ಶುಕ್ರವಾರ, ಮೇ 27, 2022
30 °C
2008-2013ರ ಅವಧಿ, ಹೈಕೋರ್ಟಿಗೆ ರಾಜ್ಯ ಸರ್ಕಾರದ ಹೇಳಿಕೆ

79 ಪ್ರಕರಣ, 95 ಆನೆಗಳ ಅಸಹಜ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2008ರಿಂದ 2013ರ ನಡುವಿನ ಅವಧಿಯಲ್ಲಿ 79 ಪ್ರಕರಣಗಳಲ್ಲಿ ಒಟ್ಟು 95 ಆನೆಗಳು ರಾಜ್ಯದಲ್ಲಿ ಅಸಹಜ ಸಾವು ಕಂಡಿವೆ. 60 ಆನೆಗಳು ವಿದ್ಯುತ್ ಅಪಘಾತದಿಂದ ಸತ್ತಿವೆ. 32 ಆನೆಗಳನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಎಲ್ಲ ಪ್ರಕರಣಗಳಲ್ಲಿ ಪೊಲೀಸರು, ಭಾರತೀಯ ದಂಡ ಸಂಹಿತೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ವಿದ್ಯುತ್ ಕಾಯ್ದೆಯ ಅನ್ವಯ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.ಆನೆಗಳ ಅಸಹಜ ಸಾವಿನ ಕುರಿತು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಈ ಹೇಳಿಕೆ ಸಲ್ಲಿಸಿದ ಸರ್ಕಾರದ ಪರ ವಕೀಲ ರವೀಂದ್ರ ಜಿ. ಕೊಲ್ಲೆ, `ವಿದ್ಯುತ್ ಅಪಘಾತದಿಂದ ಆನೆಗಳು ಸಾವನ್ನಪ್ಪಿದ ಆರು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿದೆ.14 ಪ್ರಕರಣಗಳು ವಜಾಗೊಂಡಿವೆ. 34 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಮತ್ತು 25 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ' ಎಂದು ವಿವರಿಸಿದರು.ರಾಜ್ಯದಲ್ಲಿ ಗುರುತಿಸಲಾಗಿರುವ ಆನೆ ಕಾರಿಡಾರ್‌ಗಳಲ್ಲಿ ಯಾವುದೇ ಖಾಸಗಿ ರೆಸಾರ್ಟ್‌ಗಳು, ಹೋಟೆಲ್‌ಗಳು ಇಲ್ಲ. ಅದರೆ ಬಂಡೀಪುರ ಹುಲಿ ಮೀಸಲು ಅರಣ್ಯದ ಪಕ್ಕದ ಕಂದಾಯ ಭೂಮಿಯಲ್ಲಿ ಹಲವಾರು ಖಾಸಗಿ ರೆಸಾರ್ಟ್‌ಗಳು ಇವೆ. ಬಂಡೀಪುರ ಅರಣ್ಯದ ಸುತ್ತ ಆನೆ ಕಾರಿಡಾರ್ ನಿರ್ಮಿಸಲು 5,600 ಎಕರೆ ಪ್ರದೇಶ ಗುರುತಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕರ ಸಹಿ ಇರುವ ಹೇಳಿಕೆಯನ್ನು ವಕೀಲರು ಪೀಠಕ್ಕೆ ಸಲ್ಲಿಸಿದರು.ಜೂನ್ 24ರಂದು ಬೆಂಗಳೂರಿನ ಹೊರವಲಯದಲ್ಲಿ ಆನೆಗಳು ದಾಂಧಲೆ ಎಬ್ಬಿಸಿವೆ.ಅವುಗಳ ಕಾರಿಡಾರ್‌ಅನ್ನು ಮನುಷ್ಯ ಅತಿಕ್ರಮಿಸಿಕೊಂಡಿದ್ದಾನೆ. ಸರ್ಜಾಪುರದಲ್ಲಿ ಈಗ ಒಂದು ಅಂತರರಾಷ್ಟ್ರೀಯ ಶಾಲೆ ತಲೆ ಎತ್ತಿದೆ.

ಹಿಂದೆ ಅಲ್ಲಿ ಆನೆ ಕಾರಿಡಾರ್ ಇತ್ತು. ರಾಜ್ಯದ ಅರಣ್ಯ ಪ್ರದೇಶದಲ್ಲಿ ಇವತ್ತಿಗೂ 97 ಕಲ್ಲು ಕ್ವಾರಿಗಳು ಜೀವಂತವಾಗಿವೆ.ಆನೆಗಳನ್ನು ನೋಡಲು ಹೋಗುವ ಪ್ರವಾಸಿಗರು ಅವುಗಳನ್ನು ಕೆಣಕುತ್ತಾರೆ. ಇದನ್ನು ಪೊಲೀಸರ ಸಹಾಯ ಪಡೆದು ತಡೆಯಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.ಅರಣ್ಯ ಪ್ರದೇಶದಲ್ಲಿರುವ ಕಲ್ಲು ಕ್ವಾರಿಗಳ ಕುರಿತು ವಿವರ ನೀಡುವಂತೆ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತು.ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಲಾಗಿದೆ.

ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ಕಂಬಗಳ ಎತ್ತರ ಕನಿಷ್ಠ 30 ಅಡಿ ಇರಬೇಕು ಎಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹೇಳುತ್ತದೆ. ಆದರೆ ರಾಜ್ಯದಲ್ಲಿರುವ ಕಾನೂನು ಪ್ರಕಾರ ಆನೆ ಕಾರಿಡಾರ್‌ನಲ್ಲಿ ವಿದ್ಯುತ್ ಕಂಬದ ಎತ್ತರ 20 ಅಡಿ ಇದ್ದರೆ ಸಾಕು. ಈ ಕುರಿತು ಹೆಚ್ಚಿನ ಚರ್ಚೆ ಆಗಬೇಕು.

- ಹಿರಿಯ ವಕೀಲ ಎಂ.ಆರ್. ನಾಯಕ್ (ಈ ಪ್ರಕರಣದ ಅಮೈಕಸ್ ಕ್ಯೂರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.