಎಲ್ಲ ದಾನಕ್ಕಿಂತ ರಕ್ತದಾನ ಮುಖ್ಯವಾಗಿದೆ. ರಕ್ತ ದೊರಕುವ ಸಮಸ್ಯೆ ಎಲ್ಲೆಡೆ ಇದೆ. ಒಬ್ಬ ಮನುಷ್ಯನ ಜೀವ ಉಳಿಸುವ ಕಾರ್ಯ ರಕ್ತದಾನ ಮಾಡಿದವರಿಂದ ಆಗುತ್ತದೆ ಎಂದು ಹೇಳಿದರು.ನಾಡು, ನುಡಿ, ಜನಪರ ಹೋರಾಟಗಳಲ್ಲಿ ಕರವೇ ಸಂಘಟನೆ ತೊಡಗಿಸಿಕೊಂಡು ಕೆಲಸ ಮಾಡುತ್ತಿದೆ. ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಗಳಾಗಲಿ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ ನಾಯಕ ಮಾತನಾಡಿ, ಜಿಲ್ಲೆಯ ತಾಲ್ಲೂಕು ಮಟ್ಟದಲ್ಲಿ ರಕ್ತದ ಕೊರತೆಯಿಂದ ಜನತೆ ತೊಂದರೆ ಪಡುತ್ತಿದ್ದಾರೆ. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ರಕ್ತದಾನ ಶಿಬಿರಗಳಾದರೆ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಸಾನಿಧ್ಯವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ ವಹಿಸಿದ್ದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಭಾಷ ಪಾಟೀಲ್ ಶಾವಂತಗೇರಾ, ಡಾ. ಬಸನಗೌಡ, ಡಾ.ಪ್ರಸನ್ನಕುಮಾರ, ಡಾ.ಸಿ.ಎನ್ ಕುಲಕರ್ಣಿ, ದಂಡಪ್ಪ ಬಿರಾದಾರ ಹಾಗೂ ಇತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.