ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಭೂ ಪರಭಾರೆ

Last Updated 10 ಜೂನ್ 2011, 0:30 IST
ಅಕ್ಷರ ಗಾತ್ರ

ಬೆಂಗಳೂರು: ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತಿನಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ಹಿಂದಿನ ವಿಶೇಷ ಜಿಲ್ಲಾಧಿಕಾರಿ ಎಚ್.ರಾಮಾಂಜನೇಯ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ರಾಜಧಾನಿಯ ವ್ಯಾಪ್ತಿಯಲ್ಲಿ ನಡೆದಿರುವ 1,500 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆಯನ್ನು ಈ ಅಧಿಕಾರಿ `ಸಕ್ರಮ~ಗೊಳಿಸಿರುವುದು ಬೆಳಕಿಗೆ ಬಂದಿದೆ.

ಅನುಮಾನಾಸ್ಪದ ದಾಖಲೆಗಳ ಆಧಾರದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದ 428 ಪ್ರಕರಣಗಳನ್ನು ರಾಮಾಂಜನೇಯ ವಿಚಾರಣೆಯಿಂದ ಕೈಬಿಟ್ಟಿದ್ದಾರೆ. ಪರಿಣಾಮವಾಗಿ 1,041 ಎಕರೆ ಭೂಮಿ ಸರ್ಕಾರದ ಕೈಯಿಂದ ಜಾರಿಹೋಗಿದೆ. ವಿಶೇಷ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದ ಈ ಅಧಿಕಾರಿ, ಭೂ ಕಂದಾಯ ಕಾಯ್ದೆಯ ಅಡಿಯಲ್ಲಿ `ನ್ಯಾಯಾಧೀಶ~ರ ಪೀಠದಲ್ಲಿ ಕುಳಿತು ಇಂತಹ ಅಕ್ರಮ ಎಸಗಿರುವುದು ಆದೇಶಗಳ ಪರಿಶೀಲನೆಯಿಂದ ಪತ್ತೆಯಾಗಿದೆ.



ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136(3) ಅಡಿಯಲ್ಲಿ ದಾಖಲಿಸಿದ್ದ ಪ್ರಕರಣಗಳ ವಿಚಾರಣೆಯನ್ನೇ ಕೈಬಿಡುವ ಮೂಲಕ ಸರ್ಕಾರಿ ಭೂಮಿ ಕಬಳಿಸಿದವರಿಗೆ ನೆರವಾದ ಆರೋಪ ಈಗ ಈ ಅಧಿಕಾರಿಯನ್ನು ಸುತ್ತಿಕೊಂಡಿದೆ. 428 ಪ್ರಕರಣಗಳಲ್ಲೂ ಕಳಂಕಿತ ಅಧಿಕಾರಿ ನೀಡಿರುವ ಆದೇಶ ದ ವಿರುದ್ಧ ಹೈಕೋರ್ಟ್‌ನಲ್ಲಿ ಮೇ ಲ್ಮನವಿ ಸಲ್ಲಿಸಲು ಕರ್ನಾಟಕ ಸಾರ್ವ ಜನಿಕ ಜಮೀನುಗಳ ನಿಗಮ ಸಿದ್ಧತೆ ನಡೆಸಿದೆ.

16 ತಿಂಗಳ ಅವಧಿ: ಸರ್ಕಾರಿ ಭೂಮಿ ಕಬಳಿಕೆ ತಡೆಯಲು ಭೂ ಕಂದಾಯ ಕಾಯ್ದೆಯ ಕಲಂ 136(3)ರ ಅಡಿಯಲ್ಲಿ ವಿಶೇಷ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಈ ಕಲಂ ಪ್ರಕಾರ, ಸರ್ಕಾರಿ ಭೂಮಿ ಕಬಳಿಕೆ ಆಗುತ್ತಿರುವ ಬಗ್ಗೆ ದೂರು ಬಂದಾಗ ಅಥವಾ ಗಮನಕ್ಕೆ ಬಂದಾಗ ಈ ಸಂಬಂಧ ವರದಿ ನೀಡುವಂತೆ ಸ್ಥಳೀಯ ತಹಶೀಲ್ದಾರ್‌ಗೆ ವಿಶೇಷ ಜಿಲ್ಲಾಧಿಕಾರಿಯು ಆದೇಶ ನೀಡಬೇಕಾಗುತ್ತದೆ.

ರಾಮಾಂಜನೇಯ



ಬಳಿಕ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇದೇ ಕಲಂನ ಅಡಿಯಲ್ಲಿ ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಈ ಪ್ರಕರಣದಲ್ಲಿ ಸರ್ಕಾರ ಮತ್ತು ಒತ್ತುವರಿದಾರರು ವಾದಿ-ಪ್ರತಿವಾದಿ ಆಗಿರುತ್ತಾರೆ. ಇಲ್ಲಿ ಎಲ್ಲವೂ ದಾಖಲೆಗಳ ಆಧಾರದಲ್ಲೇ ನಿರ್ಧಾರ ಆಗುತ್ತದೆ. ವಿವಾದಿತ ಭೂಮಿಯ ಮೇಲೆ ಕಾನೂನು ಪ್ರಕಾರ ತಮಗೆ ಹಕ್ಕಿದೆ ಎಂಬುದನ್ನು ಪ್ರತಿವಾದಿಯೇ ದಾಖಲೆಗಳ ಆಧಾರದಲ್ಲಿ ಸಾಬೀತುಪಡಿಸಬೇಕಾಗುತ್ತದೆ.

ಕೆಎಎಸ್ ಅಧಿಕಾರಿಯಾದ ರಾಮಾಂಜನೇಯ 2008ರ ಜುಲೈ 8ರಂದು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2010ರ ನವೆಂಬರ್ 29ರವರೆಗೂ ಅದೇ ಹುದ್ದೆಯಲ್ಲಿದ್ದರು. ಆಗ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದಿರುವ ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಹಲವು ಪ್ರಕರಣಗಳ ವಿಚಾರಣೆ ನಡೆಸಿದ್ದರು.

ಸಂಶಯದಿಂದ ಸತ್ಯ ಬಯಲು: ಭೂ ಪರಿವರ್ತನೆ ಆದೇಶ ನೀಡುವ ಸಂಬಂಧ ವ್ಯಕ್ತಿಯೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ರಾಮಾಂಜನೇಯ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ನಂತರ ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಪೂರಕವಾಗಿ ಆದೇಶ ನೀಡಿದ್ದ ಆರೋಪವೂ ಅವರನ್ನು ಸುತ್ತಿಕೊಂಡಿತ್ತು.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ವಿ.ಬಾಲಸುಬ್ರಮಣಿಯನ್, ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136(3) ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಈ ಅಧಿಕಾರಿ ನೀಡಿದ ಆದೇಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಬೆಂಗಳೂರು ವಿಭಾಗೀಯ ಆಯುಕ್ತರಿಗೆ 2010ರ ಡಿಸೆಂಬರ್‌ನಲ್ಲಿ ಆದೇಶಿಸಿದ್ದರು.

ಸುದೀರ್ಘ ಕಾಲ ಆದೇಶಗಳ ಪರಿಶೀಲನೆ ನಡೆಸಿದ ವಿಭಾಗೀಯ ಆಯುಕ್ತರು, ಆರೋಪಿತ ಅಧಿಕಾರಿ 428 ಪ್ರಕರಣಗಳಲ್ಲಿ ಯಾವುದೇ ದಾಖಲೆಗಳ ಬೆಂಬಲ ಇಲ್ಲದೆಯೂ ಪ್ರತಿವಾದಿಗಳಿಗೆ ಪೂರಕವಾದ ಆದೇಶವನ್ನು ನೀಡಿದ್ದಾರೆ ಎಂದು ಕೆಲ ದಿನಗಳ ಹಿಂದೆ ಕಾರ್ಯಪಡೆಗೆ ವರದಿ ಸಲ್ಲಿಸಿದ್ದರು. ಇಂತಹ ಆದೇಶಗಳ ಪರಿಣಾಮವಾಗಿ 1,041 ಎಕರೆ ಭೂಮಿ ಸರ್ಕಾರದ ಕೈತಪ್ಪಿ ಹೋಗಿದೆ ಎಂದು ವರದಿಯಲ್ಲಿ ತಿಳಿಸಿದ್ದರು.

ಮೇಲ್ಮನವಿಗೆ ಸಿದ್ಧತೆ: ವಿಭಾಗೀಯ ಆಯುಕ್ತರ ವರದಿಯನ್ನು ಪರಿಶೀಲಿಸಿದ ಕಾರ್ಯಪಡೆ ಅಧ್ಯಕ್ಷರು, ರಾಮಾಂಜನೇಯ ನೀಡಿರುವ 428 ಅನುಮಾನಾಸ್ಪದ ಆದೇಶಗಳ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮಕ್ಕೆ ನಿರ್ದೇಶನ ನೀಡಿದ್ದರು.

ಮೇಲ್ಮನವಿ ಸಲ್ಲಿಸಲು ವಿಶೇಷ ವಕೀಲರನ್ನು ನಿಯೋಜಿಸುವಂತೆ ನಿಗಮ ಸರ್ಕಾರಕ್ಕೆ ಮನವಿ ಮಾಡಿತ್ತು. ಪ್ರಸ್ತಾವವನ್ನು ಪರಿಶೀಲಿಸಿದ ಸರ್ಕಾರ ಎಂಟು ವಿಶೇಷ ವಕೀಲರನ್ನು ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT