ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯ ಕಾಣದ ಆದಿಜಾಂಬವ ಬಡಾವಣೆ ಸಮಸ್ಯೆ!

Last Updated 8 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಮನೆಗಳ ಮುಂಭಾಗ ಚರಂಡಿ ವ್ಯವಸ್ಥೆ ಇಲ್ಲದೇ ಕಲುಷಿತಗೊಂಡಿರುವ ನೀರು, ಮುಸ್ಸಂಜೆಯಾಗುತ್ತಿದ್ದಂತೆ ಮನೆ ಬಾಗಿಲು ತೆರೆದರೆ ಸೊಳ್ಳೆಗಳ ಕಾಟ, ರಾತ್ರಿ ತಿರುಗಾಡಲು ಹುಳ- ಹುಪ್ಪಟೆ ಕಾಟ, ದಾರಿ ಮಧ್ಯದಲ್ಲಿಯೇ ಬೆಳೆದಿರುವ ಗಿಡ-ಗಂಟೆ..

ಇದು ಗ್ರಾಮದ ಅದಿಜಾಂಬವ ಬಡಾವಣೆಯ ಸಮಸ್ಯೆ.
ಅಸಮರ್ಪಕವಾಗಿ ನಿರ್ಮಿಸಿರುವ ಚರಂಡಿಯಲ್ಲಿ ವಾರದ ಹಿಂದೆ ಹೂಳು ತೆಗೆದು ರಸ್ತೆಯ ಮಧ್ಯದಲ್ಲಿ ತ್ಯಾಜ್ಯ ಇಟ್ಟಿರುವ ಪರಿಣಾಮ ಗೊಬ್ಬರದ ಗುಂಡಿಯಂತಾಗಿದೆ. ಇದನ್ನು ತೆಗೆಸುವ ಕಾರ್ಯಕ್ಕೆ ಪಂಚಾಯಿತಿ ಮುಂದಾಗಿಲ್ಲ.

ಇದರ ದುರ್ವಾಸನೆಯಲ್ಲಿಯೇ ಜನ ಬದುಕುತ್ತಿದ್ದಾರೆ. ಕೆಲವು ಕಡೆ ಹೂಳೆತ್ತಿಸದೇ ರಸ್ತೆಯವರೆಗೂ ಕಲ್ಮಷ ತುಂಬಿರುವುದರಿಂದ ಸೊಳ್ಳೆಗಳ ವಾಸ ಸ್ಥಾನವಾಗಿ ರೋಗರುಜಿನಗಳಿಗೆ ಕಾರಣವಾಗಿದೆ. ನಿತ್ಯ ಕೊಳಚೆ ನೀರು ತುಳಿದುಕೊಂಡು ತಿರುಗಾಡಬೇಕಿದೆ. ಚರಂಡಿ ನಿರ್ಮಿಸಿ ಎಂದು ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂಬುದು ನಿವಾಸಿ ಜಯಮ್ಮ ಅವರ ದೂರು.

ಐದು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಅವೈಜ್ಞಾನಿಕವಾಗಿ ರಸ್ತೆಯ ಮಧ್ಯ ದಲ್ಲಿಯೇ ಕುಡಿಯುವ ನೀರಿನ ತೊಂಬೆ ನಿರ್ಮಿಸಲಾ ಗಿದೆ. ಇದರಂದ ದಾರಿ ಹೊಕರು, ವಾಹನ ಸಂಚಾ ರರು ನೀರು ತುಂಬಿಸಿಕೊಳ್ಳುವಾಗ ಜನರು ಸಂಕಷ್ಟದಲ್ಲಿ ಸಂಚರಿಸಬೇಕಿದೆ.

ಬಡಾವಣೆಯಲ್ಲಿ ಒಂದುವರೆ ಸಾವಿರದಷ್ಟು ಜನಸಂಖ್ಯೆ ಇದೆ. ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಂಸದರ ನಿಧಿ ಹಾಗೂ ಜಿ.ಪಂ. ವತಿಯಿಂದ 2 ವರ್ಷದ ಹಿಂದೆ 17 ಲಕ್ಷ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಸಂಸದ ಆರ್.ಧ್ರುವನಾರಾಯಣ್ ಗುದ್ದಲಿ ಪೂಜೆ ಮಾಡಿದ್ದರು. ಈ ಹಣದಿಂದಲೇ
ಕೊಳವೆ ಬಾವಿ ಕೊರೆಯಿಸಲಾಗಿತ್ತು. ಉತ್ತಮವಾಗಿ ನೀರು ಬಂದಿದೆ. ಆದರೇ, ಪೈಪ್‌ಲೈನ್ ಕಾಮಗಾರಿಗೆ ಗುತ್ತಿಗೆದಾರರ ಪೈಪೋಟಿಯಿಂದ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಬಡಾವಣೆಯಲ್ಲಿರುವ 3ತೊಂಬೆಗಳನ್ನು ಮಾತ್ರ ನಿವಾಸಿಗಳು ಆಶ್ರಯಿಸಿಕೊಂಡಿದ್ದಾರೆ. ಕೈಪಂಪುಗಳ ದುರಸ್ತಿ ನಡೆದಿಲ್ಲ. ಮನೆಗಳಿಗೆ 2 ವರ್ಷದಿಂದಲೂ ನಲ್ಲಿ ಸಂಪರ್ಕಗಳು ಸ್ಥಗಿತಗೊಂಡಿವೆ.

ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಕೊರೆಸಿರುವ ಕೊಳವೆ ಬಾವಿಯಿಂದ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕು. ಬಡಾವಣೆಯಲ್ಲಿ ಗ್ರಾಮ ಪಂಚಾಯಿತಿಯವರು ಶುಚಿತ್ವ ಕಾಪಾಡಬೇಕು ಎಂದು ಮುಖಂಡ ನಾಗೇಂದ್ರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT