ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ಕ್ಕೆ ಸಂಸತ್ ಭವನದ ಎದುರು ಧರಣಿ

Last Updated 26 ಫೆಬ್ರುವರಿ 2011, 10:55 IST
ಅಕ್ಷರ ಗಾತ್ರ

ಶಿವಮೊಗ್ಗ: ಸಹಕಾರ ಕ್ಷೇತ್ರಕ್ಕೆ ಮಾರಕವಾದ ‘ಬಹು ರಾಜ್ಯಗಳ ಸಹಕಾರ ಸಂಸ್ಥೆಗಳ ಕಾಯ್ದೆ’ ಮಸೂದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮಾರ್ಚ್ 7ರಂದು ದೆಹಲಿಯ ಸಂಸತ್ ಭವನದ ಎದುರು ಒಂದು ದಿನದ ಧರಣಿ ನಡೆಸಲು ಸಹಕಾರ ಸಂಸ್ಥೆಗಳುನಿರ್ಧರಿಸಿವೆ. ಮಸೂದೆ ಜಾರಿಗೆ ತರುವ ಮೂಲಕ ಸಹಕಾರ ಕ್ಷೇತ್ರವನ್ನು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸುತ್ತಿದೆ.

ಅಲ್ಲದೇ, ಸಹಕಾರ  ಸಂಸ್ಥೆಗಳು ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನು ತಿದ್ದುಪಡಿ ಮಾಡುವ ಅಧಿಕಾರ ರಿಜಿಸ್ಟ್ರಾರ್‌ಗೆ ನೀಡುತ್ತಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಗಾಂಧೀಜಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಕೇಂದ್ರ ಸರ್ಕಾರ ಮಸೂದೆ ತರಲು ಮುಂದಾಗಿದೆ. ಅದನ್ನು ಖಂಡಿಸಿ ಅಂದು ಧರಣಿ ನಡೆಸಲಾಗುವುದು. ಅಷ್ಟೇ ಅಲ್ಲ, ಸಂಸತ್‌ನಲ್ಲಿ ಪ್ರಶ್ನೋತ್ತರ ವೇಳೆ ಎನ್‌ಡಿಎ ಸಂಸದರು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದೂ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ಇದಕ್ಕೆ ಪೂರ್ವಭಾವಿಯಾಗಿ ರಾಜ್ಯಾದ್ಯಂತ ಮಾರ್ಚ್ 1ರಂದು ಬಿಜೆಪಿಯ ಸಹಕಾರ ವಿಭಾಗದ ಪದಾಧಿಕಾರಿಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಮನವಿ ಸಲ್ಲಿಸಲಾಗುವುದು ಎಂದೂ ತಿಳಿಸಿದರು. ದೇಶದಲ್ಲಿ 6 ಲಕ್ಷ ಸಹಕಾರ  ಸಂಸ್ಥೆಗಳಿದ್ದು, 26 ಕೋಟಿ ಸಹಕಾರ ಸದಸ್ಯರಿದ್ದಾರೆ. ಆದರೆ, ಈ ಮಸೂದೆಯಿಂದ 3ಲಕ್ಷ ಸಹಕಾರ ಸಂಸ್ಥೆಗಳು ಮುಚ್ಚುವ ಸಾಧ್ಯತೆಗಳಿವೆ. ಅದೇ ರೀತಿ, ರಾಜ್ಯದಲ್ಲಿರುವ 33 ಸಹಕಾರ ಸಂಸ್ಥೆಗಳ ಪೈಕಿ 10 ಸಾವಿರ ಸಂಸ್ಥೆಗಳಿಗೆ ಬೀಗಮುದ್ರೆ ಬೀಳಲಿದೆ. ಇಂತಹ ಕರಾಳ ಮಸೂದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಮಸೂದೆಯ ಸೆಕ್ಷನ್ 47ರ ಪ್ರಕಾರ ಸಹಕಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಬೇಕಾದರೆ ಕೇಂದ್ರ ಸರ್ಕಾರದ ಗಮನಕ್ಕೆ ತರುವುದು ಕಡ್ಡಾಯವಾಗಿದೆ. ಅಲ್ಲದೇ, ನೇರ ತೆರಿಗೆ ಸಂಹಿತೆ ಕಾಯ್ದೆ ಈ ಮಸೂದೆಯಲ್ಲಿದ್ದು, ಕಾರ್ಪೋರೇಟ್ ಕಂಪೆನಿಗಳಂತೆ ಸಹಕಾರ ಸಂಸ್ಥೆಗಳಿಗೆ ಬರುವ ಲಾಭಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ, ತಕ್ಷಣ ಈ ಮಸೂದೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮ್ಯಾಮ್‌ಕೋಸ್ ಉಪಾಧ್ಯಕ್ಷ ನರಸಿಂಹ ನಾಯ್ಕ, ರಾಜ್ಯ ಹಾಪ್‌ಕಾಮ್ಸ್ ನಿರ್ದೆಶಕ ಉಂಬ್ಳೇಬೈಲು ಮೋಹನ್, ಹಾಪ್‌ಕಾಮ್ಸ್ ಅಧ್ಯಕ್ಷ ಸೋಮಶೇಖರ್, ಪದಾಧಿಕಾರಿಗಳಾದ ಹೊಸಹಳ್ಳಿ ರವಿಕುಮಾರ್, ಸರಸ್ವತಿ ರಾಘವೇಂದ್ರ, ವೆಂಕಟೇಶ್, ಬಿಳಕಿ ಕೃಷ್ಣಮೂರ್ತಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT