ಮಂಗಳವಾರ, ಮಾರ್ಚ್ 2, 2021
23 °C
ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿ: ಜಿಲ್ಲಾಧಿಕಾರಿ ಸೂಚನೆ‌

5,100 ಹೆಕ್ಟೇರ್‌ ಕೃಷಿ ಭೂಮಿ ಜಲಾವೃತ; ನದಿಗೆ ಇಳಿಯದಂತೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

5,100 ಹೆಕ್ಟೇರ್‌ ಕೃಷಿ ಭೂಮಿ ಜಲಾವೃತ; ನದಿಗೆ ಇಳಿಯದಂತೆ ಎಚ್ಚರಿಕೆ

ಬೆಳಗಾವಿ: ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ಎರಡು ದಂಡೆಯ 5,100 ಹೆಕ್ಟೇರ್ ಕೃಷಿ ಜಮೀನಿನಲ್ಲಿ ನೀರು ನಿಂತಿದೆ. ಕಬ್ಬು, ಶೇಂಗಾ, ಜೋಳ, ಸೋಯಾಬಿನ್, ಉದ್ದು, ಹೆಸರು, ತರಕಾರಿ ಬೆಳೆಗಳು ಸ್ವಲ್ಪಮಟ್ಟಿಗೆ ಹಾನಿಯಾಗಿವೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು, ಜನರು ದೋಣಿಗಳನ್ನು ಬಳಸಿ ನದಿ ದಾಟುವ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ಎಚ್ಚರಿಸಿದ್ದಾರೆ.ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ, ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೃಷ್ಣಾ ನದಿಯ ಎರಡೂ ದಂಡೆಯ ಜಮೀನಿಗೆ ನೀರು ನುಗ್ಗಿರುವುದರಿಂದ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ತಕ್ಷಣ ಸಮೀಕ್ಷೆ ನಡೆಸುವಂತೆ ಅವರು ಸೂಚನೆ ನೀಡಿದರು.ಜಮೀನಿನಲ್ಲಿ ನಿಂತಿರುವ ನೀರಿನಮಟ್ಟ ಇಳಿದ ನಂತರ ಬೆಳೆಹಾನಿ ಸಮೀಕ್ಷೆ ಆರಂಭಿಸುವುದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.ನದಿ ದಡದ ಜಮೀನು ಹಾಗೂ ಗ್ರಾಮಗಳ ಸಮೀಪ ನೀರು ನಿಂತಿರುವುದರಿಂದ ಯಾವುದೆ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಸಾರ್ವಜನಿಕರು ಭಯ ಪಡಬಾರದು. ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನದಿಗಳು ತುಂಬಿಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನದಿ ತೀರದ ಗ್ರಾಮಗಳ ಬಳಿ ದೋಣಿಗಳನ್ನು ಇರಿಸಲಾಗಿದೆ. ಸಾರ್ವಜನಿಕರು ಈ ದೋಣಿಗಳನ್ನು ಬಳಸಿ ನದಿ ದಾಟುವ ದುಸ್ಸಾಹಸ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.