ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುಲೆನ್ಸ್‌ಗೆ ಬಡಿದು ನವಿಲು ಸಾವು

Last Updated 15 ಜೂನ್ 2011, 10:20 IST
ಅಕ್ಷರ ಗಾತ್ರ

ಹಿರೀಸಾವೆ: ರಸ್ತೆ ದಾಟಲು ಯತ್ನಿಸುತ್ತಿದ್ದ ನವಿಲು ತುರ್ತು ಚಿಕಿತ್ಸಾ ವಾಹನದ ಗಾಜಿಗೆ ಬಡಿದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮಂಗಳವಾರ ಕಿರೀಸಾವೆ ಗಡಿ ಬಳಿ ನಡೆದಿದೆ.

ಹಾಸನದ ಮಂಜುನಾಥ ಆಯುರ್ವೇದ ಆಸ್ಪತ್ರೆಯ ಅಂಬುಲೆನ್ಸ್ ಬೆಳಗ್ಗೆ ಬೆಂಗಳೂರಿಗೆ ತೆರಳುತ್ತಿದ್ದಾಗ ನವಿಲು  ವಾಹನದ ಮುಂಭಾಗದ ಗಾಜಿಗೆ ಬಡಿಯಿತು.

ಗಾಯಗೊಂಡ ಪಕ್ಷಿಯನ್ನು ತಕ್ಷಣ ಅದೇ ವಾಹನದಲ್ಲಿ ಹಿರೀಸಾವೆ ಪಶು ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತುರ್ತು ಚಿಕಿತ್ಸಾ ಘಟಕದಲ್ಲಿ ಬಿಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ  ಮಾಹಿತಿ ನೀಡಲಾಯಿತು.

ಇಲಾಖೆಯ ದಯಾನಂದ್ ಸ್ಥಳಕ್ಕೆ ಆಗಮಿಸಿ ನವಿಲನ್ನು ಹೆಚ್ಚಿನ ಚಿಕಿತ್ಸೆಗೆ ಚನ್ನರಾಯಪಟ್ಟಣಕ್ಕೆ ತೆಗೆದುಕೊಂಡು ಹೋದರು. ತಾಲ್ಲೂಕು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ನವಿಲು ಮೃತಪಟ್ಟಿತು ಎಂದು ವಲಯ ಅರಣ್ಯಾಧಿಕಾರಿ ಮುತ್ತೇಗೌಡ `ಪ್ರಜಾವಾಣಿ~ಗೆ ತಿಳಿಸಿದರು. ನಂತರ ಸಹಾಯಕ ವಲಯ ಅರಣ್ಯಾಧಿಕಾರಿ ಎಚ್.ಸಿ. ಗಿರೀಶ್‌ರವರ ನೇತೃತ್ವದಲ್ಲಿ ಬೆಲಸಿಂದ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಸ್ಥಳೀಯರು ಆಕ್ರೋಶ: ರಾಷ್ಟ್ರೀಯ ಹೆದ್ದಾರಿ 48ರ ಅಕ್ಕಪಕ್ಕದಲ್ಲಿ ನವಿಲುಗಳು ವಾಸ ಮಾಡುತ್ತಿದ್ದು, ಹಳ್ಳಗಳಲ್ಲಿ ಓಡಾಡುತ್ತಿದ್ದವು.  ರಸ್ತೆಯನ್ನು ಸೇತುವೆಗಳ ಕೆಳಗೆ ಕ್ರಾಸ್ ಮಾಡುತ್ತಿದ್ದವು. ಆದರೆ ರಸ್ತೆ ಅಗಲೀಕರಣಕ್ಕೆ ಸೇತುವೆಗಳ ಕಾಮಗಾರಿ ನಡೆಯುತ್ತಿರುವುದರಿಂದ ಪಕ್ಷಿಗಳು ರಸ್ತೆ ದಾಟುವಾಗ ಆಗಾಗ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT