ಶುಕ್ರವಾರ, ಜೂನ್ 25, 2021
29 °C

5 ಮತ್ತು 8 ತರಗತಿಯ ಪಠ್ಯಪುಸ್ತಕ: ಕೇಸರೀಕರಣ ವಿರೋಧಿಸಲು ಪಕ್ಷಗಳಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ಮತ್ತು ಎಂಟನೇ ತರಗತಿಗೆ ರಾಜ್ಯ ಸರ್ಕಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್)`ಅಜೆಂಡಾ~ ಇಟ್ಟುಕೊಂಡು ಸಮಾಜ ವಿಜ್ಞಾನದ ಪಠ್ಯ ಸಿದ್ಧಪಡಿಸಿದೆ ಎಂದು ಆರೋಪಿಸಿದ ಸಂಸದ ಎಚ್. ವಿಶ್ವನಾಥ್ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್, ಈ ಪಠ್ಯಕ್ರಮವನ್ನು ಕೈಬಿಡಬೇಕು ಹಾಗೂ ಅದನ್ನು ಜಾತ್ಯತೀತ ತತ್ವದಡಿ ಪುನರ್ ರಚಿಸಬೇಕು ಎಂದು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.`ಶಾಲಾ ಪಠ್ಯಕ್ರಮವನ್ನು ಕೇಸರೀಕರಣಗೊಳಿಸಲು ಕರ್ನಾಟಕ ಸರ್ಕಾರ ನಡೆಸಿರುವ ಪ್ರಯತ್ನ ವಿರೋಧಿಸುವಂತೆ ಕೋರಿ ಬಿಜೆಪಿ ಹೊರತುಪಡಿಸಿ ದೇಶದ ಎಲ್ಲ ಪಕ್ಷಗಳಿಗೆ ಪತ್ರ ಬರೆಯಲಾಗಿದೆ.ಸರ್ಕಾರ ಈ ಕೇಸರೀಕೃತ ಪಠ್ಯಕ್ರಮವನ್ನು ಜಾರಿಗೆ ತಂದಿದ್ದೇ ಆದಲ್ಲಿ, ಅದನ್ನು ಬಹಿಷ್ಕರಿಸುವ ಕುರಿತು ಕಾಂಗ್ರೆಸ್ ಆಲೋಚಿಸುತ್ತಿದೆ~ ಎಂದು ವಿಶ್ವನಾಥ್ ಹೇಳಿದರು.ರಾಜೀನಾಮೆಗೆ ಒತ್ತಾಯ: ರಾಜ್ಯ ಜ್ಞಾನ ಆಯೋಗ ಯಾವ ಕೆಲಸ ಮಾಡುತ್ತಿದೆ ಎಂಬ ಕುರಿತು ಜನತೆಗೆ ಮಾಹಿತಿ ಲಭ್ಯವಾಗುತ್ತಿಲ್ಲ.ಆಯೋಗ ಕದ್ದುಮುಚ್ಚಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅದರ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರೊ. ಚಂದ್ರಶೇಖರ್ ಒತ್ತಾಯಿಸಿದರು.ಐದು ಮತ್ತು ಎಂಟನೆ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ವೈದಿಕ ದೇವಾಲಯಗಳ ಕುರಿತು ವಿಪುಲ ವಿವರಣೆ ನೀಡಲಾಗಿದೆ. ಆದರೆ ಇತರ ಧರ್ಮಗಳ ಪವಿತ್ರ ಸ್ಥಳಗಳ ಕುರಿತು ಸೂಕ್ತ ಮಾಹಿತಿ ದೊರೆಯದ ಕಾರಣ ಯಾವುದೇ ವಿವರಣೆ ನೀಡಲಾಗಲಿಲ್ಲ ಎಂದು ಪಠ್ಯ ರಚನಾ ಸಮಿತಿ ಹೇಳುತ್ತಿದೆ. ಹಾಗಾದರೆ ಸಮಿತಿ ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದ್ದು ಏನನ್ನು ಎಂದು ಪ್ರಶ್ನಿಸಿದರು.ವಿಷ್ಣು ಪುರಾಣ, ವಾಯು ಪುರಾಣ, ಬೃಹಸ್ಮೃತಿ ಶಾಸ್ತ್ರ, ವಿನಾಯಕ ದಾಮೋದರ ಸಾವರ್ಕರ್ ರಚಿಸಿದ ಸಾಹಿತ್ಯ ಮಾತ್ರ ಭಾರತವನ್ನು ವರ್ಣಿಸುತ್ತಿವೆ ಎಂದು ಬಿಂಬಿಸಲಾಗಿದೆ. ಹಾಗಾದರೆ ರಾಮಾಯಣ, ಮಹಾಭಾರತ, ಜೈನ ಸಾಹಿತ್ಯ, ಸ್ವಾಮಿ ವಿವೇಕಾನಂದರ ಕೃತಿಗಳು, ಯೋಗಿ ಅರವಿಂದರ ಬರಹ, ಮಹಾತ್ಮ ಗಾಂಧೀಜಿಯವರ ಪುಸ್ತಕಗಳಲ್ಲಿ ಭಾರತದ ವರ್ಣನೆ ಇಲ್ಲವೇ ಎಂದು ಅವರು ಖಾರವಾಗಿ ಕೇಳಿದರು. ಈ ಪಠ್ಯ ಸಿದ್ಧಪಡಿಸಿದ ಸಮಿತಿಯ ಕಾರ್ಯಗಳೂ ಪಾರದರ್ಶಕವಾಗಿಲ್ಲ.ಕೇಸರೀಕೃತ ಪಠ್ಯವನ್ನು ವಿರೋಧಿಸಿ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಆಯೋಜಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ವಿಶ್ವನಾಥ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.