ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ರಿಂದ ರಾಜ್ಯದಲ್ಲಿ ಧರ್ಮಯುದ್ಧ: ಯಡಿಯೂರಪ್ಪ

Last Updated 7 ಸೆಪ್ಟೆಂಬರ್ 2011, 9:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕರಡಿ ಸಂಗಣ್ಣ ಸೆ. 9ರಂದು ನಾಮಪತ್ರ ಸಲ್ಲಿಸಲಿದ್ದು, ವಿರೋಧ ಪಕ್ಷಗಳ ರಾಜಕೀಯ ಸೇಡಿನ ವಿರುದ್ಧ ಅಂದೇ ಧರ್ಮಯುದ್ಧ ಆರಂಭವಾಗಲಿದೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಾಗಪುರದಿಂದ ವಿಶೇಷ ವಿಮಾನದಲ್ಲಿ ಮಂಗಳವಾರ ಸಂಜೆ ಹುಬ್ಬಳ್ಳಿಗೆ ಬಂದಿಳಿದ ಅವರು, ಗದುಗಿಗೆ ತೆರಳುವ ಮೊದಲು ವರದಿಗಾರರ ಜೊತೆ ಮಾತನಾಡಿದರು.

`ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಅವರ ಸಂಪುಟದ ಸಹೋದ್ಯೋಗಿಗಳು ಹಾಗೂ ನಾನು ಎಲ್ಲರೂ ಒಟ್ಟಾಗಿ ಚುನಾವಣಾ ಪ್ರಚಾರ ನಡೆಸಲಿದ್ದೇವೆ. ಕರಡಿ ಸಂಗಣ್ಣ ಅವರ ಗೆಲುವು ಶತಃಸಿದ್ಧ~ ಎಂದು ತಿಳಿಸಿದರು.

`ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅವರಿಗೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗೆಗೆ ಮಾಹಿತಿ ನೀಡಿದ್ದೇವೆ. ಎರಡು ಗಂಟೆಗಳ ಕಾಲ ಚರ್ಚೆ ನಡೆದಿದೆ. ಪಕ್ಷವನ್ನು ಹೇಗೆ ಮುನ್ನಡೆಸಬೇಕು ಎಂಬ ವಿಷಯವಾಗಿ ಇಬ್ಬರೂ ನಾಯಕರು ನಮಗೆ ಮಾರ್ಗದರ್ಶನ ಮಾಡಿದ್ದಾರೆ~ ಎಂದು ಅವರು ವಿವರಿಸಿದರು.

`ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದ ಯಾವುದೇ ಮಾಹಿತಿ ಸರ್ಕಾರದ ಬಳಿ ಇರಲಿಲ್ಲ. ಆದ್ದರಿಂದಲೇ ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಕೋರಲಾಗಿತ್ತು. ಅವರು ನೀಡಿದ ವರದಿ ಕೂಡ ಪೂರ್ಣವಾಗಿಲ್ಲ~ ಎಂದು ಯಡಿಯೂರಪ್ಪ ತಿಳಿಸಿದರು.

`ಕೊಪ್ಪಳ ಉಪ ಚುನಾವಣೆ ಫಲಿತಾಂಶ ಯಡಿಯೂರಪ್ಪ ಅವರ ಭವಿಷ್ಯಕ್ಕೆ ಕನ್ನಡಿಯೇ~ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಫಲಿತಾಂಶದವರೆಗೆ ಕಾಯುವ ಅಗತ್ಯವೇ ಇಲ್ಲ. ಈಗಾಗಲೇ ನಾವು ಆ ಸ್ಥಾನ ಗೆದ್ದಾಗಿದೆ~ ಎಂದು ವಿಶ್ವಾಸದಿಂದ ನುಡಿದರು.

`ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಅಪಾರ ಗೌರವವಿದ್ದು, ಬುಧವಾರ ಕೋರ್ಟ್‌ಗೆ ಹಾಜರಾಗಲಿದ್ದೇನೆ~ ಎಂದ ಅವರು, `ನನಗೆ ನ್ಯಾಯ ದೊರಕುವ ವಿಶ್ವಾಸ ಇದೆ~ ಎಂದರು.

ಸೋಮವಾರ ರಾತ್ರಿ ಹುಬ್ಬಳ್ಳಿಯಲ್ಲೇ ತಂಗಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೆಳಿಗ್ಗೆ ಬಂದ ಯಡಿಯೂರಪ್ಪ ಅದೇ ವಿಮಾನದಲ್ಲಿ ನಾಗಪುರಕ್ಕೆ ಕರೆದೊಯ್ದರು. ನಾಗಪುರದಿಂದ ವಿಶೇಷ ವಿಮಾನದ ಮೂಲಕ ಮರಳಿ ಹುಬ್ಬಳ್ಳಿಗೆ ಆಗಮಿಸಿದ ಮುಖ್ಯಮಂತ್ರಿಗಳು, ಯಡಿಯೂರಪ್ಪ ಅವರನ್ನು ಹುಬ್ಬಳ್ಳಿಯಲ್ಲಿ ಇಳಿಸಿ, ನೇರವಾಗಿ ಬೆಂಗಳೂರಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT