ಗುರುವಾರ , ಮೇ 13, 2021
17 °C

60 ವರ್ಷದ ನಂತರ ಗಂಧರ್ವ ಸ್ಮಾರಕ!

ಪ್ರಜಾವಾಣಿ ವಾರ್ತೆ ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾಣಾ ಘರಾಣಾ ಶೈಲಿಯಲ್ಲಿ ಪ್ರಸಿದ್ಧರಾದ ಸವಾಯಿ ಗಂಧರ್ವರ ನೆನಪಿನ ಸ್ಮಾರಕವೊಂದು ಕುಂದಗೋಳದಲ್ಲಿ ತಲೆ ಎತ್ತಿದೆ. ಅದು ಅವರು ನಿಧನರಾದ 60 ವರ್ಷಗಳ ನಂತರ!ಆಧುನಿಕತೆಯ ಸ್ಪರ್ಶ ಪಡೆದಿರುವ ಸ್ಮಾರಕ ಭವನದಲ್ಲಿ 500 ಆಸನಗಳ ಸಭಾಂಗಣವೇ ಆಕರ್ಷಣೆ. ಉದ್ಘಾಟನೆಗೊಂಡ ನಂತರ ನಿರಂತರವಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ ಧಾರವಾಡ ಉತ್ಸವವನ್ನು ಇದೇ ಸ್ಮಾರಕದಲ್ಲಿ ನಡೆಸುವ ಉದ್ದೇಶ ಜಿಲ್ಲಾಡಳಿತಕ್ಕಿದೆ.`ಸ್ಮಾರಕದ ಸುತ್ತ ಉದ್ಯಾನವನ್ನು ಹಾಗೂ ಇದರ ಪಕ್ಕ ಇರುವ ಕೆರೆಯನ್ನು ಅಭಿವೃದ್ಧಿಗೊಳಿಸುತ್ತೇವೆ. ಇದರಿಂದ ಪ್ರತಿಭಾ ಪ್ರದರ್ಶನಕ್ಕೆ ಸ್ಥಳೀಯರಿಗೆ ಅವಕಾಶ ಆಗುವುದರ ಜೊತೆಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ಹೆದ್ದಾರಿ ಪಕ್ಕವೇ ಇರುವುದರಿಂದ ಪ್ರವಾಸಿ ಕೇಂದ್ರವಾಗಿ ಗಮನ ಸೆಳೆಯಲಿದೆ~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ `ಪ್ರಜಾವಾಣಿ~ಗೆ ತಿಳಿಸಿದರು.ಸ್ಮಾರಕ ಉದ್ಘಾಟನೆ ನಂತರ ಸವಾಯಿ ಗಂಧರ್ವರ ನೆನಪನ್ನು ಶಾಶ್ವತಗೊಳಿಸುವ ಕಾರ್ಯಕ್ಕೆ ಕುಂದಗೋಳದ ಜನ ಸಜ್ಜಾಗಿದ್ದಾರೆ. ಅದರಲ್ಲೂ ಹೆಚ್ಚು ಖುಷಿಪಟ್ಟವರು ಸವಾಯಿ ಗಂಧರ್ವರ ವಿಶ್ವಸ್ಥ ಸಂಸ್ಥೆ ಅಧ್ಯಕ್ಷರೂ ಮಾಜಿ ಸಚಿವರೂ ಆದ ಎಂ.ಎಸ್. ಕಟಗಿ. ಅವರು ಸವಾಯಿ ಗಂಧರ್ವರನ್ನು ಕಂಡವರು, ಅವರ ಹಾಡು ಕೇಳಿದವರು.`ಸವಾಯಿ ಗಂಧರ್ವರ ಷಷ್ಟ್ಯಬ್ದಿ ಸಮಾರಂಭ ಕುಂದಗೋಳದ ಗಣೇಶ ಮಿಲ್‌ನೊಳಗೆ 1946ರಲ್ಲಿ ನಡೆದಾಗ ಕಣ್ಣಾರೆ ನೋಡಿ ಸಂತೋಷಪಟ್ಟಿದ್ದೆ. ಈಗ ಅವರು ತೀರಿಕೊಂಡು 60 ವರ್ಷಗಳಾದ ಮೇಲಾದರೂ ಅವರ ಹೆಸರಿನ ಸ್ಮಾರಕ ಆಗುತ್ತಿರುವುದನ್ನು ಕಂಡು ಖುಷಿಗೊಂಡಿರುವೆ~ ಎಂದು ಅವರು ಹೇಳಿದರು.ಧಾರವಾಡ ತಾಲ್ಲೂಕಿನ ಅಮ್ಮಿನಭಾವಿಯಲ್ಲಿ ಸವಾಯಿ ಗಂಧರ್ವರು ಜನಿಸಿದ್ದರೂ ಅವರು ಬೆಳೆದದ್ದು ಕುಂದಗೋಳದಲ್ಲಿ. ಅವರ ತಂದೆ ಗಣೇಶ ಜೋಶಿ ಕುಂದಗೋಳದ ನಾಡಿಗೇರ ವಾಡೆಯಲ್ಲಿ ಕಾರಕೂನರಾಗಿದ್ದರು. ಈ ವಾಡೆಗೆ ಕಿರಾಣಾ ಘರಾಣಾ ಶೈಲಿಯ ಸಂಗೀತವನ್ನು ಆರಂಭಿಸಿದ್ದ ಮಿರಜದ ಕರೀಂಖಾನ್ ಅವರು ಆಗಾಗ ಭೇಟಿ ಕೊಡುತ್ತಿದ್ದರು. ಅವರು ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಹೋಗುವ ಮುನ್ನ ನಾಡಿಗೇರ ವಾಡೆಯಲ್ದ್ದ್‌ದು, ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಅವರ ಸಂಗೀತ ಕೇಳಿಸಿಕೊಂಡು ಬಾಲಕ ರಾಮಚಂದ್ರ ಉರುಫ್ ಸವಾಯಿ ಗಂಧರ್ವರು ಗುನುಗುನಿಸುತ್ತಿರುವುದನ್ನು ಗಮನಿಸಿದ ನಾನಾಸಾಹೇಬ ನಾಡಿಗೇರರು, ಕರೀಂಖಾನ್‌ರ ಬಳಿ ಪ್ರಸ್ತಾಪಿಸಿ ಸಂಗೀತ ಕಲಿಯಲು ಪ್ರೇರೇಪಿಸಿದರು. ನಂತರ ಅವರ ಬಳಿ ಸಂಗೀತ ಕಲಿತು, ಮಹಾರಾಷ್ಟ್ರಕ್ಕೆ ತೆರಳಿ ಮರಾಠಿ ನಾಟಕಗಳಲ್ಲಿ ಸ್ತ್ರೀಪಾತ್ರ ಮಾಡಿದ ಹೆಗ್ಗಳಿಕೆ ಅವರದು. "ಆಮೇಲೆ ಕಿರಣಾ ಘರಾಣಾ ಶೈಲಿಯಲ್ಲಿ ಪರಿಣತರಾದ ನಂತರ ಕುಂದಗೋಳದಲ್ಲಿ ನೆಲೆ ನಿಂತರು. ಆಗ  ಭೀಮಸೇನ ಜೋಶಿ ಅವರನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿಸಿದರು. ನಂತರ ಗಂಗೂಬಾಯಿ ಹಾನಗಲ್ಲ ಅವರಿಗೂ ಕಲಿಸಿದರು. ಇಂಥ ಸವಾಯಿ ಗಂಧರ್ವರ ಪುಣ್ಯತಿಥಿಯನ್ನು ಪ್ರತಿ ವರ್ಷ 2-3 ದಿನಗಳವರೆಗೆ ಸಂಗೀತದ ಮೂಲಕ ನಮನ ಸಲ್ಲಿಸುವ ಕಾರ್ಯ ವಾಡೆಯಲ್ಲಿ ಹಾಗೂ ಸವಾಯಿ ಗಂಧರ್ವರ ವಿಶ್ವಸ್ಥ ಸಂಸ್ಥೆ ಮೂಲಕ ನಡೆಯುತ್ತಿದೆ. ಆದರೆ ಅವರ ಸ್ಮರಣಾರ್ಥ ಸ್ಮಾರಕವಾಗಬೇಕೆನ್ನುವ ಬೇಡಿಕೆ ಅಲ್ಲಿಯ ಜನರದಾಗಿತ್ತು. ಇದಕ್ಕಾಗಿ 2010ರ ಫೆಬ್ರುವರಿ 21ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ರೂ 2 ಕೋಟಿ ಅನುದಾನದಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಕ್ಕಿತು. ಇದೀಗ ಶೇ 90ರಷ್ಟು ಕಾಮಗಾರಿಗಳು ಅಂತ್ಯಗೊಂಡಿದ್ದು ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ.ನಾಡಗೀರ ಮನೆತನದ ಪಂ. ಅಶೋಕ ನಾಡಗೀರ ಅವರು `ಸವಾಯಿ ಗಂಧರ್ವರ ಪುಣ್ಯತಿಥಿಯನ್ನು ಆಚರಿಸಲು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಪೆಂಡಾಲು, ಊಟ, ಸಂಗೀತ ಕಲಾವಿದರ ಪ್ರಯಾಣ ಭತ್ಯೆ ಹೀಗೆ ಎಲ್ಲದಕ್ಕೂ ಪ್ರಾಯೋಜಕರನ್ನು ಹುಡುಕಲು ಸಾಕಾಗುತ್ತಿತ್ತು. ಸ್ಮಾರಕ ಭವನದಿಂದ ಪೆಂಡಾಲಿಗಾಗಿ ಖರ್ಚು ಮಾಡುವ ದುಡ್ಡು ಉಳಿಯುತ್ತದೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.