ಸೋಮವಾರ, ಮೇ 23, 2022
21 °C

500 ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಬಿಬಿಎಂಪಿ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವದೆಹಲಿ ಮಾದರಿಯಲ್ಲಿ ನಗರದಲ್ಲಿ ನಿರ್ಮಾಣ, ನಿರ್ವಹಣೆ ಹಾಗೂ ಹಸ್ತಾಂತರ (ಪಿಪಿಪಿ) ಯೋಜನೆಯಡಿ 500 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ.ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಈ ಸಂಬಂಧ ಸೂಕ್ತ ಪ್ರಸ್ತಾವವನ್ನು ಸಂಬಂಧಪಟ್ಟ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯ ಮುಂದೆ ಮಂಡಿಸಲು ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.ನಗರದಲ್ಲಿ ಈಗಿರುವ ಶೌಚಾಲಯಗಳು ಸೂಕ್ತ ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿರುವುದರಿಂದ 500 ಕಡೆಗಳಲ್ಲಿ ಜಾಗ ಗುರುತಿಸಿ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಪಾಲಿಕೆ ಚಿಂತನೆ ನಡೆಸಿದೆ.10 ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ: ಇನ್ನು, ವಾಹನ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಪಿಪಿಪಿ ಯೋಜನೆಯಡಿ 10 ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಗಳನ್ನು ನಿರ್ಮಿಸಲು ಕೂಡ ಪಾಲಿಕೆ ನಿರ್ಧರಿಸಿದೆ.ವಾಹನ ದಟ್ಟಣೆ ಹೆಚ್ಚಾಗಿರುವ ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಸಾರ್ವಜನಿಕರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವಂತಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ 10 ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಗಳನ್ನು ನಿರ್ಮಿಸುವುದಕ್ಕೂ ಸಂಬಂಧಪಟ್ಟ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯ ಪ್ರಸ್ತಾವ ಮುಂದಿಡಲು ಆಯುಕ್ತರನ್ನು ಕೋರಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.12 `ಪಾಲಿಕಾ ಬಜಾರ್~ಗಳ ನಿರ್ಮಾಣ: ಬಿಬಿಎಂಪಿಯ ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುವಂತಹ ಕಡೆಗಳಲ್ಲಿ ವಿಶೇಷವಾಗಿ ಹೊಸ ವಲಯಗಳಲ್ಲಿ ಪಿಪಿಪಿ ಯೋಜನೆಯಡಿ 12 ಪಾಲಿಕಾ ಬಜಾರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇನ್ನು, ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯಕ್ಕಾಗಿ ಬಜೆಟ್‌ನಲ್ಲಿ ಮೀಸಲಿಡುವ ಮೊತ್ತದಲ್ಲಿ ಕಡಿತ ಮಾಡುವಂತಹ ಷರತ್ತಿಗೊಳಪಟ್ಟು ಮೇಯರ್ ವೈದ್ಯಕೀಯ ಪರಿಹಾರ ನಿಧಿಗೆ ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಆಯುಕ್ತರನ್ನು ಕೋರಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಬಿಬಿಎಂಪಿಯ 2012-13ನೇ ಸಾಲಿನ ಬಜೆಟ್ ಇನ್ನೂ ಮಂಡನೆಯಾಗದ ಕಾರಣ ಬಡವರಿಗೆ ಮೇಯರ್ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ.  ಈ ಹಿನ್ನೆಲೆಯಲ್ಲಿ ಮೇಯರ್ ನಿಧಿಗೆ ತಕ್ಷಣ 2 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಆಯುಕ್ತರನ್ನು ಕೋರಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.