ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಣಿತ ಸಾಧನೆ

Last Updated 25 ಜೂನ್ 2011, 19:30 IST
ಅಕ್ಷರ ಗಾತ್ರ

ವಿಷ್ಣು ನಾರಾಯಣ ಭಾತಖಾಂಡೆ ಹಿಂದೂಸ್ತಾನಿ ಸಂಗೀತಕ್ಕೆ ನೀಡಿದ ಕೊಡುಗೆ ಬಹುದೊಡ್ಡದು. ಕಾನೂನು ಪದವೀಧರರಾಗಿದ್ದ ಅವರು ವಕೀಲಿ ವೃತ್ತಿಗೆ ತಿಲಾಂಜಲಿಯಿತ್ತು, ಹಿಂದೂಸ್ತಾನಿ ಸಂಗೀತಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಮಗ್ರ ಭಾರತವನ್ನು (ಈಗಿನ ಪಾಕಿಸ್ತಾನವೂ ಸೇರಿದಂತೆ) ಸುತ್ತಾಡಿ, ಕ್ಷೇತ್ರಕಾರ್ಯವನ್ನು ಮಾಡಿ, ಹಿಂದೂಸ್ತಾನಿ ಸಂಗೀತಕೆ ಕಾಯಕಲ್ಪ ನೀಡಿದವರು. ಮೊದಲ ಬಾರಿಗೆ ಸ್ವರಲಿಪಿಯನ್ನು ಪರಿಚಯಿಸಿದ ಖ್ಯಾತಿ ಅವರದು. ಇಂದಿಗೂ ಹಿಂದೂಸ್ತಾನಿ ಸಂಗೀತದಲ್ಲಿ ಭಾತಖಾಂಡೆಯವರ ಹಾಗೂ ಪಲುಸ್ಕರರ ಸ್ವರಲಿಪಿಗಳೇ ಬಳಕೆಯಲ್ಲಿವೆ!

ಹರಿದು ಹಂಚಿಹೋಗಿದ್ದ ಹಿಂದೂಸ್ತಾನಿ ರಾಗಗಳನ್ನು ಒಂದುಗೂಡಿಸಿ, ಅವುಗಳೆಲ್ಲವನ್ನು ಹತ್ತು ಥಾಟಗಳಲ್ಲಿ (ಕರ್ನಾಟಕಿ ಸಂಗೀತದ ಮೇಳ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು) ವರ್ಗೀಕರಿಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ.

ಸಂಗೀತವನ್ನು ಕಲಿಯುವವರಿಗಾಗಿ ನಿರ್ದಿಷ್ಟವಾದ ಪಠ್ಯಕ್ರಮವನ್ನು ತಯಾರಿಸಿಕೊಟ್ಟವರೂ ಅವರೇ. ಸಂಗೀತಕ್ಕಾಗಿಯೇ ಮೀಸಲಾಗಿರುವ ಪತ್ರಿಕೆಯೊಂದನ್ನು ಮೊದಲಬಾರಿಗೆ ಹೊರತಂದ ಕೀರ್ತಿಯೂ ಅವರದು.

ಹಿಂದೂಸ್ತಾನಿ ಸಂಗೀತ ಶಾಸ್ತ್ರಕ್ಕೊಂದು ಸಿದ್ಧಾಂತದ ತಳಹದಿಯನ್ನು ರೂಪಿಸಿ, ಮೊದಲು ಪ್ರಚಲಿತದಲ್ಲಿದ್ದ ರಾಗ-ರಾಗಿಣಿ ಪದ್ಧತಿಗೆ ಪರ್ಯಾಯವಾಗಿ ರಾಗಗಳನ್ನು ಹತ್ತು ಥಾಟಗಳಲ್ಲಿ ವರ್ಗೀಕರಿಸಿದರು. ಅನೇಕ ಸಂಗೀತ ಸಮ್ಮೇಳನಗಳನ್ನು ಆಯೋಜಿಸಿದ, ಸಂಗೀತ ಶಾಸ್ತ್ರಗ್ರಂಥಗಳನ್ನು ಸಂಸ್ಕೃತ ಹಾಗೂ ಹಿಂದಿಯಲ್ಲಿ ಅಗ್ಗಳಿಕೆಯ ಅವರು, ಬರೋಡ ಹಾಗೂ ಗ್ವಾಲಿಯರ್ ಮಹಾರಾಜರ ನೆರವಿನಿಂದ ಹಿಂದೂಸ್ತಾನಿಯನ್ನು ವ್ಯವಸ್ಥಿತಗೊಳಿಸಿದರು.

ಏನೆಲ್ಲ ಸಾಧನೆ ಮಾಡಿದರೂ ತಾವು ಮಾಡಿದ ಕೆಲಸ ಅಪೂರ್ಣವಾಗಿಯೇ ಇದೆ ಎಂಬ ಭಾವನೆ ಅವರದಾಗಿತ್ತು. ಇನ್ನಷ್ಟು ಕಾರ್ಯವನ್ನು ನಾನು ಹಿಂದೂಸ್ತಾನಿ ಸಂಗೀತಕ್ಕಾಗಿ ಮಾಡಬಹುದಿತ್ತು ಎಂಬ ಕೊರಗು ಅವರನ್ನು ಕೊನೆಯವರೆಗೂ ಕಾಡುತ್ತಿತ್ತು.

1935ರಲ್ಲಿ `ರಾಗಾಜ್ ಅಂಡ್ ರಾಗಿಣೀಜ್- ಎ ಪಿಕ್ಟೋರಿಯಲ್ ಆಂಡ್ ಆಯಕೊನೋಗ್ರಾಫಿಕ್ ಆಫ್ ಮ್ಯೂಜಿಕಲ್ ಮೋಡ್ಸ್~ ಎನ್ನುವ ಹಿಂದೂಸ್ತಾನಿ ಸಂಗೀತಕ್ಕೆ ಸಂಬಂಧಿಸಿದ ಕೃತಿಯೊಂದು ಪ್ರಕಟವಾಯಿತು. ಇದರ ಲೇಖಕ ಓ.ಸಿ.ಗಂಗೂಲಿಯವರು ತಮ್ಮ ಗ್ರಂಥವನ್ನು ಭಾತಖಾಂಡೆಯವರಿಗೆ ಅರ್ಪಣೆ ಮಾಡಿದ್ದರು. ಮೊದಲ ಆವತ್ತಿಯಲ್ಲಿ ಕೇವಲ 36 ಪ್ರತಿಗಳು ಮಾತ್ರ ಮುದ್ರಿಸಲ್ಪಟ್ಟಿದವು. ಗಂಗೂಲಿಯವರಿಗೆ ತಮ್ಮ ಗ್ರಂಥವನ್ನು ಭಾತಖಾಂಡೆಯವರಿಗೆ ಖುದ್ದಾಗಿ ಮುಟ್ಟಿಸಬೇಕೆಂಬ ಆಸೆ. ಭಾತಖಾಂಡೆಯವರಿಗೆ ಆಗ ಎಪ್ಪತ್ತೈದರ ಪ್ರಾಯ.

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಎದ್ದು ಕೂರುವುದೂ ಸಾಧ್ಯವಿರಲಿಲ್ಲ. ಅಂಥ ಸ್ಥಿತಿಯಲ್ಲಿದ್ದ ಸಂಗೀತ ಋಷಿಯನ್ನು ಕಂಡು ಗಂಗೂಲಿಯವರಿಗೆ ಕೆಡುಕೆನಿಸಿತು.
ಮಲಗಿದಲ್ಲಿಯೇ ಗ್ರಂಥವನ್ನು ನೋಡಿದೊಡನೆ ಭಾತಖಾಂಡೆ ಉತ್ಸುಕರಾದರು.

ಅವರಲ್ಲಿ ಹೊಸ ಹುಮ್ಮಸ್ಸು ತುಂಬಿತು. ಮಹತ್ವದ ಗ್ರಂಥವೊಂದು ತಮಗೆ ಅರ್ಪಣೆಗೊಂಡಿದೆ ಎಂಬ ಆನಂದ ಅವರಿಗಾಗಿತ್ತು. ಅನೇಕ ದಿನಗಳಿಂದ ಎದ್ದು ಕೂಡಲಾಗದೇ ಬಳಲಿದ್ದ ಅವರು ಪವಾಡವೆಂಬಂತೆ ಸ್ವಪ್ರಯತ್ನದಿಂದ ಎದ್ದು ಕುಳಿತರು! ಎಲ್ಲರಿಗೂ ಆಶ್ಚರ್ಯ ಮತ್ತು ಸಂತೋಷ. ಭಾತಖಾಂಡೆಯವರು ಗ್ರಂಥದ ಒಂದೊಂದೇ ಪುಟಗಳನ್ನು ತಿರುವಿ ಹಾಕತೊಡಗಿದರು. ಪುಟಗಳನ್ನು ತಿರುಗಿಸಿದಂತೆಲ್ಲ ಅವರ ಕಣ್ಣುಗಳು ನೀರು ತುಂಬಿಕೊಳ್ಳತೊಡಗಿದವು.

ಗಂಗೂಲಿಯವರನ್ನು ಹೆಮ್ಮೆಯಿಂದ ನೋಡಿದ ಭಾತಖಾಂಡೆಯವರು- `ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಅಭಿನಂದನೆಗಳು~ ಎಂದರು. ಈ ಅಭಿನಂದನೆಯನ್ನು ಗಂಗೂಲಿಯವರು ಆಶೀರ್ವಾದವೆಂದು ಸ್ವೀಕರಿಸಿದರು. ಭಾತಖಾಂಡೆಯವರು ಗದ್ಗದಿತ ಕಂಠದಿಂದ ತಮ್ಮ ಮಾತು ಮುಂದುವರಿಸಿದರು-

`ಸಂಗೀತಕ್ಕಾಗಿ ನಾನು ಒಂದಿಷ್ಟು ಕೆಲಸ ಮಾಡಿದ್ದೇನೆ. ಮಾಡಬೇಕಾದ ಕೆಲಸ ಬಹಳಷ್ಟಿದೆ. ಅದನ್ನಷ್ಟು ಮಾಡಿದ್ದರೆ ಸಾರ್ಥಕವಾಗುತ್ತಿತ್ತು~.  ಈ ಮಾತುಗಳಿಂದ ಗಂಗೂಲಿಯವರು ಅವಾಕ್ಕಾದರು. ಇಡೀ ಜೀವನವನ್ನೇ ಸಂಗೀತಕ್ಕಾಗಿ ಮುಡಿಪಿಟ್ಟು, ನಾಲ್ಕು ಜನ್ಮಗಳಲ್ಲಿ ಮಾಡಬಹುದಾದ ಕಾರ್ಯವನ್ನು ಒಂದೇ ಜನ್ಮದಲ್ಲಿ ಮಾಡಿದ ಸಂಗೀತದ ಮರ್ಹರ್ಷಿಯಿಂದ ಈ ಮಾತು! ಇಂಥ ಮನೋಭಾವವೇ, ಭಾತಖಾಂಡೆಯಂಥವರನ್ನು ಸಂಗೀತ ಲೋಕದ ಧ್ರುವತಾರೆಯನ್ನಾಗಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT