ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6.33 ಲಕ್ಷ ನಕಲಿ ಫಲಾನುಭವಿಗಳು : ಸಿಎಂ ಬೊಕ್ಕಸಕ್ಕೆ 304 ಕೋಟಿ ನಷ್ಟ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಇರುವ ಫಲಾನುಭವಿಗಳ ಭೌತಿಕ ಪರಿಶೀಲನೆಯಲ್ಲಿ 6.33 ಲಕ್ಷ ನಕಲಿ ಫಲಾನುಭವಿಗಳು ಇರುವುದು ಪತ್ತೆಯಾಗಿದೆ. ಇವರಿಂದ ಸರ್ಕಾರದ ಬೊಕ್ಕಸಕ್ಕೆ 304 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.

ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗಳಡಿ 2006-07ರಲ್ಲಿ ಇದ್ದ ಒಟ್ಟು ಫಲಾನುಭವಿಗಳ ಸಂಖ್ಯೆ 16,48,420. ಆದರೆ 2010-11ನೇ ಸಾಲಿಗೆ ಫಲಾನುಭವಿಗಳ ಸಂಖ್ಯೆ 40,88,125ಕ್ಕೆ ಏರಿತು.

ಒಬ್ಬ ಫಲಾನುಭವಿ ಒಂದಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವುದು, ಅರ್ಹರಲ್ಲದ ವ್ಯಕ್ತಿಗಳಿಗೆ ಪಿಂಚಣಿ ಮಂಜೂರಾಗಿರುವುದು ಬೆಳಕಿಗೆ ಬಂದಿತ್ತು. ತಾಲ್ಲೂಕು ಮತ್ತು ನಾಡ ಕಚೇರಿಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಮಾಹಿತಿಯನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಈ ರೀತಿ ಆಗಿತ್ತು. ಆದ್ದರಿಂದ ಪರಿಶೀಲನೆಗೆ ಆದೇಶಿಸಲಾಗಿತ್ತು ಎಂದರು.

26 ಜಿಲ್ಲೆಗಳಲ್ಲಿ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲಾಗುತ್ತಿದೆ. ಬಳ್ಳಾರಿ, ಬಾಗಲಕೋಟೆ, ವಿಜಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮೂರು ದಿನಗಳಲ್ಲಿ ಪರಿಶೀಲನಾ ಕಾರ್ಯ ಪೂರ್ಣಗೊಳ್ಳಲಿದೆ. ಹೊಸದಾಗಿ ಅರ್ಜಿ ಸಲ್ಲಿಸಲೂ ಅವಕಾಶವಿದೆ ಎಂದು ಅವರು ಹೇಳಿದರು.

ಪರಿಶೀಲನೆ ನಂತರ 28,117 ಮಂದಿ ತಮ್ಮನ್ನು ಪಿಂಚಣಿ, ವೃದ್ಧಾಪ್ಯ ವೇತನ ಮತ್ತಿತರ ಸೌಲಭ್ಯಗಳಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಪರಿಶೀಲನೆ ನಡೆಸಿ ಈ ಪೈಕಿ 17,897 ಮಂದಿಗೆ ಮತ್ತೆ ಸೌಲಭ್ಯ ನೀಡಲು ಆದೇಶಿಸಲಾಗಿದೆ. ಅನರ್ಹರು ಎಂಬ ಕಾರಣಕ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಅವರಲ್ಲಿ ಅರ್ಹರಾದವರು ಇದ್ದರೆ ಪುನರ್ ಪರಿಶೀಲಿಸಲು ಅವಕಾಶವಿದೆ ಎಂದು ತಿಳಿಸಿದರು.

ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಸೇರಿದಂತೆ ಪ್ರತಿಪಕ್ಷಗಳ ಅನೇಕ ಶಾಸಕರು ಎದ್ದು ನಿಂತು ಫಲಾನುಭವಿಗಳ ಪರಿಶೀಲನೆ ನೆಪದಲ್ಲಿ ಅರ್ಹರನ್ನು ಕೈಬಿಡಲಾಗಿದೆ. ಔಷಧಿ ಕೊಳ್ಳಲೂ ಅವರ ಬಳಿ ಹಣವಿಲ್ಲ. ಕ್ಷೇತ್ರಗಳಿಗೆ ಹೋದರೆ ನಿತ್ಯ ನೂರಾರು ಮಂದಿ ದೂರು ಸಲ್ಲಿಸುತ್ತಾರೆ. ಕೂಡಲೇ ಇದನ್ನು ಸರಿಪಡಿಸಿ ಎಂದು ಆಗ್ರಹಿಸಿದರು.

`ಪರಿಶೀಲನೆ ಸಂದರ್ಭದಲ್ಲಿ ವ್ಯಾತ್ಯಾಸಗಳು ಆಗಿದ್ದರೆ ಶಾಸಕರು ನನ್ನ ಗಮನಕ್ಕೆ ತರಬಹುದು. ಇದೇ 15ರ ಒಳಗೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಸಾಮಾಜಿಕ ಪಿಂಚಣಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಲೋಪಗಳು ಆಗಿದ್ದರೆ ಸರಿಪಡಿಸುವಂತೆ ಸೂಚಿಸಲಾಗುವುದು. ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ~ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT