ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಯೋಗ ಸಮ್ಮೇಳನ

Last Updated 9 ಜನವರಿ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಯುಷ್ ಇಲಾಖೆಯು ಫೆಬ್ರುವರಿ 9ರಿಂದ 13ರವರೆಗೆ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಅಂತರರಾಷ್ಟ್ರೀಯ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ಸಮ್ಮೇಳನ ಹಾಗೂ ಆರೋಗ್ಯ    ಎಕ್ಸ್‌ಪೋ ಮೇಳವನ್ನು ಹಮ್ಮಿಕೊಂಡಿದೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಆಯುಷ್ ನಿರ್ದೇಶನಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಆಯುಷ್ ಇಲಾಖೆ ನಿರ್ದೇಶಕ ಜಿ.ಎನ್. ಶ್ರೀಕಂಠಯ್ಯ, `ಭಾರತೀಯ ವೈದ್ಯ ಪದ್ಧತಿಗೆ ಹೊಸ ಆಯಾಮ ನೀಡುವ ಹಾಗೂ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸುವ ಔಷಧರಹಿತ ನಿಸರ್ಗ ಚಿಕಿತ್ಸಾ ವಿಧಾನಗಳನ್ನು ಪ್ರಚುರಪಡಿಸುವ ಸಲುವಾಗಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ~ ಎಂದರು.

`ಸಮ್ಮೇಳನದಲ್ಲಿ ದೇಶ- ವಿದೇಶದ ಸುಮಾರು ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ವೈಜ್ಞಾನಿಕ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, 30ಕ್ಕೂ ಹೆಚ್ಚು ರಾಷ್ಟ್ರಗಳ ತಜ್ಞರು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತು ವಿಷಯ ಮಂಡಿಸಲಿದ್ದಾರೆ. ಆಧುನಿಕ ಜೀವನ ಶೈಲಿಯಿಂದ ಕಾಣಿಸಿಕೊಳ್ಳಲಿರುವ ರೋಗಗಳನ್ನು ತಡೆಗಟ್ಟಲು ಸರಳ ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಸಮ್ಮೇಳನದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ~ ಎಂದು ಹೇಳಿದರು.

ಆರೋಗ್ಯ ಎಕ್ಸ್‌ಪೋ ಮೇಳ: `ಸಮ್ಮೇಳನದ ಅಂಗವಾಗಿ ಆರೋಗ್ಯ ಎಕ್ಸ್‌ಪೋ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 300 ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಜನರು ಮಾಹಿತಿ ಪಡೆಯಬಹುದು. ಮನೆಮದ್ದು, ಯೋಗ, ಪ್ರಕೃತಿ ಚಿಕಿತ್ಸೆ ಕುರಿತು ತಜ್ಞರು ಉಚಿತ ಸಲಹೆ ನೀಡಲಿದ್ದಾರೆ~ ಎಂದರು.

`ಆಯುಷ್‌ನ ವಿವಿಧ ಪದ್ಧತಿಗಳ ಬಗ್ಗೆ ಉಚಿತ ಸಲಹಾ ಶಿಬಿರ ಏರ್ಪಡಿಸಲಾಗಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಔಷಧ ತಯಾರಕರು, ಔಷಧ ಯಂತ್ರೋಪಕರಣ ತಯಾರಕರು, ಔಷಧೀಯ ಸಸ್ಯ ಉತ್ಪಾದಕರ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿದೆ~ ಎಂದರು.

`ಇದೇ ವೇಳೆ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ಫೆ.6ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ. ಫೆ.8ರವರೆಗೆ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಅಂತಿಮ ಸ್ಪರ್ಧೆಯು ಫೆ. 9ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ಸುಮಾರು ಎರಡು ಸಾವಿರ ಸ್ಪರ್ಧಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ~ ಎಂದರು.

`ಉದ್ಘಾಟನೆಯದಲ್ಲಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವ ಡಾ.ವಿ.ಎಸ್. ಆಚಾರ್ಯ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ, ಯೋಗಗುರು ಡಾ.ಬಿ.ಕೆ.ಎಸ್.ಅಯ್ಯಂಗಾರ್ ಭಾಗವಹಿಸಲಿದ್ದಾರೆ~ ಎಂದು ಶ್ರೀಕಂಠಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT