ಸೋಮವಾರ, ಜೂಲೈ 6, 2020
24 °C

6ತಿಂಗಳಲ್ಲಿ ಕಾಮಗಾರಿ ಮುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

6ತಿಂಗಳಲ್ಲಿ ಕಾಮಗಾರಿ ಮುಗಿಸಿ

ಕೆಂಭಾವಿ: “ಅಯ್ಯ ಇದು ಕಿಚನ್ನಾ! ಇಸ್ಟು ಗಲೀಜಾ! ಇಲ್ಲಿ ಗ್ಯಾಸ್ ವ್ಯವಸ್ಥೆ ಇಲ್ಲವಾ ಯಾರು ವಾರ್ಡನ್ ಅವರೆಲ್ಲಿದ್ದಾರೆ”- ಹೀಗೆ ಕೇಳಿದ್ದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುರನೀತ್ ತೇಜ್ ಮೆನನ್. ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಹಠಾತ್ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಡುಗೆ ಕೋಣೆ ವೀಕ್ಷಿಸಿದ ಅವರು, ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ, ಅಡುಗೆ ಕೋಣೆ ಪರಿಶೀಲಿಸಿ  ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೂಲದ ಗುತ್ತಗೆದಾರರಿಗೆ ಈ ಕಟ್ಟಡ ಕಾಮಗಾರಿಯನ್ನು ನೀಡಲಾಗಿದ್ದು, ಇನ್ನು 6 ತಿಂಗಳೊಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗುವುದು, ಕಾಮಗಾರಿಗೆ ಇದುವರೆಗೂ 90.9 ಲಕ್ಷ ರೂಪಾಯಿ ಹಣ ವ್ಯಯವಾಗಿದ್ದು, ಇನ್ನು ಹಣ ಬೇಕಾಗುತ್ತದೆ. ಆ ಬಗ್ಗೆ ಪರಿಶೀಲಿಸಿ ವರದಿ ತಯಾರಿಸಲಾಗುವುದು.

 

ಹಿಂದಿನ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ ಮೇಲ್ವಿಚಾರಕರನ್ನು ಅಮಾನತು ಮಾಡಿ ಕಡತಗಳನ್ನು ಸೀಜ್ ಮಾಡಿರುವ ಬಗ್ಗೆ ತನಿಖೆ ನಡೆಸಿ ವರದಿ ಕೊಡಲು ಸ್ಥಳದಲ್ಲಿದ್ದ ಉಪಕಾರ್ಯದರ್ಶಿಗಳಿಗೆ ಸೂಚಿಸಿದರು. ಮೂಲೆಗುಂಪಾದ ಸೋಲಾರ್ ವಾಟರ್ ಹೀಟರ್‌ಗಳನ್ನು ಶೀಘ್ರದಲ್ಲಿ ಅಳವಡಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಅಡುಗೆ ಕೆಲಸಗಾರರು 6 ತಿಂಗಳಿಂದ ವೇತನವಿಲ್ಲ ಎಂದಾಗ, ಯಾರು ಗುತ್ತೆದಾರರು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ, ವೇತನ ಕೊಡಿಸಿ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರು.ಉಪಕಾರ್ಯದರ್ಶಿ ಬೋಸ್ಲೆ, ಕಾರ್ಯಪಾಲಕ ಎಂಜಿನಿಯರ್ ಮಾಲಿ ಬಿರಾದಾರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚನ್ನಬಸಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಬಂದೇನವಾಜ, ಎಇಇ ಡೊಳ್ಳೆ ಇದ್ದರು.ಊಟ ಮಾಡಿದ ಸಿ.ಎಸ್:      

ಪಟ್ಟದ ವಸತಿ ಶಾಲೆಗೆ ಗುರುವಾರ ಹಠಾತ್ ಭೇಟಿ ನೀಡಿದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುರನೀತ್ ತೇಜ್ ಮೆನನ್, ವಸತಿ ಶಾಲೆಯಲ್ಲಿ ಊಟ ಮಾಡಿದರು. ಅಧಿಕಾರಿಗಳು ಸಿ.ಎಸ್. ಊಟ ಮಾಡುತ್ತಾರೆ ಎಂದು ಹೊಟೇಲ್‌ನಿಂದ ಊಟ ತಂದಿದ್ದನ್ನು ಗಮನಿಸಿದ ಅವರು, ಇದು ಇಲ್ಲಿಯ ಊಟವಲ್ಲ. ನನಗೆ ಇಲ್ಲಿಯೇ ತಯಾರಿಸಿದ ಊಟ ಬೇಕು ಎಂದು ಕೇಳಿ ವಸತಿ ಶಾಲೆಯಲ್ಲಿ ಮಾಡಿದ್ದ ಅನ್ನ, ಕಟಿ ರೊಟ್ಟಿ, ಬ್ಯಾಳಿಯನ್ನು ಸವಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.