ಭಾನುವಾರ, ಮಾರ್ಚ್ 7, 2021
32 °C

5 ವರ್ಷಕ್ಕೊಮ್ಮೆ ಪಾದರಕ್ಷೆ ಪವಾಡ!

ಎಂ.ಜೆ. ಶ್ರೀನಿವಾಸ, ಗಂಗಾವತಿ Updated:

ಅಕ್ಷರ ಗಾತ್ರ : | |

5 ವರ್ಷಕ್ಕೊಮ್ಮೆ ಪಾದರಕ್ಷೆ ಪವಾಡ!

ಕೇವಲ ಒಂದು ದಿನದಲ್ಲಿ ಹತ್ತಿಪ್ಪತ್ತು ಜನ ಕೂಡಿ ಪವನಪುತ್ರ ಆಂಜನೇಯನಿಗೆ ತಯಾರಿಸಿದ ಇಪ್ಪತ್ನಾಲ್ಕು ಇಂಚಿಗೂ ಉದ್ದದ ಪಾದರಕ್ಷೆಗಳು, ಒಂದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಸವೆದು ಹೋಗುವ ವಿಸ್ಮಯಕಾರಿ ಆಚರಣೆಯೊಂದು ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ.ತುಂಗಭದ್ರಾ ನದಿಯಂಚಿನಲ್ಲಿರುವ ಗಂಗಾವತಿ ತಾಲ್ಲೂಕಿನ ಈಳಿಗೆನೂರು ಗ್ರಾಮದ ಪರಿಶಿಷ್ಟರ ದೇವರೆಂದೇ ಖ್ಯಾತಿ ಪಡೆದ ಮಾರುತಿ ದೇವಸ್ಥಾನದಲ್ಲಿ ಇಂತಹದೊಂದು ಧಾರ್ಮಿಕ ಶ್ರದ್ಧೆಯ ವಿಶಿಷ್ಟ ಆಚರಣೆ ಕಳೆದ ಹಲವು ವರ್ಷಗಳಿಂದ ನಡೆದು ಬಂದಿದೆ.ಪ್ರತಿ ಐದು ವರ್ಷಕ್ಕೊಮ್ಮೆ (ಕೆಲವೊಮ್ಮೆ ಗತ, ಅಧಿಕ ಮಾಸದಂತಹ ಸಂದರ್ಭದಲ್ಲಿ ಆರು ವರ್ಷಕ್ಕೊಮ್ಮೆ) ಮಾತ್ರ ನಡೆಯುವ ವಿಶಿಷ್ಟ ಆಚರಣೆ ಜನರ ಶ್ರದ್ಧಾನಂಬಿಕೆಗೆ ಪಾತ್ರವಾಗಿದ್ದಲ್ಲದೇ, ವೈಜ್ಞಾನಿಕ ಮನೋಭಾವದವರಿಗೂ ಸೋಜಿಗ ಉಂಟು ಮಾಡುತ್ತದೆ.ಹನುಮನ ಪಾದರಕ್ಷೆ ಪವಾಡ

ಪರಿಶಿಷ್ಟರ (ವಿಶೇಷವಾಗಿ ಮಾದಿಗ ಸಮುದಾಯ) ಜಾತಿಗೆ ಸೇರಿದ ಹತ್ತಿಪ್ಪತ್ತು ಮನೆತನಗಳ ದೈವಿ ಭಕ್ತಿಯುಳ್ಳ ವ್ಯಕ್ತಿಗಳು ಯುಗಾದಿ ಹಬ್ಬದ ದಿನ ಬೆಳಗಿನ ಜಾವ ನಾಲ್ಕಕ್ಕೆ ಸ್ನಾನ ಪೂಜೆ ಮುಗಿಸಿ, ಈ ಮೊದಲೇ ತಂದಿದ್ದ ಚರ್ಮವನ್ನು ಹದ ಮಾಡಿಕೊಳ್ಳುತ್ತಾರೆ. ಬಳಿಕ ದೇವಸ್ಥಾನದ ಆವರಣಕ್ಕೆ ತೆರಳಿ, ಉಪವಾಸ ವ್ರತಾಚರಣೆ ಕೈಗೊಂಡು ಬೆಳಗಿನ ನಾಲ್ಕರಿಂದ ಸಂಜೆಯ ನಾಲ್ಕರವರೆಗೆ ಆಕರ್ಷಕ ಮತ್ತು 24 ಇಂಚಿಗೂ ಉದ್ದದ ಪಾದರಕ್ಷೆಯನ್ನು ಪವನಪುತ್ರನಿಗಾಗಿ ಹೊಲೆಯುತ್ತಾರೆ.ಸಂಜೆಯೊಳಗೆ ಸಕಲ ಅಲಂಕಾರಿಕ ಪಾದರಕ್ಷೆ ತಯಾರಾಗುತ್ತದೆ. ಬಳಿಕ ಸಂಜೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಇಟ್ಟು ಬರಲಾಗುತ್ತದೆ. ಅಚ್ಚರಿ ಎಂದರೆ ಬೆಳಗಾಗುವುದರೊಳಗೆ ಪಾದರಕ್ಷೆ ಸವೆಯುತ್ತವೆ ಎಂಬ ನಂಬಿಕೆ ಇಲ್ಲಿನ ಜನರದ್ದು.ಒಳಿತು-ಕೆಡುಕಿನ ನಂಬಿಕೆ

ಹನುಮಂತ ದೇವರಿಗೆ ವಿಶೇಷ ಆಸ್ಥೆಯಿಂದ ತಯಾರಿಸಿದ ಪಾದರಕ್ಷೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೊಂಚವಾದರೂ ಸವೆದರೆ ಮಾತ್ರ ಈ ವರ್ಷ ಮತ್ತು ಮುಂದಿನ ಐದು ವರ್ಷ (ಮತ್ತೆ ಪಾದರಕ್ಷೆ ತಯಾರಿಸುವ ತನಕ) ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ. `ಪಾದರಕ್ಷೆ ಸವೆಯದಿದ್ದರೆ ಬರಗಾಲ, ಮೇವಿನ ಕೊರತೆ, ಆಹಾರಕ್ಕೆ ತಾಪತ್ರಯ, ಸಂಸಾರದಲ್ಲಿ ಕಿರಿಕಿರಿ ಇರುತ್ತವೆ. ಈ ಆಚರಣೆ ಅನೇ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ~ ಎನ್ನುತ್ತಾರೆ, ಕೊಪ್ಪಳ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಮಾರೇಶ ಮುಸ್ಟೂರು.     ಐದು ವರ್ಷಕ್ಕೊಮ್ಮೆ ನಡೆಯುವ ಈ ಪವನ ಪುತ್ರನ ಪಾದರಕ್ಷೆಯ ಪವಾಡದ ವಿದ್ಯಮಾನ ಆಸ್ತಿಕರಲ್ಲಿ ದೈವಿಭಕ್ತಿ ಹೆಚ್ಚಿಸಿದರೆ, ನಾಸ್ತಿಕರಲ್ಲಿ ಆಶ್ಚರ್ಯದ ಜೊತೆಗೆ ಸೋಜಿಗವನ್ನುಂಟು ಮಾಡಿ ಹತ್ತಾರು ಪ್ರಶ್ನೆಗಳು ತಲೆಯಲ್ಲಿ ಸುಳಿದಾಡುವಂತೆ ಮಾಡುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.