ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿದ ಗಣ್ಯರಿಗೆ ಸಂತಾಪ

Last Updated 5 ಡಿಸೆಂಬರ್ 2012, 19:45 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಸೇರಿದಂತೆ 14 ಮಂದಿ ಅಗಲಿದ ಗಣ್ಯರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಸಂತಾಪ ಸೂಚಿಸಲಾಯಿತು.

ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ವಿಧಾನ ಪರಿಷತ್ತಿನಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಂತಾಪ ಸೂಚನೆಯ ಪ್ರಸ್ತಾವ ಮಂಡಿಸಿದರು. ಅದಕ್ಕೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಸೇರಿದಂತೆ ಇತರರು ಬೆಂಬಲ ಸೂಚಿಸಿದರು. ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು.

ಮಾಜಿ ಸಚಿವ ಬಿ.ಮುನಿಯಪ್ಪ ಮುದ್ದಪ್ಪ, ಮಾಜಿ ಶಾಸಕರಾದ ಡಾ.ಎಚ್.ಪುಟ್ಟದಾಸ್, ಜಿ.ಜಿ.ಯಲ್ಲಿಗುತ್ತಿ, ಬಿ.ಆರ್.ಧನಂಜಯ, ಎಂ.ಶಂಕರರೆಡ್ಡಿ, ಡಿ.ಬಿ.ಗಂಗಾಧರಪ್ಪ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಡಾ.ಸಿ.ಬಂದೀಗೌಡ, ಆರ್‌ಎಸ್‌ಎಸ್ ಪ್ರಮುಖ ಕೆ.ಎಸ್.ಸುದರ್ಶನ್, ಕ್ಷೀರಕ್ರಾಂತಿ ಹರಿಕಾರ ಡಾ.ವರ್ಗೀಸ್ ಕುರಿಯನ್, ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್, ಸಾಹಿತಿ ಡಾ.ಅನಿಲ್ ಬಾಬುರಾವ್ ಕಮತಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಠಾಕ್ರೆ ಬಗ್ಗೆ ಮೆಚ್ಚುಗೆ: ಸಂತಾಪ ಸೂಚನೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಠಾಕ್ರೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. `ಮರಾಠಿ ಭಾಷೆ ಮತ್ತು ಮಹಾರಾಷ್ಟ್ರದ ಬಗ್ಗೆ ಠಾಕ್ರೆ ಅವರಿಗೆ ಇದ್ದ ಅಭಿಮಾನ ನಮ್ಮವರಿಗೆ, ನಮ್ಮ ಭಾಷೆ ಮತ್ತು ನಮ್ಮ ರಾಜ್ಯದ ಬಗ್ಗೆ ಇಲ್ಲ. ಈ ವಿಷಯದಲ್ಲಿ ಠಾಕ್ರೆ ಮಾದರಿ' ಎಂದರು.

ಹೀಗೆ ಹೇಳುತ್ತಿದ್ದಂತೆ ಕಾಂಗ್ರೆಸ್‌ನ ಯು.ಟಿ.ಖಾದರ್ ಅವರು `ಠಾಕ್ರೆ ಕರ್ನಾಟಕ ವಿರೋಧಿ' ಎಂದು ಕೂಗಿದರು. ನಂತರ ಸಿದ್ದರಾಮಯ್ಯ ಅವರು `ಠಾಕ್ರೆ ಸತ್ತಿದ್ದಾರೆ. ಹೀಗಾಗಿ ಸಂತಾಪ ಸೂಚಿಸೋಣ' ಎಂದು ಹೇಳಿದರು.

ಪರಿಷತ್ತಿನಲ್ಲಿ ಸಭಾನಾಯಕರೂ ಆದ ವಸತಿ ಸಚಿವ ವಿ.ಸೋಮಣ್ಣ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT