ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ರಂದು ಐದು ಜಿಲ್ಲೆಗಳಲ್ಲಿ ಬಂದ್: ಮಾನ್ಪಡೆ

ತೊಗರಿಗೆ ಬೆಂಬಲ ಬೆಲೆ ರೂ 5,500 ನಿಗದಿಗೆ ಒತ್ತಾಯ
Last Updated 4 ಜನವರಿ 2014, 6:16 IST
ಅಕ್ಷರ ಗಾತ್ರ

ರಾಯಚೂರು: ತೊಗರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆ ಸೇರಿ ಕನಿಷ್ಠ ₨5,500 ನೀಡಬೇಕು ಎಂದು ಒತ್ತಾಯಿಸಿ ರಾಜ್ಯದಲ್ಲಿ ಅತೀ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಗಳಾದ ಗುಲ್ಬರ್ಗ, ಬಿಜಾಪುರ, ಬೀದರ್, ರಾಯಚೂರು ಮತ್ತು ಯಾದ­ಗಿರಿ ಈ ಐದು ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಜಂಟಿಯಾಗಿ ಈ ಬಂದ್ ಪ್ರತಿಭಟನೆಗೆ ಕರೆ ನೀಡಿವೆ ಎಂದು ಹೇಳಿದರು.

ತೊಗರಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಜತೆಗೆ 1966ರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಬಾರದು ಎಂಬುದು ಪ್ರಮುಖ ಬೇಡಿಕೆಯಾಗಿದೆ.  ರೈತರ ಹಾಗೂ ಸ್ಥಳೀಯ ವ್ಯಾಪಾರಿಗಳ ವಿರೋಧಿ ಮತ್ತು ಬಹು ರಾಷ್ಟ್ರೀಯ ಕಂಪೆನಿ ಪರವಾಗಿದ್ದು, ಕೂಡಲೇ ಈ ನಿರ್ಧಾರ ಕೈ ಬಿಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದರು.

ಒಂದು ಎಕರೆ ತೊಗರಿ ಬೆಳೆಯಲು ಕನಿಷ್ಠ 26 ಸಾವಿರಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ. ಎಕರೆಗೆ 3ರಿಂದ 4 ಕ್ವಿಂಟಲ್ ತೊಗರಿ ಉತ್ಪಾದನೆಯಾಗುತ್ತದೆ.  ಕೇಂದ್ರ ಸರ್ಕಾರವು ₨ 4,300 ಬೆಂಬಲ ಬೆಲೆ ನಿಗದಿ­ಪಡಿಸಿದೆ. ಆದರೆ, ದೇಶದ 2ನೇ ರೈತ ಆಯೋಗದ ಅಧ್ಯಕ್ಷ ಡಾ.ಎಂ.ಎಸ್ ಸ್ವಾಮಿನಾಥನ್ ಅವರು ಕೇಂದ್ರ ಸರ್ಕಾರವು ನಿಗದಿಪಡಿಸಿದ ಬೆಂಬಲ ಬೆಲೆ ರೈತರ ಹಿತ ದೃಷ್ಟಿಯಿಂದ ಸೂಕ್ತವಾಗಿಲ್ಲ. ಬೆಂಬಲ ಬೆಲೆ ಮೇಲೆ ಮತ್ತೆ ಶೇ 50ರಷ್ಟು ಬೆಲೆ ನಿಗದಿಪಡಿಸಿ ದೊರಕಿಸ­ಬೇಕು. ಅವರ ಶಿಫಾರಸಿನ ಪ್ರಕಾರ ₨6,450 ಪ್ರತಿ ಕ್ವಿಂಟಲ್ ತೊಗರಿಗೆ ಬೆಲೆ ದೊರಕಬೇಕು ಎಂದರು.

ಈ ಬೇಡಿಕೆ ಈಡೇರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ರಾಜ್ಯ ಸರ್ಕಾರವು ₨700  ಬೆಂಬಲ ಬೆಲೆಯನ್ನು ತೊಗರಿಗೆ ಘೋಷಣೆ ಮಾಡಿದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆ ಸೇರಿ ಒಟ್ಟು ₨ 5,000 ಆಗುತ್ತದೆ. ಇಷ್ಟು ಬೆಲೆ ರೈತ ಮಾಡಿದ ಖರ್ಚಿಗೂ ಆಗುವುದಿಲ್ಲ. ಕನಿಷ್ಠ ₨ 5,500 ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯ ಮಾಡಲಾಗಿದೆ. ಮುಖ್ಯಮಂತ್ರಿಗಳಿಗೆ, ಕಾನೂನು ಸಚಿವರಿಗೆ ಮನವಿ ಮಾಡಲಾಗಿದೆ. ಜಯಚಂದ್ರ ಅವರೂ ಈ ಬಗ್ಗೆ ಭರವಸೆ ನೀಡಿದ್ದು, ಸದನದಲ್ಲಿ ಚರ್ಚೆಗೆ ಈ ವಿಷಯ ಪರಿಗಣಿಸಿ ಸ್ಪಂದಿಸುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿದ ₨4,300 ಕ್ಕೆ ಶೇ 30ರಷ್ಟು ಸಹಾಯ­ಧನ ಅಂದರೆ ₨ 1,290 ಆಗುತ್ತದೆ. ಹೀಗಾಗಿ ₨ 700 ಮೊತ್ತವನ್ನು ರಾಜ್ಯ ಸರ್ಕಾರ ನಿಗದಿಪಡಿಸಿರುವುದು ಸ್ವಾಗತಾರ್ಹ. ಆದರೆ, ಉತ್ಪಾದನೆ ವೆಚ್ಚ ಹೆಚ್ಚಾಗಿರುವುದರಿಂದ ಇದನ್ನು ಸರಿಪಡಿಸಲು ಇನ್ನೂ ₨ 500 ಪ್ರೋತ್ಸಾಹಧ ಸೇರಿಸಿ ತೊಗರಿ ಖರೀದಿ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ ಎಂದರು.

ತಾಂಜೇನಿಯಾ, ಕಿನ್ಯಾ, ಬರ್ಮಾ ಮುಂತಾದ ರಾಷ್ಟ್ರಗಳಿಂದ ತೊಗರಿ ಸೇರಿದಂತೆ ಬೇಳೆ ಕಾಳು ಆಮದು ಮಾಡಿಕೊಳ್ಳಲಾಗುತ್ತಿದೆ. 2013– ಸೆಪ್ಟೆಂಬರ್ ತಿಂಗಳವರೆಗೆ 18 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿದೆ. ಈ ಆಮದು ಮಾಡಿಕೊಳ್ಳುತ್ತಿರುವ ತೊಗರಿ ಬೆಲೆಯೇ ಇಲ್ಲಿ ₨ 3,800 ಆಗಿದೆ. ಸರ್ಕಾರಕ್ಕೆ ಹಣ ಉಳಿದರೂ ರೈತರಿಗೆ ತೊಂದರೆಯಾಗಿದೆ. ಕೂಡಲೇ ಕೇಂದ್ರ ಸರ್ಕಾರವು ತೊಗರಿ ಆಮದಿನ ಮೇಲೆ ಆಮದು ಸುಂಕ ವಿಧಿಸಬೇಕು. ಇದರಿಂದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಶೇ 30ರಷ್ಟು ಆಮದು ಸುಂಕ ಹಾಕಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬದಲು ನಿಯೋಗದಲ್ಲಿ ತೆರಳಿ ಮನವರಿಕೆ ಮಾಡಿಕೊಟ್ಟರೆ ಸಹಾಯವಾಗಲಿದೆ. ಸಚಿವ ಜಯಚಂದ್ರ ಅವರಿಗೂ ಈ ಸಂಗತಿ ಗಮನಕ್ಕೆ ತಂದಿರುವುದಾಗಿ ಹೇಳಿದರು.

ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ₨ 20 ಕೋಟಿ ಮಾತ್ರ ಕೊಟ್ಟಿದೆ. ಈ ಹಣ ಏತಕ್ಕೂ ಸಾಲದು. ಈ ಹಣ ಹೆಚ್ಚಳ ಮಾಡಬೇಕು. ತೊಗರಿ ಬೆಳೆಯುವ ಪ್ರದೇಶದ ಎಲ್ಲ ಕಡೆ ತೊಗರಿ ಖರೀದಿ ಕೇಂದ್ರ ಆರಂಭ ಮಾಡಬೇಕು, ಒಬ್ಬ ರೈತರಿಂದ ಕೇವಲ 20 ಕ್ವಿಂಟಲ್ ಮಾತ್ರ ತೊಗರಿ ಖರೀದಿ ಎಂಬ ನಿರ್ಬಂಧ ತೆಗೆದು ಹಾಕಬೇಕು, ತೊಗರಿ ಮಂಡಳಿ ಎಂಬುದನ್ನು ಬದಲಾಯಿಸಿ ಬೇಳೆ ಕಾಳು ಅಭಿವೃದ್ಧಿ ಮಂಡಳಿ ಎಂದು ಮರು ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದು ವಿವರಿಸಿದರು.

ತೊಗರಿ ಬೇಳೆ ಶೇ 24ರಷ್ಟು ಪ್ರೋಟಿನ್‌ಯುಕ್ತ ಆಹಾರವಾಗಿದ್ದು, ಪಡಿತರ ವ್ಯವಸ್ಥೆಯಲ್ಲಿ ಜನರಿಗೆ ದೊರಕಿಸಬೇಕು, ಎಪಿಎಂಸಿ ಕಾಯ್ದೆ 1966ಕ್ಕೆ ತಿದ್ದುಪಡಿ ಬೇಡ, ವಿದೇಶಿ ನೇರ ಬಂಡವಾಳ ಹೂಡಿಕೆ ರೈತರಿಗೂ ಮತ್ತು ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಈ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, ಅಖಿಲ ಭಾರತ ಕಿಸಾನ್ ಸಭಾದ ಕಾರ್ಯದರ್ಶಿ ಮೌಲಾನಾವುಲ್ಲಾ, ಮಲ್ಲಯ್ಯ ಜಾಲಹಳ್ಳಿ, ಕೆ.ಜಿ ವೀರೇಶ, ಭೀಮೇಶ್ವರರಾವ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT