ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ 3ಡಿ ಲೋಹ ಮುದ್ರಣ ಯಂತ್ರದ ಅವಿಷ್ಕಾರ

Last Updated 3 ಡಿಸೆಂಬರ್ 2013, 10:49 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ) ಆಟಿಕೆಗಳು, ಸೆಲ್ ಫೋನ್ ಚೌಕಟ್ಟುಗಳು ಅಥವಾ ಕ್ರಿಸ್ಮಸ್ ಡೆಕೋರೇಷನ್ ಗಳನ್ನು ನೀವೇ ನಿಮ್ಮ ಮನೆಯಲ್ಲೇ ಸ್ವತಃ ತಯಾರಿಸಿಕೊಳ್ಳುವಂತಿದ್ದರೆ ಹೇಗೆ? ಕಲ್ಪಿಸಿಕೊಳ್ಳಿ.

ವಿಜ್ಞಾನಿಗಳು ಇದೀಗ ಅತಿ ಕಡಿಮೆ ವೆಚ್ಚದಲ್ಲಿ, ಮುಕ್ತವಾಗಿ ಎಲ್ಲೆಡೆ ಲಭ್ಯವಾಗಬಲ್ಲಂತಹ 3ಡಿ ಲೋಹ ಮುದ್ರಣಯಂತ್ರವನ್ನು  (3 ಡಿ ಮೆಟಲ್ ಪ್ರಿಂಟರ್) ನಿರ್ಮಿಸಿದ್ದಾರೆ. ಅಂದರೆ ಯಾರು ಬೇಕಿದ್ದರೂ ಅದನ್ನು ಬಳಸಿ ತಮಗೆ ಬೇಕಾದ ಲೋಹದ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು!

ಈವರೆಗೆ, 3ಡಿ ಮುದ್ರಣ ಪಾಲಿಮರ್ ವ್ಯವಹಾರವಾಗಿತ್ತು. ಬಹುತೇಕ ನಿರ್ಮಾಪಕರು 3ಡಿ ಮುದ್ರಣಯಂತ್ರಗಳನ್ನು ಬಳಸಿಕೊಂಡು ಟೆಂಟ್ ನಿಂದ ಚೆಸ್ ಸೆಟ್ ವರೆಗೆ ಎಲ್ಲ ಬಗೆಯ ಗ್ರಾಹಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮಿಸುತ್ತಿದ್ದರು.

ಮಿಷಿಗನ್ ತಂತ್ರಜ್ಞಾನ ವಿಶ್ವ ವಿದ್ಯಾಲಯದ ಜೊಶುವಾ ಪೀಯರ್ಸ್ ಮತ್ತು ಅವರ ತಂಡವು ನಿರ್ಮಿಸಿರುವ ಹೊಸ 3ಡಿ ಮುದ್ರಣಯಂತ್ರವು ಈ ಉತ್ಪನ್ನಗಳ ಪಟ್ಟಿಗೆ ಇದೀಗ ಸುತ್ತಿಗೆಯನ್ನೂ ಸೇರಿಸಿದೆ.

ವಿವಿಧ ಉತ್ಪನ್ನಗಳ ವಿವರವಾದ ನಕ್ಷೆಗಳು, ಸಾಫ್ಟ ವೇರ್ ಇತ್ಯಾದಿಗಳೆಲ್ಲ ಈಗ ಮುಕ್ತವಾಗಿ ಎಲ್ಲೆಡೆಯಲ್ಲೂ ಲಭಿಸುತ್ತವೆ. ಅಂದರೆ ಈಗ ಇದನ್ನು ಬಳಸಿಕೊಂಡು ಯಾರು ಬೇಕಿದ್ದರೂ ಈ ಹೊಸ 3 ಡಿ ಮುದ್ರಣಯಂತ್ರವನ್ನು ತಮ್ಮ ಸ್ವಂತ ಕೆಲಸಗಳಿಗಾಗಿ ತಯಾರಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

'ಮೊತ್ತ ಮೊದಲಿಗೆ ನಿರ್ಮಿಸಲಾಗಿದ್ದ ರಿಪ್ ರಾಪ್ ಪ್ಲಾಸ್ಟಿಕ್ 3 ಡಿ ಮುದ್ರಣಯಂತ್ರವನ್ನು ಮುಕ್ತ ಮಾಹಿತಿಯ ನೆರವಿನಿಂದ ಈಗ ಎಲ್ಲೆಡೆಯಲ್ಲೂ ನಿರ್ಮಿಸಿಕೊಳ್ಳಲಾಗುತ್ತಿದೆ. ತಿಂಗಳ ಒಳಗಾಗಿ ಯಾರಾದರೂ ಒಬ್ಬರು ನಮಗಿಂತಲೂ ಉತ್ತಮ ವಿನ್ಯಾಸದ 3ಡಿ ಲೋಹ ಮುದ್ರಣಯಂತ್ರ ತಯಾರಿಸಬಲ್ಲರು ಎಂದು ನಾನು ಖಚಿತವಾಗಿ ಹೇಳಬಲ್ಲೆ' ಎಂದು  ಪೀಯರ್ಸ್ ನುಡಿದರು.

ಪೀಯರ್ಸ್ ತಂಡವು 1500 ಅಮೆರಿಕನ್ ಡಾಲರ್ ಗೂ ಕಡಿಮೆ ಬೆಲೆಯ ಸಾಧನಗಳನ್ನು ಬಳಸಿ ಈ 3 ಡಿ ಲೋಹ ಮುದ್ರಣಯಂತ್ರವನ್ನು ತಯಾರಿಸಿದೆ. ಅವರು ಇದಕ್ಕಾಗಿ ಬಳಸಿದ ವಸ್ತುಗಳಲ್ಲಿ ಪುಟ್ಟ ಕಮರ್ಷಿಯಲ್ ಮಿಗ್ ವೆಲ್ಡರ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭಿಸುವ ಮೈಕ್ರೋ - ಕಂಟ್ರೋಲರ್ ಸೇರಿವೆ.

ವಾಣಿಜ್ಯ ಬಳಕೆಯ ಲೋಹ ಮುದ್ರಣಯಂತ್ರಗಳು ಲಭ್ಯ ಇವೆ. ಆದರೆ ಅವು ತುಂಬಾ ದುಬಾರಿ. ಅವುಗಳ ಬೆಲೆ 5 ಲಕ್ಷ ಡಾಲರ್ ಗಳಿಗೂ ಹೆಚ್ಚು.

'ನೀವೇ ತಯಾರಿಸಿಕೊಳ್ಳಿ' ಲೋಹ ಮುದ್ರಣ ಯಂತ್ರವು ಕಡಿಮೆ ವೆಚ್ಚದ್ದಾಗಿದ್ದು, ವಾಣಿಜ್ಯ ಬಳಕೆಯ ಪ್ಲಾಸ್ಟಿಕ್ 3 ಡಿ ಮುದ್ರಣಯಂತ್ರಕ್ಕಿಂತಲೂ ಅಗ್ಗ. ಯಾರು ಬೇಕಿದ್ದರೂ ಗೃಹ ಬಳಕೆಗೆ ಇದನ್ನು ಬಳಸಿಕೊಳ್ಳಬಹುದು ಎಂದು ಪೀಯರ್ಸ್ ನುಡಿದರು.

3ಡಿ ಲೋಹ ಮುದ್ರಣಯಂತ್ರವು ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುವುದರ ಜೊತೆಗೇ, ಮನೆಯಲ್ಲೇ ಮದ್ದು ಗುಂಡುಗಳನ್ನು ತಯಾರಿಸುವ ಅಪಾಯವೂ ಇದೆ. ವಾಣಿಜ್ಯ ಬಳಕೆಯ ಲೋಹ ಹಾಗೂ ಪ್ಲಾಸ್ಟಿಕ್ 3 ಡಿ ಮುದ್ರಣಯಂತ್ರಗಳನ್ನು ಬಳಸಿ ಪಿಸ್ತೂಲುಗಳನ್ನು ತಯಾರಿಸಿರುವ ಕೆಲವರು ಇದನ್ನು ತಮ್ಮ ಉದ್ದೇಶಕ್ಕೆ ಬಳಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎಂದು ಸಂಶೋಧಕರು ನುಡಿದರು.

ಆದರೆ 3ಡಿ ಲೋಹ ಮುದ್ರಣ ಯಂತ್ರದಿಂದ ಆಗುವ ಆಪಾಯಗಳಿಗಿಂತ ಉಪಯುಕ್ತತೆಯೇ ಹೆಚ್ಚು ಎಂಬುದು ತಮ್ಮ ನಂಬುಗೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT