ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ನಗರ ಸ್ಥಳೀಯ ಸಂಸ್ಥೆಯಲ್ಲಿ ಆರ್ಥಿಕಬಿಕ್ಕಟ್ಟು

ನಿವೇಶನ-ಕಟ್ಟಡ ಕರ ರೂ 3.03 ಕೋಟಿ; ನೀರಿನ ತೆರಿಗೆ ರೂ 6.96 ಕೋಟಿ ಬಾಕಿ
Last Updated 4 ಜುಲೈ 2013, 9:26 IST
ಅಕ್ಷರ ಗಾತ್ರ

ಚಾಮರಾಜನಗರ: ಸಕಾಲದಲ್ಲಿ ತೆರಿಗೆ ವಸೂಲಾತಿ ಮಾಡಲು ಹಿನ್ನಡೆ ಅನುಭವಿಸಿರುವ ಪರಿಣಾಮ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.

ಉತ್ತಮ ಕಾರ್ಯಯೋಜನೆ ರೂಪಿಸಿ ತೆರಿಗೆ ವಸೂಲಿ ಮಾಡುವಲ್ಲಿ ತಳೆದ ನಿರ್ಲಕ್ಷ್ಯವೇ ಈಗ ಸ್ಥಳೀಯ ಸಂಸ್ಥೆಗಳಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ. ಸಂಪನ್ಮೂಲ ಕ್ರೋಡೀಕರಣದ ಮೂಲಕ ಸ್ಥಳೀಯವಾಗಿ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಆಶಯಕ್ಕೂ ಪೆಟ್ಟುಬಿದ್ದಿದೆ.

ತೆರಿಗೆ ವಸೂಲಿಯಲ್ಲಿ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಇದರಿಂದ ಆಡಳಿತ ಯಂತ್ರಗಳು ಸರಾಗವಾಗಿ ಚಲಿಸುತ್ತಿಲ್ಲ. ಸರ್ಕಾರದ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಅನುದಾನ ನೆಚ್ಚಿಕೊಂಡು ಅಭಿವೃದ್ಧಿಗೆ ಚಾಲನೆ ನೀಡುವ ದಯನೀಯ ಸ್ಥಿತಿಗೆ ತಲುಪಿವೆ. ಪ್ರತಿವರ್ಷ ಸರ್ಕಾರದ ವಿವಿಧ ಯೋಜನೆಯಡಿ ಲಭಿಸುವ ಅನುದಾನದ ಮೇಲೆಯೇ ಬಜೆಟ್ ಸಿದ್ಧಪಡಿಸುವ ಸ್ಥಳೀಯ ಆಡಳಿತಗಳು ತಮ್ಮ ಪಾಲಿನ ಸಂಪನ್ಮೂಲ ಸಂಗ್ರಹಿಸುವಲ್ಲಿ ವೈಫಲ್ಯ ಕಂಡಿವೆ. ಬಜೆಟ್‌ನಲ್ಲಿ ಸರ್ಕಾರ ನೀಡುವ ಅನುದಾನದ ಪಾಲು ಶೇ. 95ರಷ್ಟಿರುತ್ತದೆ.

ಕೆಲವೊಮ್ಮೆ ಕುಡಿಯುವ ನೀರು ಪೂರೈಕೆಯ ಕೊಳವೆಮಾರ್ಗದಲ್ಲಿ ತಲೆದೋರುವ ನೀರಿನ ಸೋರಿಕೆ ತಡೆಗಟ್ಟುವಂತಹ ಕಾಮಗಾರಿ ಕೈಗೆತ್ತಿಕೊಳ್ಳಲು ಕೂಡ ಸ್ವಂತ ಹಣ ಬಳಸುವಷ್ಟು ಸಾಮರ್ಥ್ಯ ಕೂಡ ಹೊಂದಿಲ್ಲ. ಈ ಹಿಂದಿನ ಚಾಮರಾಜನಗರದ ಪೌರಾಯುಕ್ತರು ನಗರಸಭೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದ ನಿದರ್ಶನವೂ ಉಂಟು. ಸಣ್ಣಪುಟ್ಟ ಕಾಮಗಾರಿಗಳಿಗೂ ಸರ್ಕಾರದಿಂದ ಅನುದಾನ ನಿರೀಕ್ಷಿಸುವ ಸ್ಥಿತಿಗೆ ಮುಟ್ಟಿವೆ. ತೆರಿಗೆ ವಸೂಲಾತಿಯಲ್ಲಿ ನಿರೀಕ್ಷಿತ ಪ್ರಗತಿಯಾಗದಿರುವುದೇ ಇದಕ್ಕೆ ಮೂಲ ಕಾರಣ.

ಮೇ ತಿಂಗಳ ಅಂತ್ಯಕ್ಕೆ ಚಾಮರಾಜನಗರ ಮತ್ತು ಕೊಳ್ಳೇಗಾಲದ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಡಿ(ಎಸ್‌ಎಎಸ್- ನಿವೇಶನ, ಕಟ್ಟಡ ತೆರಿಗೆ) ಒಟ್ಟು ರೂ 303.46 ಲಕ್ಷ ತೆರಿಗೆ ವಸೂಲಾತಿಯಾಗಿಲ್ಲ. ಇದರಲ್ಲಿ ಹಳೆಯ ಬಾಕಿ ಮೊತ್ತವೇ 158.48 ಲಕ್ಷ ರೂಪಾಯಿಯಷ್ಟಿದೆ.

5 ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರಸಕ್ತ ಸಾಲಿನ ತೆರಿಗೆ ಬೇಡಿಕೆ 196.5 ಲಕ್ಷ ರೂಪಾಯಿ. ಹಿಂದಿನ ವರ್ಷದ ಬಾಕಿ ಹಾಗೂ ಪ್ರಸಕ್ತ ಸಾಲಿನ ತೆರಿಗೆ ಸೇರಿಸಿದರೆ ಒಟ್ಟು ಬೇಡಿಕೆ ರೂ 354.98 ಲಕ್ಷ. ಇದರಲ್ಲಿ ಮೇ ಅಂತ್ಯಕ್ಕೆ 59.52 ಲಕ್ಷ ರೂಪಾಯಿ ವಸೂಲಿಯಾಗಿದೆ. ಒಟ್ಟಾರೆ ವಸೂಲಾತಿ ಪ್ರಮಾಣ ಶೇ. 16.77ರಷ್ಟಿದೆ!

ನೀರಿನ ಕರ; ಶೇ. 3.56 ಸಾಧನೆ:
ಕುಡಿಯುವ ನೀರಿನ ತೆರಿಗೆ ವಸೂಲಾತಿಯಲ್ಲೂ ನಿರೀಕ್ಷಿತ ಸಾಧನೆಯಾಗಿಲ್ಲ. ನಗರಸಭೆ ವ್ಯಾಪ್ತಿ ತಿಂಗಳುವಾರು ಪ್ರತಿ ಮನೆಗೆ 120 ರೂಪಾಯಿ ನೀರಿನ ಕರ ನಿಗದಿಪಡಿಸಲಾಗಿದೆ. ವಾಣಿಜ್ಯ ಉದ್ದೇಶಿತ ಅಂಗಡಿ, ಹೋಟೆಲ್ ಇತ್ಯಾದಿಗೆ ರೂ 240 ದರ ನಿಗದಿಯಾಗಿದೆ. ಕೈಗಾರಿಕೆಗಳು ತಿಂಗಳಿಗೆ 480 ರೂಪಾಯಿ ನೀರಿನ ತೆರಿಗೆ ಪಾವತಿಸಬೇಕಿದೆ.

ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿ ಪ್ರತಿ ಮನೆಗೆ 80 ರೂಪಾಯಿ ತೆರಿಗೆ ನಿಗದಿಪಡಿಸಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ರೂ 160 ಪಾವತಿಸಬೇಕಿದೆ. ಪುರಸಭೆ ವ್ಯಾಪ್ತಿ ಕೈಗಾರಿಕೆಗಳಿಗೆ ರೂ 320 ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿ 240 ರೂಪಾಯಿ ನಿಗದಿಪಡಿಸಲಾಗಿದೆ.

ಒಟ್ಟಾರೆ ಐದು ನಗರ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ಹಿಂದಿನ ವರ್ಷಗಳ ಬಾಕಿ ಮೊತ್ತವೇ ರೂ 446.29 ಲಕ್ಷ ಇದೆ. ಪ್ರಸಕ್ತ ಸಾಲಿನ ಬೇಡಿಕೆ 265.56 ಲಕ್ಷ ರೂಪಾಯಿ. ಒಟ್ಟು ಬೇಡಿಕೆ 708.85 ಲಕ್ಷ ರೂಪಾಯಿ. ಮೇ ಅಂತ್ಯಕ್ಕೆ ವಸೂಲಿಯಾಗಿರುವ ತೆರಿಗೆ ಮೊತ್ತ ಕೇವಲ 25.25 ಲಕ್ಷ ರೂಪಾಯಿ! ಇನ್ನೂ ರೂ 696.6 ಲಕ್ಷ ವಸೂಲಿಯಾಗಬೇಕಿದೆ. ನೀರಿನ ತೆರಿಗೆ ವಸೂಲಾತಿಯಲ್ಲಿ ಶೇ. 3.56ರಷ್ಟು ಪ್ರಗತಿಯಾಗಿದೆ.

ಕರ ವಸೂಲಿ-ಬಾಕಿ ವಿವರ

ಚಾಮರಾಜನಗರ ನಗರಸಭೆ

ಚಾಮರಾಜನಗರ ನಗರಸಭೆ ವ್ಯಾಪ್ತಿ ಎಸ್‌ಎಎಸ್ ತೆರಿಗೆಯ ಪ್ರಾರಂಭಿಕ ಶಿಲ್ಕು 102.87 ಲಕ್ಷ ರೂಪಾಯಿ ಇದೆ. ಪ್ರಸಕ್ತ ಸಾಲಿನ ತೆರಿಗೆ ಬೇಡಿಕೆ ರೂ 71.15 ಲಕ್ಷ. ಒಟ್ಟು ಬೇಡಿಕೆ 174.02 ಲಕ್ಷ ರೂಪಾಯಿ. ಮೇ ಅಂತ್ಯಕ್ಕೆ ರೂ 17.15 ಲಕ್ಷ ವಸೂಲಿಯಾಗಿದ್ದು, ಇನ್ನೂ ರೂ 156.87 ಲಕ್ಷ ಬಾಕಿ ಇದೆ. ಕರ ವಸೂಲಾತಿಯಲ್ಲಿ ಒಟ್ಟಾರೆ ಪ್ರಗತಿ ಶೇ. 9.86ರಷ್ಟಿದೆ.

ನೀರಿನ ತೆರಿಗೆ ವಸೂಲಾತಿಯಲ್ಲೂ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ. ಹಿಂದಿನ ವರ್ಷಗಳ ಬಾಕಿ ಮೊತ್ತವೇ ರೂ 93.97 ಲಕ್ಷದಷ್ಟಿದೆ. ಪ್ರಸಕ್ತ ಸಾಲಿನಡಿ ರೂ 93.14 ಲಕ್ಷ ಬೇಡಿಕೆಯಿದೆ. ಒಟ್ಟು ರೂ 184.11 ಲಕ್ಷ ಬೇಡಿಕೆ ಇದ್ದು, ವಸೂಲಾತಿಯಾಗಿರುವುದು ಕೇವಲ 6.96 ಲಕ್ಷ ರೂಪಾಯಿ. ಒಟ್ಟು ವಸೂಲಾತಿ ಸಾಧನೆ ಶೇ. 3.78ರಷ್ಟಿದೆ. ಇನ್ನೂ 177.15 ಲಕ್ಷ ರೂಪಾಯಿ ವಸೂಲಾತಿಯಾಗಬೇಕಿದೆ.

ಕೊಳ್ಳೇಗಾಲ ನಗರಸಭೆ
ಕೊಳ್ಳೇಗಾಲ ನಗರಸಭೆಯಲ್ಲಿ ಹಿಂದಿನ ವರ್ಷಗಳ ಎಸ್‌ಎಎಸ್ ತೆರಿಗೆ ಬಾಕಿ ರೂ 47.99 ಲಕ್ಷ ಇದೆ. ಈ ಬಾರಿಯ ಗುರಿ 60 ಲಕ್ಷ ರೂಪಾಯಿ. ಒಟ್ಟು ಬೇಡಿಕೆ ರೂ 107.99 ಲಕ್ಷ. ವಸೂಲಿಯಾಗಿರುವ ಮೊತ್ತ ರೂ 21.19 ಲಕ್ಷ. ಒಟ್ಟಾರೆ ಶೇ. 19.62ರಷ್ಟು ಸಾಧನೆಯಾಗಿದ್ದು, ಇನ್ನೂ ರೂ 86.80 ಲಕ್ಷ ಕರ ಬಾಕಿಯಿದೆ.

ಉಳಿದ ಸ್ಥಳೀಯ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಈ ನಗರಸಭೆಯಲ್ಲಿ ನೀರಿನ ತೆರಿಗೆ ಬಾಕಿ ಮೊತ್ತ ಹೆಚ್ಚಿದೆ. ಹಳೆಯ ಬಾಕಿ ಮೊತ್ತ 293.81 ಲಕ್ಷ ರೂಪಾಯಿ ಇದೆ. ಈ ವರ್ಷದ ಬೇಡಿಕೆ 116.16 ಲಕ್ಷ ರೂಪಾಯಿ. ಒಟ್ಟು ಬೇಡಿಕೆ 409.97 ಲಕ್ಷ ರೂಪಾಯಿ. ಆದರೆ, ಮೇ ಅಂತ್ಯಕ್ಕೆ ವಸೂಲಿಯಾಗಿರುವುದು ಕೇವಲ ರೂ 4.54 ಲಕ್ಷ ಮಾತ್ರ. ಒಟ್ಟು ವಸೂಲಾತಿ ಸಾಧನೆ ಶೇ. 1.11ರಷ್ಟಿದೆ. ಇನ್ನೂ ರೂ 405.43 ಲಕ್ಷ ತೆರಿಗೆ ವಸೂಲಿಯಾಗಬೇಕಿದೆ.

ಗುಂಡ್ಲುಪೇಟೆ ಪುರಸಭೆ
ಗುಂಡ್ಲುಪೇಟೆ ಪುರಸಭೆಯಲ್ಲಿ ಎಸ್‌ಎಎಸ್ ತೆರಿಗೆಯ ಹಿಂದಿನ ಬಾಕಿ ಮೊತ್ತ 3.90 ಲಕ್ಷ ರೂಪಾಯಿ. ಈ ಸಾಲಿನ ಬೇಡಿಕೆ ರೂ 29.10 ಲಕ್ಷ. ಒಟ್ಟು ಬೇಡಿಕೆ ಮೊತ್ತ 33 ಲಕ್ಷ ರೂಪಾಯಿ. ಮೇ ಅಂತ್ಯಕ್ಕೆ ರೂ 5.16 ಲಕ್ಷ ವಸೂಲಿಯಾಗಿದ್ದು, ಶೇ. 15.64ರಷ್ಟು ಸಾಧನೆಯಾಗಿದೆ. ಇನ್ನೂ 27.84 ಲಕ್ಷ ರೂಪಾಯಿ ತೆರಿಗೆ ಬಾಕಿಯಿದೆ.

ನೀರಿನ ತೆರಿಗೆಯ ಹಿಂದಿನ ವರ್ಷಗಳ ಬಾಕಿ ರೂ 20.01 ಲಕ್ಷ ಇದೆ. ಪ್ರಸಕ್ತ ವರ್ಷದ ಬೇಡಿಕೆ 32.23 ಲಕ್ಷ ರೂಪಾಯಿ. ಒಟ್ಟು ಬೇಡಿಕೆ ರೂ 52.24 ಲಕ್ಷ ಇದ್ದು, ಕೇವಲ 2.33 ಲಕ್ಷ ವಸೂಲಿಯಾಗಿದೆ. ರೂ 49.91 ಲಕ್ಷ ತೆರಿಗೆ ಬಾಕಿಯಿದೆ. ಒಟ್ಟು ವಸೂಲಾತಿ ಸಾಧನೆ ಶೇ.4.46ರಷ್ಟಿದೆ.

ಯಳಂದೂರು ಪಟ್ಟಣ ಪಂಚಾಯಿತಿ
ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಎಸ್‌ಎಎಸ್ ಹಳೆಯ ಬಾಕಿ ರೂ 3.55 ಲಕ್ಷ. ಈ ವರ್ಷದ ಬೇಡಿಕೆ ರೂ 11.25 ಲಕ್ಷ. ಒಟ್ಟು ಬೇಡಿಕೆ 14.80 ಲಕ್ಷ ರೂಪಾಯಿ. ಕೇವಲ ರೂ 2.05 ಲಕ್ಷ ವಸೂಲಿಯಾಗಿದ್ದು, ಶೇ. 13.85ರಷ್ಟು ಸಾಧನೆಯಾಗಿದೆ. ಇನ್ನೂ ರೂ 12.75 ಲಕ್ಷ ಕರ ವಸೂಲಿಯಾಗಬೇಕಿದೆ.

ನೀರಿನ ತೆರಿಗೆಯ ಪ್ರಾರಂಭಿಕ ಶಿಲ್ಕು 16.91 ಲಕ್ಷ ರೂಪಾಯಿ ಇದೆ. ಪ್ರಸಕ್ತ ಸಾಲಿನ ಬೇಡಿಕೆ 12.03 ಲಕ್ಷ ರೂಪಾಯಿ. ಒಟ್ಟು ಬೇಡಿಕೆ 28.94 ಲಕ್ಷ ರೂಪಾಯಿ. ಮೇ ಅಂತ್ಯಕ್ಕೆ ರೂ 1.54 ಲಕ್ಷ ವಸೂಲಿಯಾಗಿದ್ದು, ಶೇ. 5.32ರಷ್ಟು ಸಾಧನೆಯಾಗಿದೆ. ಉಳಿದ 27.40 ಲಕ್ಷ ರೂಪಾಯಿ ವಸೂಲಾತಿಯಾಗಿಲ್ಲ.

ಹನೂರು ಪಟ್ಟಣ ಪಂಚಾಯಿತಿ
ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ ಎಸ್‌ಎಎಸ್ ಹಳೆಯ ಬಾಕಿ ಮೊತ್ತ 17 ಸಾವಿರ ರೂಪಾಯಿ ಇದೆ. ಪ್ರಸಕ್ತ ಸಾಲಿನ ಬೇಡಿಕೆ ರೂ 25 ಲಕ್ಷ. ಒಟ್ಟು ಬೇಡಿಕೆ 25.17 ಲಕ್ಷ ರೂಪಾಯಿ. ವಸೂಲಿಯಾಗಿರುವುದು ಕೇವಲ 5.97 ಲಕ್ಷ ರೂಪಾಯಿ. ರೂ 19.20 ಲಕ್ಷ ಬಾಕಿಯಿದ್ದು, ವಸೂಲಾತಿಯಲ್ಲಿ ಶೇ. 23.72ರಷ್ಟು ಸಾಧನೆಯಾಗಿದೆ.

ನೀರಿನ ತೆರಿಗೆಯಲ್ಲಿ ಹಿಂದಿನ ವರ್ಷಗಳ ಬಾಕಿ ಮೊತ್ತ ರೂ 17.59 ಲಕ್ಷ. ಈ ಸಾಲಿನ ಬೇಡಿಕೆ ರೂ 10 ಲಕ್ಷ. ಒಟ್ಟು ಬೇಡಿಕೆ ರೂ 27.59 ಲಕ್ಷ. ವಸೂಲಿಯಾಗಿರುವುದು ಕೇವಲ 88 ಸಾವಿರ ರೂಪಾಯಿ ಮಾತ್ರ. ರೂ 26.71 ಲಕ್ಷ ಬಾಕಿ ಇದೆ. ವಸೂಲಾತಿಯಲ್ಲಿ ಶೇ. 3.19ರಷ್ಟು ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT