ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮನೆಗಳ ಸಕ್ರಮಕ್ಕೆ ಸಮ್ಮತಿ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ, ಆ ಜಮೀನಿನ ಮೇಲಿನ ಹಕ್ಕನ್ನು ಅನುಭವದಾರರಿಗೆ ನೀಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನ ಪರಿಷತ್ ಸೋಮವಾರ ಒಪ್ಪಿಗೆ ನೀಡಿತು.

ಈ ಹಿಂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಈ ಮಸೂದೆಯನ್ನು ರಾಜ್ಯಪಾಲರು ಪುನರ್ ಪರಿಶೀಲನೆಗೆ ಹಿಂದಿರುಗಿಸಿದ್ದರು. ಪರಿಷತ್‌ನಲ್ಲಿ ಮಸೂದೆಯನ್ನು ಯಥಾವತ್ ಅಂಗೀಕರಿಸಲಾಯಿತು. ಸರ್ಕಾರಿ ಜಮೀನಿನಲ್ಲಿನ ವಾಸದ ಮನೆಗಳ ಅನಧಿಕೃತ ನಿರ್ಮಾಣವನ್ನು ಸಕ್ರಮಗೊಳಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1961ರ (1964ರ ಕರ್ನಾಟಕ ಕಾಯ್ದೆ 12) 94-ಸಿ ಪ್ರಕರಣದ ತಿದ್ದುಪಡಿಗಾಗಿ ಈ ಮಸೂದೆ ರೂಪಿಸಲಾಗಿದೆ.

`ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 18 ಕಿ.ಮೀ. ದೂರವಿರುವ, ಹಾಗೂ ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 10 ಕಿ.ಮೀ. ದೂರವಿರುವ, ನಗರಸಭೆಗಳ ವ್ಯಾಪ್ತಿಯಿಂದ 5 ಕಿ.ಮೀ. ದೂರವಿರುವ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಆಶ್ರಯ ವಸತಿ ಯೋಜನೆಯ ನಿಯಮಾವಳಿಗಳು ಈ ಸಕ್ರಮಕ್ಕೆ ಅನ್ವಯ ಆಗಲಿವೆ' ಎಂದು ಕಂದಾಯ ಸಚಿವ ಕೆ.ಎಸ್. ಈಶ್ವರಪ್ಪ ವಿವರಿಸಿದರು.

ಪುರಸಭೆಗಳು ಮತ್ತು ಗ್ರಾಮ ಪಂಚಾಯತಿಗಳ ಹೊರಗಿನ ವರ್ತುಲದಿಂದ 3 ಕಿ.ಮೀ. ಮಿತಿಯೊಳಗೆ ಬರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ. 2,400 ಚದರ ಅಡಿಯ ಕಟ್ಟಿದ ಮನೆ ಅಥವಾ ಕಟ್ಟಡ ಪ್ರದೇಶದ ವಾಸ್ತವಿಕವಾಗಿ ಆಕ್ರಮಿತವಾದ ಪ್ರದೇಶ, ಅದರಲ್ಲಿ ಯಾವುದು ಕಡಿಮೆ ಆಗುವುದೋ ಅದನ್ನು ಸಕ್ರಮಗೊಳಿಸಲಾಗುವುದು ಎಂದರು.

`ಈ ಮಸೂದೆಯಿಂದ ಭೂಗಳ್ಳರಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ಭೂಮಿ ಇಲ್ಲದಂತಾಗಿರುವ ಈ ಸಂದರ್ಭದಲ್ಲಿ ಇಂಥ ಮಸೂದೆ ಅಂಗೀಕರಿಸುವುದು ಬೇಡ. ಇದರಿಂದ ಭೂಗಳ್ಳರು, ರಿಯಲ್ ಎಸ್ಟೇಟ್ ಉದ್ಯಮಿಗಳು ಕಾನೂನಿನಿಂದ ನುಣುಚಿಕೊಳ್ಳಲು ಸಹಾಯವಾಗುತ್ತದೆ' ಎಂದು ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಮಸೂದೆ ಅಂಗೀಕಾರಕ್ಕೆ ವಿರೋಧಿಸಿದರು.  ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪಡೆದುಕೊಳ್ಳಲು ಪ್ರೋತ್ಸಾಹ ಸಿಗಬಾರದು ಎಂಬ ಉದ್ದೇಶದಿಂದ ರಾಜ್ಯಪಾಲರು ಈ ಮಸೂದೆಯನ್ನು ಪುನರ್ ಪರಿಶೀಲನೆಗೆ ಕಳುಹಿಸಿದ್ದಾರೆ. ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಮಸೂದೆ ಅಂಗೀಕರಿಸುವುದು ಸರಿಯಲ್ಲ ಎಂದರು.

`ಆಶ್ರಯ ಮನೆ ಪಡೆಯಲು ಅರ್ಹತೆ ಉಳ್ಳವರು ಅಕ್ರಮ ಮನೆ ಕಟ್ಟಿಕೊಂಡಿದ್ದರೆ ಅಂಥವರಿಗೆ ಹಕ್ಕುಪತ್ರ ನೀಡಬಹುದು. ರಾಜಕೀಯ ಪುಢಾರಿಗಳಿಗೆ, ದಲ್ಲಾಳಿಗಳಿಗೆ ಸಹಾಯ ಆಗಬಾರದು. ಈಗ ಚುನಾವಣೆ ಸಮೀಪ ಇರುವುದರಿಂದ ಈ ಮಸೂದೆಯನ್ನು ತಡೆ ಹಿಡಿಯಬೇಕು' ಎಂದು ಜೆಡಿಎಸ್‌ನ ಎಂ.ಸಿ.ನಾಣಯ್ಯ ಹೇಳಿದರು. `ಹಾವೇರಿಯ ಕೆಜೆಪಿ ಸಮಾವೇಶದ ಪರಿಣಾಮ ಸರ್ಕಾರ ಯಾವಾಗ ಬೀಳಲಿದೆಯೋ ಗೊತ್ತಿಲ್ಲ' ಎಂದು ಕುಟುಕಿದರು.

`ಅಕ್ರಮ-ಸಕ್ರಮ ಯೋಜನೆ ಹಿನ್ನೆಲೆಯಲ್ಲಿ ಅನೇಕ ರಾಜಕೀಯ ವ್ಯಕ್ತಿಗಳು ಈಗಾಗಲೇ ಅರ್ಜಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಡವರು, ತಿಳಿವಳಿಕೆ ಇಲ್ಲದವರು ಅಕ್ರಮ ಮಾಡಿರುವುದು ಕಡಿಮೆ. ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಹೇಳಿದರು.

ಕಾಂಗ್ರೆಸ್‌ನ ಮೋಟಮ್ಮ ದನಿಗೂಡಿಸಿದರು. ಬಿಜೆಪಿಯ ರಾಮಚಂದ್ರಗೌಡ ಮಧ್ಯ ಪ್ರವೇಶಿಸಿ, ರಾಜ್ಯದಲ್ಲಿರುವ ಬಡವರ ಗತಿ ಏನು ಎಂದು ಪ್ರಶ್ನಿಸಿದರು. ಬಡವರಿಗೆ ವಾಸಿಸಲು ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಈ ಮಸೂದೆಗೆ ಒಪ್ಪಿಗೆ ನೀಡಬೇಕು . ಭೂಗಳ್ಳರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT