ಶನಿವಾರ, ಏಪ್ರಿಲ್ 17, 2021
31 °C

7.82 ಕೋಟಿ ಬೆಳೆ ಹಾನಿ ಪರಿಹಾರ ಬಿಡುಗಡೆ: ರಾಜುಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಬರದಿಂದಾಗಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ವಿತರಿಸಲು ರೂ. 7.82 ಕೋಟಿ ರೂಪಾಯಿ ಸಬ್ಸಿಡಿ ಅನುದಾನ ಬಿಡುಗಡೆ ಮಾಡಿದ್ದು, ರೈತರಿಗೆ ಪರಿಹಾರ ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಯಾದಗಿರಿ ಜಿಲ್ಲೆಗೆ ಪೂರ್ಣ ಪ್ರಮಾಣದ ಶೇಂಗಾ ಬೀಜ ತರಿಸಿಕೊಳ್ಳಲಾಗುತ್ತಿದ್ದು, ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹೇಳಿದರು.ನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಗುರುವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ಸ್ವಚ್ಛ, ದಕ್ಷ ಆಡಳಿತ ನೀಡಲು ಸಂಕಲ್ಪ ಮಾಡಿದೆ. ರೈತರ ಬವಣೆಗೆ ಸ್ಪಂದಿಸಿದೆ. ಈ ದಿಸೆಯಲ್ಲಿ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳನ್ನು ಈಗಾಗಲೇ ಬರ ಪೀಡಿತವೆಂದು ಘೋಷಿಸಿದೆ. ಜಿಲ್ಲೆಯ 390 ಗ್ರಾಮಗಳಲ್ಲಿ ರೂ. 769.18 ಲಕ್ಷ ವೆಚ್ಚದಲ್ಲಿ 528 ಕುಡಿಯುವ ನೀರಿನ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 410 ಕಾಮಗಾರಿಗಳು ಪೂರ್ಣಗೊಂಡಿವೆ. ಕೊಳವೆಬಾವಿ ದುರಸ್ತಿ ಮಾಡಲು ತಂಡ ರಚಿಸಿ, ರೂ. 45.10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಹೇಳಿದರು.ರಾಯಚೂರು ಲೋಕಸಭಾ ಸದಸ್ಯರ ಅನುದಾನದಿಂದ ರೂ.1.26 ಕೋಟಿ ಹಾಗೂ ಗುಲಬರ್ಗಾ ಲೋಕಸಭಾ ಸದಸ್ಯರ ಅನುದಾನದಿಂದ ರೂ. 1.13 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎಸ್.ಎಸ್.ಪಿ. ಯೋಜನೆಯಡಿ ರೂ. 4 ಕೋಟಿ ಅನುದಾನದಲ್ಲಿ 58 ಕಾಮಗಾರಿಗಳು ತೆಗೆದುಕೊಳ್ಳಲಾಗಿದೆ. ಅದರಂತೆ ಓ.ಎಸ್.ಪಿ. ಯೋಜನೆಯಡಿ ರೂ. 4 ಕೋಟಿ ಅನುದಾನದಲ್ಲಿ 46 ಕಾಮಗಾರಿ ಪ್ರಗತಿಯಲ್ಲಿವೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 84.31 ಲಕ್ಷ ಅನುದಾನ ಬಿಡುಗಡೆಯಾಗಿದ್ದು, 53 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.ಜಿಲ್ಲೆಯ ಅಂಗವಿಕಲರಿಗೆ ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಗಳ ಅಡಿ 33,888 ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ.  ಭಾಗ್ಯ ಲಕ್ಷ್ಮಿ ಯೋಜನೆಯಡಿ 40,421 ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ. ಸಕಾಲ ಯೋಜನೆಯಡಿ 1,87,844 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.ಕನ್ನಡ ನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್‌ರು, ಸೇರಿದಂತೆ ಎಲ್ಲ ಧರ್ಮಿಯರು, ಧರ್ಮ ಸಹಿಷ್ಣುತೆ, ಸಮನ್ವಯ, ಸೌಹಾರ್ದದಿಂದ ಬದುಕುತ್ತಿರುವ ನಾಡು ನಮ್ಮದಾಗಿದೆ ಎಂದು ಹೇಳಿದರು.1956 ಕ್ಕೂ ಮೊದಲು ಕರ್ನಾಟಕ ವಿವಿಧ ಪ್ರಾಂತ್ಯಗಳಲ್ಲಿ ಹಂಚಿ ಹೋಗಿತ್ತು ಇದರಿಂದ ಕನ್ನಡಿಗರಿಗೆ ಆಡಳಿತಾತ್ಮಕ ಪ್ರಾತಿನಿಧ್ಯ ದೊರೆಯುತ್ತಿರಲಿಲ್ಲ. ಅಭಿವೃದ್ಧಿ ಕುಂಠಿತವಾಗಿತ್ತು. ಇದರಿಂದ ಕನ್ನಡಿಗರು ಹತಾಶೆಗೆ ಒಳಗಾಗಿದ್ದರು. ಕನ್ನಡ ಭಾಷೆ ಮತ್ತು ಕನ್ನಡಿಗರ ಭಾವನೆಗಳಿಗೆ ಬೆಲೆ ಇಲ್ಲದಂತಹ ಪರಿಸ್ಥಿತಿಗಳು ಕನ್ನಡಿಗರನ್ನು ಒಗ್ಗೂಡಿಸಿ ಪ್ರತ್ಯೇಕ ರಾಜ್ಯ ಸ್ಥಾಪಿಸುವ ಹೊರಾಟಕ್ಕೆ ನಾಂದಿಯಾಯಿತು. ಹೋರಾಟದ ಫಲವಾಗಿ 1956 ರ ನವೆಂಬರ್ 1 ರಂದು ಕನ್ನಡ ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರಿದವು. 1973 ರಲ್ಲಿ  ಅಂದಿನ ಮುಖ್ಯಮಂತ್ರಿ ದಿ. ದೇವರಾಜ ಅರಸು, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ ಇಂದಿನ ದಿನವನ್ನು ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ ಎಂದು ವಿವರಿಸಿದರು.ಜನತೆಗೆ ಪಾರದರ್ಶಕ, ದಕ್ಷ ಮತ್ತು ಜನ ಪರ ಹಾಗೂ ಅಭಿವದ್ಧಿ ಪರ ಆಡಳಿತ ನೀಡಲು ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಸಚಿವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಎ.ಬಿ. ಮಾಲಕರಡ್ಡಿ, ಭುವನೇಶ್ವರಿ ದೇವಿಯ ಕೃಪೆಯಿಂದ ಕಾವೇರಿ ನೀರು ಹಂಚಿಕೆ ಮತ್ತು ಮುಂಗಾರು ಮಳೆ ಉತ್ತಮವಾಗಿದ್ದು, ಭವಿಷ್ಯದಲ್ಲಿ ಕರ್ನಾಟಕ ಜನತೆಗೆ ಸಂತೋಷ ಲಭಿಸಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ರೂಪಿಸಿದ ಆಕರ್ಷಿಕ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಸಚಿವರು ಚಾಲನೆ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ನಿವೃತ್ತ ಪ್ರಾಂಶುಪಾಲ ಎಸ್.ಎಸ್. ಹಾಬಳಕರ್ , ಸಾಹಿತ್ಯ ಕ್ಷೇತ್ರದ  ಶ್ರೀನಿವಾಸ ಜಾಲವಾದಿ, ಪತ್ರಕರ್ತರಾದ ಗಿರೀಶ ಶಾಬಾದಿ ಹಾಗೂ ರಫೀಕ್ ಅವರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಸಂಸದ ಸಣ್ಣಫಕೀರಪ್ಪ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೆಂಕಟೇಶ ಗಡ್ಡಿಮನಿ, ಯಾದಗಿರಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವಿಂದ್ರನಾಥ ನಾದ್, ನಗರಸಭೆಯ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಜಿಲ್ಲಾ ವರಿಷ್ಠಾಧಿಕಾರಿ ಡಿ.ರೂಪಾ, ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು ಭಾಗವಹಿಸಿದ್ದರು.ಗಣ್ಯರಿಗೆ ಇಲ್ಲದ ಆಹ್ವಾನ: ಆಕ್ರೋಶ

ಯಾದಗಿರಿ: ಕರ್ನಾಟಕ ರಾಜ್ಯೋತ್ಸವದ ಆಹ್ವಾನ ಪತ್ರಿಕೆಯನ್ನೇ ನಗರದ ಹಲವಾರು ಗಣ್ಯರಿಗೆ ನೀಡಲಾಗಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಮೂರನೇ ಬಾರಿಗೆ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಆದರೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗಣ್ಯರಿಗೆ ನೀಡಿಲ್ಲ. ಹೀಗಾಗಿ ಬಹುತೇಕ ಜನರು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಜಿಲ್ಲಾಡಳಿತದ ಇಂತಹ ಮನೋಭಾವ ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಖಂಡಪ್ಪ ದಾಸನ್ ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರ ಹೆಸರನ್ನು ಮುದ್ರಿಸಿಲ್ಲ. ಶಿಷ್ಟಾಚಾರದ ಪ್ರಕಾರ ರಾಜ್ಯೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರ ಹೆಸರನ್ನು ನಮೂದಿಸಬೇಕು. ಇಲ್ಲಿಯೂ ಅಗೌರವ ತೋರಲಾಗಿದೆ. ಕೂಡಲೇ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.