ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆಯಿಂದ ಲಕ್ಷ ಕೋಟಿ ಲೂಟಿ

ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ
Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮ ಗಣಿಗಾರಿಕೆ ನಡೆಸಿ ಒಂದು ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿರುವ ಬಿಜೆಪಿ ಮುಖಂಡರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದರು.

ಪ್ರದೇಶ ಕಾಂಗ್ರೆಸ್‌ ಸಮಿತಿ ಇಲ್ಲಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಚುನಾ ವಣಾ ರ್‌್ಯಾಲಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು,  ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ನಡೆದಿರುವ ಹಗರಣಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಮೂಲಕ ತರಾಟೆಗೆ ತೆಗೆದುಕೊಂಡರು.

ಹಗರಣಗಳಿಗೆ ಕಾರಣರಾದ ಬಿ.ಎಸ್‌.ಯಡಿಯೂರಪ್ಪ, ಇಬ್ಬರು ಮಾಜಿ ಸಚಿವರು, ನಾಲ್ವರು ಶಾಸಕರು ಜೈಲಿಗೆ ಹೋದರು. ಅಂತಹವರನ್ನು ಮರಳಿ ಪಕ್ಷಕ್ಕೆ ಕರೆತಂದಿರುವ ಬಿಜೆಪಿ ನಾಯಕರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
‘ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

‘ಭ್ರಷ್ಟಾಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿಶ್ವದಾಖಲೆ ಮಾಡಿದೆ. ಆ ಬಗ್ಗೆ ಚಕಾರ ಎತ್ತದ ಬಿಜೆಪಿ ವರಿಷ್ಠರಿಗೆ ಯುಪಿಎ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?’ ಎಂದು ಪ್ರಶ್ನಿಸಿದರು.

ಮಹಿಳೆಯೊಬ್ಬರ ಚಲನವಲನದ ಮೇಲೆ ನಿಗಾ ವಹಿಸುವಂತೆ ಗುಜರಾತ್‌ ಸರ್ಕಾರ ಅಲ್ಲಿನ ಪೊಲೀಸರಿಗೆ ಸೂಚನೆ ನೀಡಿತ್ತು. ಅಲ್ಲದೆ ಮಹಿಳೆಯರ ದೂರವಾಣಿ ಯನ್ನು ಕದ್ದಾಲಿಸ ಲಾಗುತ್ತಿದೆ. ಇಂಥವರಿಂದ ಮಹಿಳೆ ಯರ ಸ್ವಾತಂತ್ರ್ಯ ರಕ್ಷಣೆ ಸಾಧ್ಯವೇ? ಎಂದು ಪ್ರಶ್ನಿಸಿದರು.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ಕಾಂಗ್ರೆಸ್‌ ಪಕ್ಷ ಬದ್ಧವಾಗಿದೆ. ಅಧಿಕಾರಕ್ಕೆ ಬಂದರೆ ಎರಡು ಸಾವಿರ ಮಹಿಳಾ ಪೊಲೀಸ್‌ ಠಾಣೆಗಳನ್ನು ಆರಂಭಿಸಲು ಉದ್ದೇಶಿಸಿದೆ. ಜೊತೆಗೆ ಮಹಿಳೆಯರಿಗೆ ಹೆಚ್ಚಿನ ಸಾಲಸೌಲಭ್ಯಗಳನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ,  ಲೋಕಪಾಲ ಮಸೂದೆ ಜಾರಿಗೆ ತರಲಾಗಿದೆ. ಇನ್ನೂ ಐದು ಮಸೂದೆಗಳನ್ನು ತರುವ ಉದ್ದೇಶವಿತ್ತು. ಆದರೆ, ಬಿಜೆಪಿಯವರು ಇವೆಲ್ಲ ರಾಹುಲ್‌ ಮಸೂದೆ ಎನ್ನುವ ಮೂಲಕ ಸಂಸತ್ತಿನಲ್ಲಿ ಮಂಡನೆಗೆ ಅವಕಾಶ ನೀಡಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಬೆಂಗಳೂರಿಗೆ ‘ಉದ್ಯಾನನಗರಿ’ ಎಂಬ ಖ್ಯಾತಿ ಇತ್ತು. ಆದರೆ, ಬಿಜೆಪಿ ಸರ್ಕಾರ ಇದನ್ನು ‘ಗಾರ್ಬೆಜ್‌ ಸಿಟಿ’ಯನ್ನಾಗಿ ಮಾಡಿತು. ರಸ್ತೆ, ವಿದ್ಯುತ್‌ ಇತ್ಯಾದಿ ಮೂಲಸೌಕರ್ಯಗಳಿಗೆ ಒತ್ತು ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇವರಾಜ ಅರಸು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದರೆ, ಎಸ್.ಎಂ.ಕೃಷ್ಣ ಅವರು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಕ್ಕೆ ಒತ್ತು ನೀಡಿದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿತ್ತು. ಆದರೆ ಬಿಜೆಪಿಯವರು ಇದನ್ನೆಲ್ಲ ಮಣ್ಣುಪಾಲು ಮಾಡಿದರು ಎಂದು ಟೀಕಿಸಿದರು.

ರಹಸ್ಯಸೂಚಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ನರೇಂದ್ರ ಮೋದಿ ಆರ್‌ಎಸ್‌ಎಸ್‌ ಕಟ್ಟಾಳು. ಅವರ ಬಳಿ ಟನ್‌ಗಟ್ಟಲೇ ಹಣವಿದೆ. ಆ ಮೂಲಕ ಹಿಂದುತ್ವ ಸ್ಥಾಪನೆ ಮಾಡಬೇಕು ಎಂಬುದು ಬಿಜೆಪಿಯ ರಹಸ್ಯ ಕಾರ್ಯಸೂಚಿ’ ಎಂದು ಆರೋಪಿಸಿದರು.

ಯುಪಿಎ ಅವಧಿಯಲ್ಲಿ 14 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. 96 ಕೋಟಿ ಜನ ಮೊಬೈಲ್‌ ಬಳಸುತ್ತಿದ್ದಾರೆ. ಇದು ಸಾಧನೆ ಅಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸಿದರು.

ಐಟಿ ಕ್ಷೇತ್ರವು ರಾಜ್ಯದಲ್ಲಿ 11 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಸಾಫ್ಟ್‌ವೇರ್‌ನಿಂದಾಗಿ ₨ 1.79 ಲಕ್ಷ ಕೋಟಿ ಆದಾಯ ಬರುತ್ತಿದೆ ಎಂದು ರಾಜ್ಯಸಭಾ ಸದಸ್ಯ ಎಸ್‌.ಎಂ.ಕೃಷ್ಣ ಹೇಳಿದರು.

ಕೇಂದ್ರ ಸಚಿವ ಕೆ.ರೆಹಮಾನ್‌ ಖಾನ್‌ ರಾಜ್ಯದ ಸಚಿವರಾದ ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್‌ ಸದಸ್ಯ ಎಂ.ವಿ.ರಾಜಶೇಖರನ್‌ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT