ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಂ ಆನೆ ಹಿಡಿದ ಕಥೆ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಈ ಘಟನೆಯನ್ನು ನೀವು ಯಾರೂ ಮರೆತಿರಲು ಸಾಧ್ಯವೇ ಇಲ್ಲ. ಅಂದಾಜು ಒಂದೂವರೆ ವರ್ಷದ ಹಿಂದೆ ಇರಬಹುದು. ಬೆಳ್ಳಂಬೆಳಿಗ್ಗೆ ಎರಡು ಆನೆಗಳು ಮೈಸೂರು ನಗರದ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದವು. ರಾಜಮಾರ್ಗದಲ್ಲಿ ರಾಜ ಗಾಂಭೀರ್ಯದಿಂದಲೇ ಹೆಜ್ಜೆ ಹಾಕುತ್ತಿದ್ದವು. ಮೈಸೂರಿನ ಜನರಿಗೆ ಆನೆಗಳು  ಹೊಸತಲ್ಲ.
 
ದಸರಾ ಸಂದರ್ಭದಲ್ಲಿ ಎರಡು ತಿಂಗಳು ನಿತ್ಯ ಆನೆಗಳು ರಾಜ ಮಾರ್ಗದಲ್ಲಿ ಓಡಾಡುವುದನ್ನು ನೋಡುತ್ತಲೇ ಇರುತ್ತಾರೆ. ಹೀಗಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಆನೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈ ಆನೆಗಳು ಕಂಡ ಕಂಡ ಜನರು, ವಾಹನಗಳ ಮೇಲೆ ದಾಳಿ ಮಾಡಲು ಶುರು ಮಾಡಿದವು. ಜನರು ದಿಕ್ಕಾಪಾಲಾಗಿ ಓಡತೊಡಗಿದರು.

ವಿಷಯ ಗಾಳಿಯಷ್ಟೇ ವೇಗವಾಗಿ ಎಲ್ಲೆಡೆ ಹರಡಿತು. ನಮ್ಮ ಅರಣ್ಯ ಇಲಾಖೆಗೂ ಸುದ್ದಿ ತಿಳಿಯಿತು. ಕೂಡಲೇ ಡಿಸಿಎಫ್ ದೇವರಾಜ್ ಮತ್ತು ಪಶು ವೈದ್ಯರಾದ ಡಾ.ನಾಗರಾಜ್ ಸಾಹೇಬ್ರು, ನಾನು ಜೀಪ್ ಏರಿ ಆನೆಗಳು ಇದ್ದ ಜಾಗದತ್ತ ಧಾವಿಸಿದೆವು. ಡಿ.ದೇವರಾಜ ಅರಸು ರಸ್ತೆಯಲ್ಲಿ ಒಂದು ಆನೆ ಪುಂಡಾಟ ನಡೆಸುತ್ತಿತ್ತು.

ಜನರು ಜಂಬೂಸವಾರಿ ನೋಡುವವರಂತೆ ನೆರೆದಿದ್ದರು. ಡಾಕ್ಟ್ರು ನಾಗರಾಜ್ ಸಾಹೇಬ್ರು ಸಿರಿಂಜ್‌ಗೆ  ಅರಿವಳಿಕೆ ಮದ್ದು ತುಂಬಿಸಿ ಕೊಟ್ಟರು. ನಾನು 50 ಮೀಟರ್ ದೂರದಲ್ಲಿ  ನಿಂತುಕೊಂಡು ಅರಿವಳಿಕೆ ಚುಚ್ಚುಮದ್ದನ್ನು ಆನೆಯತ್ತ ಗುರಿಯಿಟ್ಟು ಹಾರಿಸಿದೆ. ಅದು ಸರಿಯಾಗಿ ಅದರ ಹಿಂದಿಗೆ ನಾಟಿತು.
 
ಗಾಬರಿಯಾಗಿ ಮಹಾರಾಣಿ ಕಾಲೇಜು ಕಡೆಗೆ ಓಡಿತು. ನಾವು ಅಲ್ಲಿಗೆ ಹೋದೆವು. ಇಷ್ಟರಲ್ಲಿ ರೊಚ್ಚಿಗೆದ್ದಿ ಆನೆ ನನ್ನತ್ತ ನುಗ್ಗಿ ಬಂದಿತು. ನಾನು ಕಾಲೇಜಿನ ಕೊಠಡಿಯನ್ನು ಸೇರಿಕೊಂಡುಬಿಟ್ಟೆ. ಇಲ್ಲದೇ  ಹೋಗಿದ್ದರೆ ನಾನು ನಿಮಗೆ ಈ ಕಥೆಯನ್ನು ಹೇಳಲು ಬದುಕಿರುತ್ತಲೇ ಇರಲಿಲ್ಲ.

ಇಷ್ಟೆಲ್ಲ ಸ್ವಾರಸ್ಯಕರ ಕಥೆ ಹೇಳುತ್ತಿರುವ ಇವನ್ಯಾರು ಅಂಥ ನಿಮಗೆ ಅನಿಸಬಹುದು. ಅದನ್ನೂ ಹೇಳಿ ಬಿಡುತ್ತೇನೆ. ಸಾಬ್, ನನ್ನ ಹೆಸರು ಅಕ್ರಂ. ಅರಣ್ಯ ಇಲಾಖೆಯ ಡಿ ಗ್ರೂಪ್ ನೌಕರ. 14 ವರ್ಷಗಳಿಂದಲೂ ಮೈಸೂರಿನ ಅರಣ್ಯ ಭವನದಲ್ಲೇ ಕೆಲಸ ಮಾಡುತ್ತಿದ್ದೇನೆ.

ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿಯ ಸಹಾಯಕನಾಗಿದ್ದೇನೆ. ನಮ್ಮ ವ್ಯಾಪ್ತಿಯ ಕಾಡಿನಲ್ಲಿ ಆನೆ, ಚಿರತೆ, ಹುಲಿ ಸೇರಿದಂತೆ ಅಮೂಲ್ಯವಾದ ಕಾಡು ಪ್ರಾಣಿಗಳು ಸತ್ತರೆ ಅವುಗಳ ಮರಣೋತ್ತರ ಪರೀಕ್ಷೆಗೆ ಡಾಕ್ಟರ್ ಜೊತೆ ಕಿಟ್ ತೆಗೆದುಕೊಂಡು ಹೋಗುತ್ತೇನೆ.

ವಾಚರ್ ಆನೆ ದೇಹವನ್ನು ಸೀಳುತ್ತಾರೆ. ಡಾಕ್ಟರ್ ಹೇಳುವ ಭಾಗದ ಸ್ಯಾಂಪಲ್ ಅನ್ನು ತೆಗೆದು ಪಿ.ಎಂ ಕಿಟ್‌ಗೆ ಹಾಕಿಕೊಳ್ಳುತ್ತೇನೆ. ಎಷ್ಟೋ ಬಾರಿ ಆನೆಗಳು ಸತ್ತು ಹಲವು ದಿನಗಳೇ ಆಗಿಬಿಟ್ಟಿರುತ್ತವೆ. ಹುಳಗಳು ಮುತ್ತಿಕೊಂಡಿರುತ್ತವೆ. ಆದರೂ ಅಸಹ್ಯ ಪಟ್ಟುಕೊಳ್ಳದೇ ಮರಣೋತ್ತರ ಪರೀಕ್ಷೆಗೆ ಸಹಾಯ ಮಾಡುತ್ತೇನೆ.

ನಾನು ಇನ್ನೊಂದು ಸ್ವಾರಸ್ಯಕರ ಕಾರ್ಯಾಚರಣೆಯನ್ನು ನಿಮಗೆ ಹೇಳುವುದಿದೆ. ಅದಕ್ಕಿಂತ ಮುನ್ನ ಇದನ್ನು ಕೇಳಿ. ನಾನು ಶಾಲೆಗೆ ಹೋದವನೇ ಅಲ್ಲ. ನನಗೆ ಬುದ್ಧಿ ತಿಳಿದ ದಿನದಿಂದಲೂ ಆನೆಗಳೊಂದಿಗೇ ಇದ್ದೇನೆ. ಇದಕ್ಕೆ ಕಾರಣವಿದೆ. ನನ್ನಪ್ಪ ಅಹಮದ್ ಖಾನ್ ಮಾವುತರಾಗಿದ್ದರು.

ಅವರೊಂದಿಗೆ ಕಾಡಿನಲ್ಲೇ ಇದ್ದೆ. ಹೀಗಾಗಿ ನನಗೂ, ಆನೆಗೂ ಬಿಡಿಸಲಾಗದ ನಂಟು. ಚಿಕ್ಕ ಹುಡುಗನಾಗಿದ್ದಾಗ ಅಪ್ಪ ಆನೆ  ಮೇಲೆ ಕೂರಿಸಿಕೊಂಡು ನದಿಯಲ್ಲಿ ಸ್ನಾನ ಮಾಡಿಸಲು ಕರೆದುಕೊಂಡು ಹೋಗುತ್ತಿದ್ದರು. ಆ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ.
 
ನಾನು ದೊಡ್ಡವನಾದ ಮೇಲೆ ಲೆಕ್ಕವಿಲ್ಲದಷ್ಟು ಬಾರಿ ಆನೆ ಮೇಲೆ ಕುಳಿತು ಸವಾರಿ ಮಾಡಿದ್ದೇನೆ. ಆದರೆ ಅಪ್ಪನೊಂದಿಗೆ ಕುಳಿತು ಸವಾರಿ ಮಾಡಿದ ದಿನಗಳ ನೆನಪು ಅಮರ. ನನಗೂ ಆನೆಗೂ ದೋಸ್ತಿ ಆದ ಮೇಲೆ ಅಪ್ಪನಿಗೆ ಕಾಣದಂತೆ ಆನೆಯನ್ನು  ಬಿಚ್ಚಿಕೊಂಡು ನದಿಯತ್ತ ಹೊರಟು ಬಿಡುತ್ತಿದ್ದೆ. ಅಲ್ಲಿ ಸ್ನಾನ ಮಾಡಿಸಿಕೊಂಡು ಬರುತ್ತಿದ್ದೆ. ಇದು ತಿಳಿದ ಅಪ್ಪ ಬೈಯ್ಯುತ್ತಿದ್ದರು.

ಆದರೂ ಒಂಥರ ಮಜಾ ಇತ್ತು. ನಾವು ಹೆಚ್ಚಾಗಿ ಪುಂಡಾನೆಗಳನ್ನು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಿವಿಧ ಕಡೆ ಹಿಡಿದಿದ್ದೇವೆ. ಈ ಕಾರ್ಯಾಚರಣೆ ತುಂಬಾ ಸವಾಲಾಗಿರುತ್ತದೆ. ಆನೆಗಳ ಕಾಟ  ಜಾಸ್ತಿಯಾದಾಗ ನಮ್ಮ ಸಾಹೇಬ್ರು ಸೂಚನೆ ಕೊಡುತ್ತಾರೆ.
 
ನಾನು, ಮಾವುತ ವಸಂತ, ದಸರಾ ಆನೆ ಅಭಿಮನ್ಯು ಸೇರಿದಂತೆ ಹಲವರು ಕಾಡಿನಲ್ಲಿ ಆನೆಗಳ ದಾರಿಯನ್ನು ಹಿಡಿದು ಹೋಗುತ್ತೇವೆ. ಆನೆಗಳು ಕಂಡ ಕೂಡಲೇ ಸಾಹೇಬರಿಗೆ ವಿಷಯ ತಿಳಿಸುತ್ತೇವೆ. ಅವರು ಡಾಕ್ಟರ್ ಸಮೇತ ಬರುತ್ತಾರೆ. ಡಾಕ್ಟರ್ ಸಿರಿಂಜ್‌ಗೆ ಅರಿವಳಿಕೆ ಮದ್ದನ್ನು ತುಂಬಿಸಿಕೊಡುತ್ತಾರೆ.

ನಾನು ಅಭಿಮನ್ಯು ಮೇಲೆ ಕುಳಿತು  ಕುತ್ತಿಗೆ, ಭುಜ ಇಲ್ಲವೇ ಹಿಂಭಾಗಕ್ಕೆ ಹಾರಿಸಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಯೋಜನವಾಗುವುದಿಲ್ಲ. ಬಂದೂಕಿನಿಂದ ಚುಚ್ಚುಮದ್ದು ಹಾರಿಸುವಾಗ ಗಾಳಿ ಹೆಚ್ಚಾದರೂ, ಸಣ್ಣ ಕಡ್ಡಿ ಅಡ್ಡ ಬಂದೂ ಗುರಿ ತಪ್ಪುವುದು ಗ್ಯಾರಂಟಿ.

ಆದ್ದರಿಂದ ಬಲು ನಾಜೂಕಾಗಿ ಹಾರಿಸಬೇಕು. ಆನೆ, ಚಿರತೆ, ಹುಲಿ ಸೇರಿದಂತೆ ಕಾಡುಪ್ರಾಣಿಗಳನ್ನು ಸೆರೆಹಿಡಿಯವ ಕಾರ್ಯಾಚರಣೆಯಲ್ಲಿ ಅರಿವಳಿಕೆ ಚುಚ್ಚುಮದ್ದು ಹಾರಿಸುವುದು ತುಂಬಾ ಮುಖ್ಯ. ಅವುಗಳ ಪ್ರಜ್ಞೆ ತಪ್ಪಿಸದೇ ಹಿಡಿಯುವುದು ಅಸಾಧ್ಯ. ನಾವು ಅರಿವಳಿಕೆ ಚುಚ್ಚುಮದ್ದು ನೀಡಿದ ಕೂಡಲೇ ಗಾಬರಿಯಾಗುವ ಆನೆಗಳು ಕಾಡಿನಲ್ಲಿ ದಿಕ್ಕಾಪಾಲಾಗಿ ಓಡುತ್ತವೆ.
 
ನಾವು ಅವುಗಳನ್ನು ಹಿಂಬಾಲಿಸಿ ಹೋಗಬೇಕು. ಅವು ಎಲ್ಲಿ ಬೀಳುತ್ತವೆ ಎನ್ನುವುದನ್ನು ನೋಡಿಕೊಳ್ಳಬೇಕು. ಆಮೇಲೆ ನಮ್ಮ ಅಭಿಮನ್ಯುವಿನ ಸಹಾಯದೊಂದಿಗೆ ಪ್ರಜ್ಞೆ ತಪ್ಪಿದೆ ಆನೆಗೆ ಹಗ್ಗವನ್ನು ಹಾಕಿ  ಎಬ್ಬಿಸಿಕೊಂಡು ಆ ಆನೆಯ ಪಕ್ಕದಲ್ಲಿ ಇನ್ನೆರಡು ಆನೆಗಳನ್ನು ಇಟ್ಟುಕೊಂಡು ಹೊರಕ್ಕೆ ತರುತ್ತೇವೆ.

ಒಮ್ಮೆ ಏನಾಯಿತು ಗೊತ್ತೇ? ಆಲೂರು ಅರಣ್ಯದಲ್ಲಿ ಆನೆಯೊಂದಕ್ಕೆ ಅರಿವಳಿಕೆ ಚುಚ್ಚುಮದ್ದು ಹಾರಿಸಿದ್ದೆ. ಅದು ಮಂಕಾಗಿ ನಿಂತಿತ್ತು. ನಾನು ಅದರ ಹತ್ತಿರ ಹೋದೆ, ಅದು ನನ್ನತ್ತ ನುಗ್ಗಿ ಬಂದಿತು. ಕೂಡಲೇ ಮಾವುತ ವಸಂತ ಅಭಿಮನ್ಯುವಿನ ಮೂಲಕ ಆ ಆನೆಗೆ ಚಾರ್ಜ್ ಮಾಡಿಸಿದ. ಹೀಗಾಗಿ ನಾನು ಕೂದಲೆಳೆ ಅಂತರದಲ್ಲಿ ಬಚಾವ್ ಆದೆ. ಕಾಡುಪ್ರಾಣಿಗಳನ್ನು ಹಿಡಿಯವ ಕಾರ್ಯಾಚರಣೆಯಲ್ಲಿ ಇದೆಲ್ಲ ಸಾಮಾನ್ಯ.

ಸೆಪ್ಟೆಂಬರ್ ತಿಂಗಳು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕು ಬೊಮ್ಮಲಾಪುರ ಹಾಡಿ ಬಳಿ ಹುಲಿಯೊಂದು ಹೆಂಗಸನ್ನು ತಿಂದು ಹಾಕಿದೆ. ಇಲ್ಲದೆ ತುಂಬಾ ದಿನಗಳಿಂದ ಸುತ್ತಮುತ್ತಲಿನ ಹಳ್ಳಿಗರಿಗೆ ಕಾಟ ಕೊಡುತ್ತಿದೆ ಎನ್ನುವ ವರ್ತಮಾನ ಬಂದಿತು. ನಾವು ಅದನ್ನು ಹಿಡಿಯಲು ಹೊರಟೆವು. ಎರಡು ತಂಡ ಮಾಡಿಕೊಂಡೆವು.
 
ಒಂದರಲ್ಲಿ ಡಾ.ರಮೇಶ್, ಇನ್ನೊಂದರಲ್ಲಿ ಡಾ.ಉಮಾಶಂಕರ್ ಇದ್ದರು. ನಾನು ರಮೇಶ್ ತಂಡದಲ್ಲಿದ್ದೆ. ಎಂದಿನಂತೆ ದಸರಾ ಆನೆ ಅಭಿಮನ್ಯು, ಅದರ ಮಾವುತ ವಸಂತ ಇದ್ದರು. ಪೊದೆಯಲ್ಲಿ ಹುಲಿ ಇರುವುದು ಕಾಣಿಸಿತು. ನಾನು ಅರಿವಳಿಕೆ ಚುಚ್ಚುಮದ್ದನ್ನು ಹಾರಿಸಲು ಸಿದ್ಧನಾದೆ.

ಇಷ್ಟರಲ್ಲಿ ಪೊದೆಯಿಂದ ಚೆಂಗನೆ ನಮ್ಮತ್ತಲೇ ಹಾರಿತು. ಅಭಿಮನ್ಯು ಗಾಬರಿಯಾದ. ಮೇಲೆ ಕುಳಿತಿದ್ದ ನಾವೂ ಗಾಬರಿಯಾದವು. ಅಲ್ಲಿಂದ ಸ್ವಲ್ಪ ದೂರ ಹೋಗಿ ಮತ್ತೊಂದು ಪೊದೆಯನ್ನು ಹೊಕ್ಕಿತು. ನಾವು ಅಲ್ಲಿಗೆ ಹೋದೆವು. ಜೋರಾಗಿ `ಗುರ್ರ‌್‌~ ಎಂದು ಗರ್ಜಿಸಿತು. ಅದು ಅಂತಿಥ ಗರ್ಜನೆಯಲ್ಲ! ನಾನು ತಾಳ್ಮೆಯಿಂದಲೇ ಚುಚ್ಚುಮದ್ದು ಹಾರಿಸಿದೆ. ಆಮೇಲೆ ಬಲೆ ಹಾಕಿ ಹಿಡಿದು ಮೈಸೂರು ಮೃಗಾಲಯಕ್ಕೆ ಕೊಟ್ಟೆವು.

ಮೈಸೂರಿಗೆ ಚಿರತೆ ಬಂದರೂ ಅವು ನಾನು ಹಾರಿಸುವ ಅರಿವಳಿಕೆ ಚುಚ್ಚುಮದ್ದಿಗಾಗಿಯೇ ಕಾಯುತ್ತಿರುತ್ತವೆ. ಮೈಸೂರಿನ ಬೆಮಲ್ ಕಾರ್ಖಾನೆ ಕಾಂಪೌಂಡ್‌ನ ಸರಳಿಗೆ ಸಿಲುಕಿ ಒದ್ದಾಡಿದ ಚಿರತೆಗೂ ನಾನೇ ಅರಿವಳಿಕೆ ಚುಚ್ಚುಮದ್ದು ಹಾರಿಸಿದ್ದು. ನಾಲ್ಕು ವರ್ಷದ ಹಿಂದೆ ಚಾಮುಂಡಿಬೆಟ್ಟದ ಸಮೀಪ ಕಾಣಿಸಿಕೊಂಡ ಚಿರತೆ ಗಾಬರಿಯಿಂದ ಸಿಕ್ಕಸಿಕ್ಕವರ ಮೇಲೆ ಎಗರಿತು.

ಆಗ ನನ್ನ ಬೆನ್ನಿಗೆ ಗಾಯವಾಗಿತ್ತು. ಪಾಪ, ಮನುಷ್ಯರ ಕ್ರೌರ್ಯಕ್ಕೆ ಅದು ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ನಾನು ಡಿ ಗ್ರೂಪ್ ನೌಕರ. ಆದರೂ ನನಗೆ ಡಾ.ಚಿಟ್ಟಿಯಪ್ಪ, ಡಾ.ಖಾದ್ರಿ ಅವರು ಅರಿವಳಿಕೆ ಚುಚ್ಚುಮದ್ದು ಹಾರಿಸುವುದನ್ನು ಕಲಿಸಿಕೊಟ್ಟರು. ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಆಮೇಲೆ ಇನ್ನೊಂದು ಸಂಗತಿ.

ಹನ್ನೆರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ಲಾಲ್‌ಮಟ್ಟಿ ಕ್ಯಾಂಪ್‌ನಲ್ಲಿ ಇದ್ದು ಜನರಿಗೆ ತೊಂದರೆ ಕೊಡುತ್ತಿದ್ದ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದೆ. ಇದನ್ನು ಮರೆಯಲು ಸಾಧ್ಯವೇ ಇಲ್ಲ.

ಇನ್ನು ನನ್ನ ಕುಟುಂಬದ ಬಗ್ಗೆ ಸ್ವಲ್ಪ ಹೇಳ್ತೀನಿ. ಪತ್ನಿ ಗೃಹಿಣಿ. ನಾಲ್ವರು ಗಂಡು  ಮಕ್ಕಳು. ರಿಜ್ವಾನ್ ಎಸ್‌ಎಸ್‌ಎಲ್‌ಸಿ ಓದಿದ್ದು, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಸಲ್ಮಾನ್ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ರುಮನ್ ಮದರಸಾದಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ರಿಹಾನ್ 6 ನೇ ತರಗತಿ ಓದುತ್ತಿದ್ದಾನೆ.

ಇವರಿಗೆ ನನ್ನಂತೆ ಕಾಡು, ಆನೆ ಇವುಗಳು ಮೋಹದ ಬಲೆ ಬೀಸಿಲ್ಲ. ನಾನೂ ಅವರಿಗೆ ಈ ಬಗ್ಗೆ ತಲೆ ತಿನ್ನುವುದಿಲ್ಲ. ಯಾವುದರ ಬಗ್ಗೆ ಪ್ರೀತಿ ಇರುವುದಿಲ್ಲವೋ ಆ  ಕೆಲಸವನ್ನು ಮಾಡಬಾರದು. ಮಕ್ಕಳನ್ನು ಅವರ ಇಷ್ಟದಂತೆ ಓದಲು ಬಿಟ್ಟಿದ್ದೇನೆ. ಬಿಡುವಾದ ನಿಮಗೆ ಹೇಳಿದಂತೆಯೇ ಅವರಿಗೂ ನನ್ನ ಕಥೆಯನ್ನು ಹೇಳುತ್ತಿರುತ್ತೇನೆ. ಅವರು ಕಣ್ಣು ಬಾಯಿ ಬಿಟ್ಟುಕೊಂಡು ಕೇಳುತ್ತಿರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT