ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಪಂದ್ಯದ ಸಂಭ್ರಮ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ನಡನಾಡಿನ ಕ್ರಿಕೆಟ್‌ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಿರುವ ಆ ಕ್ಷಣಕ್ಕೆ ಈಗ 40ರ ಹರೆಯ. ಕರ್ನಾಟಕ ಕ್ರಿಕೆಟ್‌ ತಂಡವು ಮೊಟ್ಟಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದ ಸಮಯ ಅದು. ಅಂದು ವಿಜೇತ ತಂಡದ ಸದಸ್ಯರಾಗಿದ್ದ ಮೈಸೂರಿನ ಎಸ್. ವಿಜಯಪ್ರಕಾಶ್ ಇವತ್ತಿಗೂ ಆ ಸವಿನೆನಪನ್ನು ನೆನೆದು ಪುಳಕಿತರಾಗುತ್ತಾರೆ.

ಎರ್ರಪಳ್ಳಿ ಪ್ರಸನ್ನ ನಾಯಕತ್ವದ ತಂಡವು ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ತಾನ ತಂಡದ ಸವಾಲನ್ನು ಮೆಟ್ಟಿ ನಿಂತ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ವಿಜಯಪ್ರಕಾಶ್ ಈಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈಸೂರು ವಲಯದ ನಿಮಂತ್ರಕರಾಗಿದ್ದಾರೆ. ಸೆಪ್ಟೆಂಬರ್‌ 25ರಿಂದ 28ರವರೆಗೆ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ನಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ  ಭಾರತ ‘ಎ‘ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿರುವ ಲಿಸ್ಟ್ ‘ಎ’ ಅಂತರರಾಷ್ಟ್ರೀಯ ಮಟ್ಟದ ಪಂದ್ಯದ ತಯಾರಿಯಲ್ಲಿ ತೊಡಗಿದ್ದಾರೆ.

ಮೈಸೂರು ಜಿಮ್ಖಾನದಲ್ಲಿ ತರಬೇತಿ ಪಡೆದು ರಣಜಿ ಟ್ರೋಫಿ ಆಡುವವರೆಗೂ ಬೆಳೆದಿದ್ದು ಅವರ ಸಾಧನೆ. ರಣಜಿ ಟ್ರೋಫಿ ಟೂರ್ನಿಗಳಲ್ಲಿ ಆಡಲು ಸಿಕ್ಕ ಪಂದ್ಯಗಳ ಸಂಖ್ಯೆ ಕಡಿಮೆಯಾಗಿದ್ದರೂ, ಕರ್ನಾಟಕ ಕ್ರಿಕೆಟ್‌ನ ಅವಿಸ್ಮರಣೀಯ ಘಟನಾವಳಿಗಳಿಗೆ ಅವರು ಸಾಕ್ಷಿಯಾಗಿದ್ದು ವಿಶೇಷ. ಮೈಸೂರು ವಿಶ್ವವಿದ್ಯಾಲಯ, ಐಡಿಯಲ್ ಜಾವಾ, ಬಿಇಎಂಎಲ್ ತಂಡಗಳಲ್ಲಿ ಆಲ್ ರೌಂಡರ್ ಆಗಿ, ಕೋಚ್ ಆಗಿ ಮಿಂಚಿದ್ದ ಅವರು 58ನೇ ವಯಸ್ಸಿನವರೆಗೂ ಆಡಿದ್ದರು. ನಿವೃತ್ತಿಯ ನಂತರ ಮೈಸೂರು ಜಿಮ್ಖಾನಾದಲ್ಲಿ ತರಬೇತುದಾರರಾಗಿದ್ದರು.

ಎಲೆಮರೆ ಕಾಯಿಯಾಗಿಯೇ  ಉಳಿದಿದ್ದ ಅವರು, ಮೂರು ವರ್ಷಗಳ ಹಿಂದೆ  ಅಂತರರಾಷ್ಟ್ರೀಯ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಬಳಗವು ಕೆಎಸ್ ಸಿಎ ಆಡಳಿತದ ಚುಕ್ಕಾಣಿ ಹಿಡಿದಾಗ, ವಿಜಯಪ್ರಕಾಶ್ ಮೈಸೂರು ವಲಯ ನಿಮಂತ್ರಕರಾದರು.
ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ದರ್ಜೆಯ ಪಂದ್ಯ ಆಯೋಜಿಸಲು ಸಿದ್ಧವಾಗಿರುವ ‘ಅರಮನೆ ನಗರಿ’ಯ ಕ್ರಿಕೆಟ್‌ ಬೆಳವಣಿಗೆಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿಗೆ:

‘ಮೈಸೂರಿನಲ್ಲಿ ಈ ಬಾರಿ ಲಿಸ್ಟ್ ‘ಎ’ ಪಂದ್ಯ ನಡೆಯುತ್ತಿರುವುದು ಮಹತ್ವದ ವಿಷಯ. 2007ರ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಗಂಗೋತ್ರಿ ಗ್ಲೇಡ್ಸ್ ನಲ್ಲಿ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ತಯಾರಿಸಿದ್ದ ಸ್ಪೋರ್ಟಿಂಗ್ ಪಿಚ್ ಅನ್ನು ನೋಡಿದ್ದ ಸುನಿಲ್ ಗಾವಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.  ಈಗ ನಾಲ್ಕು ದಿನಗಳ ಲಿಸ್ಟ್ ‘ಎ’ ಪಂದ್ಯ ನಡೆಸುತ್ತಿದ್ದೇವೆ. ಕ್ರಿಕೆಟ್‌ನಲ್ಲಿ ನೋಡಿ ಕಲಿಯುವಂತಹ ಅವಕಾಶಗಳೂ ಬಹಳಷ್ಟು ಇರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಇದೊಂದು ಉತ್ತಮ ಸಂದರ್ಭ.

ವಿಂಡೀಸ್ ಮತ್ತು ಭಾರತದ ಕೆಲವು ಖ್ಯಾತನಾಮ ಕ್ರಿಕೆಟಿಗರ ಆಟವನ್ನು ಸಮೀಪದಿಂದ ವೀಕ್ಷಿಸುವ ಅವಕಾಶ ಸಿಗುತ್ತಿದೆ. ಕೆಎಸ್ ಸಿಎದ ಮೂರು ವಲಯಗಳಲ್ಲಿ (ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ) ಏಕಕಾಲಕ್ಕೆ ಅಂತರರಾಷ್ಟ್ರೀಯ ಪಂದ್ಯಗಳು  ನಡೆಯತ್ತಿರುವುದು ಇದೇ ಮೊದಲು’

‘1964–65ರಲ್ಲಿ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸಂದರ್ಭ. ಪ್ರಥಮ ಡಿವಿಷನ್ ತಂಡವಾಗಿದ್ದ ಮೈಸೂರು ಜಿಮ್ಖಾನಾ ಸೇರಿಕೊಂಡೆ. ಆಗಿನ ತಂಡದಲ್ಲಿ ಬಹಳಷ್ಟು ಹೆಸರುವಾಸಿಯಾದ ಕ್ರಿಕೆಟಿಗರು ಇದ್ದರು. ಪಂದ್ಯಗಳಲ್ಲಿ ಆಡುವ ಅವಕಾಶ ಸಿಗುವುದೇ ಅಪರೂಪವಾಗಿತ್ತು. ಮೊದಲನೇ ಪಂದ್ಯದಲ್ಲಿ ಅವಕಾಶ ಸಿಗಲು ಬಹಳ ದಿನ ಕಾಯಬೇಕಾಯಿತು. ಎರಡನೇ ಡಿವಿಷನ್ (ಎಂ.ಎ.ಟಿ ಆಚಾರ್ಯ ಶೀಲ್ಡ್)ಲೀಗ್ ನಲ್ಲಿ ಎಚ್ಎಎಲ್ ಎದುರಿನ ಪಂದ್ಯದಲ್ಲಿ  ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಅವಕಾಶ ಸಿಕ್ಕಾಗ ನಾನು ಅಜೇಯ 65 ರನ್ ಗಳಿಸಿದರೆ, ಇನ್ನೊಂದು ತುದಿಯಲ್ಲಿದ್ದ ಕಮಲೇಶ್ ಅಜೇಯ 45 ರನ್ ಗಳಿಸಿದರು.

ಇದರಿಂದ ಸೋಲಬೇಕಾಗಿದ್ದ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿತ್ತು.  ಆಗ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ‘ಸ್ಕೂಲ್ ಬಾಯ್ ಕ್ರಿಕೆಟರ್ ಶೈನ್ಸ್‘ ಎಂಬ ತಲೆಬರಹ ಬಂದಿದ್ದು ಇಂದಿಗೂ ಮರೆತಿಲ್ಲ. ಆಗ ಅಳಸಿಂಗಾಚಾರ್ಯರು ನಾಯಕರಾಗಿದ್ದರು. ಒಬ್ಬ ಆಟಗಾರ ಗೈರು ಹಾಜರಾ­ಗಿದ್ದರಿಂದ ಹಿರಿಯ ಕ್ರಿಕೆಟಿಗ ಅನಂತನಾರಾಯಣ ಸಲಹೆಯಂತೆ ನಾನು ತಂಡದಲ್ಲಿ ಸ್ಥಾನ ಪಡೆದಿದ್ದೆ’

‘1969 ರಿಂದ 74ರವರೆಗೆ ರಾಜ್ಯ ಜೂನಿಯರ್ ತಂಡ, ಮೈಸೂರು ವಿಶ್ವವಿದ್ಯಾಲಯದ ತಂಡಕ್ಕೆ ಆಡಿದ್ದು ರಣಜಿ ತಂಡದಲ್ಲಿ ಅವಕಾಶ ಸಿಗಲು ಕಾರಣವಾಯಿತು. ಆದರೆ ಆಗ  ಎರ್ರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಸಯ್ಯದ್‌ ಕಿರ್ಮಾನಿ, ಜಿ.ಆರ್. ವಿಶ್ವನಾಥ್, ಸುಧಾಕರ್ ರಾವ್, ಬ್ರಿಜೇಶ್ ಪಟೇಲ್ ಅವರು ತಂಡದಲ್ಲಿದ್ದರು. ಭಾರತ ತಂಡದ ಆಟಗಾರರಾಗಿದ್ದ ಅವರು, ಟೆಸ್ಟ್ ಆಡಲು ಹೋದರೆ ಮಾತ್ರ ನಮಗೆ ಅವಕಾಶ ಸಿಗುತ್ತಿತ್ತು. ಚಾಂಪಿಯನ್ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲಿ 12ನೇ ಆಟಗಾರನಾಗಿದ್ದೆ.

ಹಿರಿಯ ಆಟಗಾರರೊಂದಿಗೆ ಮಾತನಾಡಲೂ ಹೆದರಿಕೆ ಆಗುತ್ತಿತ್ತು. ಅವರ ಬಗ್ಗೆ ಆಗ ಅಷ್ಟೊಂದು ಗೌರವ ಇರುತ್ತಿತ್ತು. ಕವರ್ ಮತ್ತು ಪಾಯಿಂಟ್ನಲ್ಲಿ ಉತ್ತಮ ಫೀಲ್ಡಿಂಗ್ ಮಾಡುತ್ತಿದ್ದ ನನಗೆ ಬದಲೀ ಫೀಲ್ಡರ್ ಆಗುವ ಅವಕಾಶ ಸಿಗುತ್ತಿತ್ತು. ರಾಜಸ್ತಾನ ವಿರುದ್ಧದ ಫೈನಲ್ ಆಡಲು ಜೈಪುರಕ್ಕೆ ಹೋಗಬೇಕಾಗಿತ್ತು. ಸಮಯ ಕಡಿಮೆಯಿದ್ದ ಕಾರಣ ಮೊದಲ ಬಾರಿಗೆ ವಿಮಾನಯಾನದ ಅವಕಾಶ ಸಿಕ್ಕಿತ್ತು. ಫೈನಲ್ ನಲ್ಲಿಯೂ ಕೆಲಹೊತ್ತು ಫೀಲ್ಡ್ ಮಾಡಿದ್ದೆ.

ಆದರೆ ಪಂದ್ಯವನ್ನು ಗೆದ್ದಾಗ ನಡೆದ ವಿಜಯೋತ್ಸವ ಸದಾ ನೆನಪಿನಲ್ಲಿ ಉಳಿಯುವಂತದ್ದು. ನಮ್ಮ ಡ್ರೆಸ್ಸಿಂಗ್ ರೂಮಿಗೆ ಆಗಿನ ಭಾರತ ತಂಡದ ಅಜಿತ್ ವಾಡೇಕರ್ ಬಂದು ಅಭಿನಂದಿಸಿದ್ದರು. ಬೆಂಗಳೂರಿಗೆ ವಿಮಾನದಲ್ಲಿ ಮರಳಲು ಸಾಧ್ಯವಾಗದೇ ರೈಲಿನಲ್ಲಿ ಬರಬೇಕಾಯಿತು. ಚೆನ್ನೈನಲ್ಲಿ ದೊಡ್ಡ ಸನ್ಮಾನ ಮತ್ತು ಬೆಂಗಳೂರಿಗೆ ಬಂದಿಳಿದಾಗ ಅಭಿಮಾನಿಗಳು ಬಂದು ಅಭಿನಂದಿಸಿದ್ದರು. ಮುಖ್ಯಮಂತ್ರಿ ದೇವರಾಜ್ ಅರಸ್ ಔತಣ ಕೂಟ ಏರ್ಪಡಿಸಿ ಸತ್ಕರಿಸಿದ್ದರು.

ತಂಡದ ಎಲ್ಲರಿಗೂ ಸರ್ಕಾರವು ನಿವೇಶನ ಘೋಷಿಸಿತು. ಆದರೆ ನಾನು ಸೇರಿದಂತೆ ಕೆಲವು ಆಟಗಾರರಿಗೆ ಆರ್ಥಿಕ ಮುಗ್ಗಟ್ಟು ಇದ್ದ ಕಾರಣ ನಿವೇಶನ ಪಡೆಯಲಿಲ್ಲ. ನಂತರ ಭಾರತಕ್ಕೆ ಆಗಮಿಸಿದ್ದ ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ ತಂಡದ ವಿರುದ್ಧದ ಅಭ್ಯಾಸ ಪಂದ್ಯ ಆಡಿದ್ದ ಕರ್ನಾಟಕ ತಂಡದಲ್ಲಿ 12ನೇ ಆಟಗಾರನಾಗಿದ್ದೆ.  1978ರವರೆಗೂ ರಣಜಿ ತಂಡದಲ್ಲಿದ್ದೆ. ಎರಡನೇ ಬಾರಿ ರಣಜಿ ಟ್ರೋಫಿಯನ್ನು ಕರ್ನಾಟಕ ಗೆದ್ದಿದ್ದು ಕೂಡ ಇತಿಹಾಸದ ಮಹತ್ವದ ಸಂಗತಿ’

‘ಆಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ಮಾತ್ರ ಟರ್ಫ್ ವಿಕೆಟ್ ಇತ್ತು. ಟೂರ್ನಿಗಳಲ್ಲಿ ಆಡುವ ಅವಕಾಶವೂ ಕಡಿಮೆ ಪ್ರಮಾಣದಲ್ಲಿದ್ದವು. ಪೈಪೋಟಿಯೂ ಸಾಕಷ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಕ್ರಿಕೆಟ್‌ ಬೃಹತ್ತಾಗಿ ಬೆಳೆದಿದೆ. ಮೈಸೂರಿನಲ್ಲಿ ಕಳೆದ ಮೂರು ವರ್ಷಗಳನ್ನೇ ನೋಡಿ. ಒಂದು ತರಬೇತಿ ಅಕಾಡೆಮಿ, ಜೆಸಿ ಕಾಲೇಜಿನಲ್ಲಿ ಒಂದು ಟರ್ಫ್ ಮೈದಾನ, ಮಂಡ್ಯದ ಪಿಇಎಸ್ ನಲ್ಲಿ ಟರ್ಫ್ ಮೈದಾನ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯ ಪ್ರತಿಭೆಗಳು ಹೊರಹೊಮ್ಮಲು ಅವಕಾಶ ಸಿಕ್ಕಿದೆ.

ಆದರೆ ಟೆಸ್ಟ್ ಕ್ರಿಕೆಟ್‌ ಪಂದ್ಯ ಆಯೋಜಿಸಲು ಇನ್ನೂ ಬಹಳಷ್ಟು ಸೌಲಭ್ಯಗಳು ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಸುಮಾರು 200 ರಿಂದ 250 ಕೋಟಿ ರೂಪಾಯಿ ವಿನಿಯೋಗಿಸಬೇಕು. ಭಾರತದಲ್ಲಿ ಈಗ ಬಹಳಷ್ಟು ಮೈದಾನಗಳು ಇರುವುದರಿಂದ ಹೆಚ್ಚು ಪಂದ್ಯಗಳನ್ನು ಆಡಿಸಲು ಸಾಧ್ಯವಿಲ್ಲ. ಆದ್ದರಿಂದ ಈಗ ಇರುವ ಸೌಲಭ್ಯಗಳು ಪ್ರಥಮ ದರ್ಜೆ ಪಂದ್ಯಗಳನ್ನು ಆಯೋಜಿಸಲು ಸಾಕು.

ಇದರ ಪ್ರಯೋಜನ ಪಡೆದರೆ ಆಟಗಾರರಿಗೆ ಉತ್ತಮ ಭವಿಷ್ಯ ಇದೆ. ಸದ್ಯ ಭಾರತ ‘ಎ’ ತಂಡದಲ್ಲಿರುವ  ಕೆ.ಎಲ್. ರಾಹುಲ್ ಗ್ರಾಮಾಂತರ ಪ್ರದೇಶದ ಪ್ರತಿಭೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ರಾಷ್ಟ್ರೀಯ ತಂಡದಲ್ಲೂ ಅವಕಾಶ ಪಡೆಯಬಹುದು’ ಎಂದು ವಿಜಯಪ್ರಕಾಶ್ ಮಾತು ಮುಗಿಸಿ, ಮೈದಾನದ ತಯಾರಿಯತ್ತ ನಡೆದರು.
-ಗಿರೀಶ ದೊಡ್ಡಮನಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT