ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಾಡದಲ್ಲಿ ಇಬ್ಬರು ಮಹಿಳೆಯರು

ಮಂಡ್ಯ: ಹಲವು ವೈಶಿಷ್ಟ್ಯಗಳ ಲೋಕಸಭಾ ಉಪಚುನಾವಣೆ
Last Updated 6 ಆಗಸ್ಟ್ 2013, 5:11 IST
ಅಕ್ಷರ ಗಾತ್ರ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯು ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ.
ಮಹಿಳಾ ಅಭ್ಯರ್ಥಿ: ಈ ಕ್ಷೇತ್ರದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದೂ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷದಿಂದ ಎನ್ನುವುದು ಗಮನಾರ್ಹ.

ಚಿತ್ರನಟಿ ರಮ್ಯಾ ಅವರು ಕಾಂಗ್ರೆಸ್ ಪಕ್ಷದಿಂದ ಹಾಗೂ ನಂದಿನಿ ಜಯರಾಂ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದಾರೆ. 18ನೇ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಆ ಪೈಕಿ 2009ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಶಕುಂತಲಾ ಅವರನ್ನು  ಹೊರತುಪಡಿಸಿದರೆ, ಯಾವ ಮಹಿಳೆಯೂ ಸ್ಪರ್ಧೆಗೆ ಇಳಿದಿರಲಿಲ್ಲ.

ಮೂರನೇ ಬಾರಿಗೆ ಉಪಚುನಾವಣೆ: ಮಂಡ್ಯ ಲೋಕಸಭೆಗೆ ಮೂರನೇ ಬಾರಿಗೆ ಉಪಚುನಾವಣೆ ನಡೆಯುತ್ತಿದೆ. 1968ರಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಎಂ.ಕೆ. ಶಿವನಂಜಪ್ಪ ಅವರ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. 1972ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಾಜೀನಾಮೆ ನೀಡಿದ್ದರಿಂದಾಗಿ ನಡೆದಿತ್ತು. ಈಗ ಎನ್. ಚಲುವರಾಯಸ್ವಾಮಿ ಅವರ ರಾಜೀನಾಮೆಯಿಂದಾಗಿ ಉಪಚುನಾವಣೆ ನಡೆಯುತ್ತಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಕೆ.ಎಸ್. ದೊರೆ ಸ್ವಾಮಿ, ನಂದಿನಿ ಜಯರಾಂ ಅವರನ್ನು ಹೊರತು ಪಡಿಸಿದರೆ, ಉಳಿದವರಾರು ಪದವಿಯ ವರೆಗೂ ಶಿಕ್ಷಣ ಪಡೆದಿಲ್ಲ.

9ನೇ ಬಾರಿಗೆ ಸ್ಪರ್ಧೆ:  ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಶಂಭುಲಿಂಗೇಗೌಡ ಅವರು 9ನೇ ಬಾರಿಗೆ ಚುನಾವಣೆಯ ಕಣಕ್ಕೆ ಧುಮುಕಿದ್ದಾರೆ. ಮಳವಳ್ಳಿ ತಾಲ್ಲೂಕಿನ ದೇಶವಳ್ಳಿಯವರು.

2008ರಿಂದ ಚುನಾವಣೆ ಯಾತ್ರೆ ಆರಂಭಿಸಿರುವ ಇವರು, ಕಳೆದ ಬಾರಿಯ ಲೋಕಸಭೆ, ಈ ಬಾರಿಯ ಶ್ರೀರಂಗಪಟ್ಟಣದ ವಿಧಾನಸಭೆ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 15,234 ಮತಗಳನ್ನು ಗಳಿಸಿದ್ದರು.  `ಬೆಲೆ ಏರಿಕೆಯಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಯಾವ ಪಕ್ಷಗಳೂ ಜನಹಿತದ ಬಗೆಗೆ ಯೋಚಿಸುತ್ತಿಲ್ಲ.

ಮತದಾರರು ಒಳ್ಳೆಯವರನ್ನು ಆಯ್ಕೆ ಮಾಡಿಕೊಳ್ಳಬೇಕು. ಹಣ, ಹೆಂಡಕ್ಕೆ ಮತ ಮಾರಿಕೊಳ್ಳಬಾರದು' ಎಂದು ಮನವಿ ಮಾಡಿಕೊಳ್ಳುತ್ತಾರೆ ಶಂಭುಲಿಂಗೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT