ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ: ಆಗ್ರಹ

Last Updated 5 ಜನವರಿ 2012, 6:55 IST
ಅಕ್ಷರ ಗಾತ್ರ

ತಿ.ನರಸೀಪುರ: ಮರಳು ಮಾಫಿಯಾ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಅದರ ನಿಯಂತ್ರಣ ಮಾಡದಿದ್ದರೆ ಮೈಸೂರು ಜಿಲ್ಲೆ ಬಳ್ಳಾರಿಯಂತಾ ಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತ ಪಡಿಸಿದರು.

ರಾಜ್ಯ ಹಣಕಾಸು ನಿಧಿಯ ಅನುದಾನಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಮತ್ತು ತರಕಾರಿ ಮಾರುಕಟ್ಟೆಗೆ ಮಂಗಳವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮರಳು ಮಾಫಿಯಾ ಕುರಿತು ಕಳೆದ ಅಧಿವೇಶನದಲ್ಲಿ ಚರ್ಚಿಸಿದ್ದೇವೆ. ಲೋಕೋಪಯೋಗಿ ಸಚಿವರ ಜತೆ ಸಭೆ ನಡೆಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತಮಟ್ಟದ ಸಭೆ ನಡೆದಿದೆ. ಆದರೂ ಮರಳು ಮಾಫಿಯಾ ಜಿಲ್ಲೆಯಲ್ಲಿ ಜೀವಂತವಾಗಿದೆ. ಅಕ್ರಮವಾಗಿ ಮರಳನ್ನು ರಾತ್ರೋ ರಾತ್ರಿ ಸಾಗಣೆ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಓವರ್ ಲೋಡ್ ಮರಳು ಲಾರಿಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. ಒಂದು ಲೋಡ್ ಮರಳಿಗೆ ರೂ. 40 ಸಾವಿರ ಕೊಡುವ ಸ್ಥಿತಿ ನಿರ್ಮಾಣವಾಗಿದೆ.

ರಾತ್ರೋ ರಾತ್ರಿ ನೂರಾರು ಮರಳು ಲಾರಿಗಳು ಬೆಂಗಳೂರಿಗೆ ಸಾಗುತ್ತಿವೆ. ಇದರ ಹಿಂದ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದ ಸೇತುವೆಗಳ ಆಸುಪಾಸು ಮರಳುಗಾರಿಕೆ ಮೇಲೆ ನಿಷೇಧವಿದ್ದರೂ ಯಂತ್ರಗಳನ್ನು ಬಳಸಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ತಾಲ್ಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರು ಮತ್ತೊಬ್ಬರತ್ತ ಬೆರಳು ತೋರುತ್ತಿದ್ದಾರೆ. ತಪ್ಪು ಯಾರೇ ಮಾಡಿದವರೂ ಅವರಿಗೆ ಶಿಕ್ಷೆಯಾಗಲಿ. ಎಷ್ಟೇ ರಾಜಕೀಯ ಪ್ರಭಾವ ಬಂದರೂ ಕ್ರಮ ಜರುಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಮರಳು ತೆಗೆಯುವ ಕೂಲಿ ಕಾರ್ಮಿಕರ ಸಹಕಾರ ಸಂಘಗಳನ್ನು ಸ್ಥಾಪಿಸಿ. ಲಾರಿ ಮಾಲೀಕರಿಗೆ ಬಾಡಿಗೆ ಸಿಗುವಂತೆ ಮಾಡಿ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮರಳು ಪೂರೈಕೆಯಾಗುವಂತೆ ಸಲಹೆ ನೀಡಿದ್ದೇವೆ. ಆದರೂ ಇವುಗಳು ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT