ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ರಂಜನೆ

Last Updated 19 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

ಚಿತ್ರ: ನಾವು ನಮ್ಮ ಹೆಂಡತಿಯರು
ಆರ್ಥಿಕ ಬಿಕ್ಕಟ್ಟಿನಿಂದ ಸಾಫ್ಟ್‌ವೇರ್ ಉದ್ಯೋಗಿ ಕೆಲಸ ಕಳೆದುಕೊಂಡಿದ್ದಾನೆ. ಸ್ವಂತ ಮನೆಯನ್ನು ಭೋಗ್ಯಕ್ಕೆ ಹಾಕಿ, ಪುಟ್ಟ ಮನೆ ಸೇರುವ ಇರಾದೆ ಆತನದು. ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆ ನೋಡಲು ಬರುವ ರಿಯಲ್ ಎಸ್ಟೇಟ್ ದಲ್ಲಾಳಿ, ಕೆಲವೇ ಕ್ಷಣಗಳಲ್ಲಿ ಮನೆಯೊಡತಿಯ ಮನಗೆಲ್ಲುತ್ತಾನೆ.

ಆಕೆ ಆತನೊಂದಿಗೆ ತುಸು ಹೆಚ್ಚೇ ಸಲುಗೆ ತೋರುತ್ತಾಳೆ. ಆಕೆ ‘ಏನು ತಗೋತೀರಾ?’ ಎಂದರೆ, ಆತ ಆಕೆಯನ್ನು ಆಪಾದಮಸ್ತಕ ನೋಡುತ್ತ ‘ಹಾಲು’ ಎನ್ನುತ್ತಾನೆ. ಅದಕ್ಕೆ ಆಕೆ ‘ನೀವೇನು ಕೃಷ್ಣನ ವಂಶಸ್ಥರಾ?’ ಎಂದು ನುಲಿಯುತ್ತಾಳೆ. ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ಮೊಬೈಲ್ ನಂಬರ್ ವಿನಿಮಯವಾಗಿ ‘ಗುಪ್ತ ಸಮಾಗಮ’ಕ್ಕೆ ಕಾಲ ನಿಗದಿಯಾಗುತ್ತದೆ.

ಇದು ‘ನಾವು ನಮ್ಮ ಹೆಂಡತಿಯರು’ ಚಿತ್ರದಲ್ಲಿ ಕೆಲವೇ ನಿಮಿಷಗಳಲ್ಲಿ ನಡೆಯುವ ಒಂದು ಸಣ್ಣ ಸನ್ನಿವೇಶ. ಕೆ.ವಿ.ಅಕ್ಷರ ಅವರ ‘ಸಂಸಾರದಲ್ಲಿ ಪದನಿಸ’ ನಾಟಕವನ್ನು ಸೀತಾರಾಮ ಕಾರಂತ ಸಿನಿಮಾ ಮಾಡಿದ್ದಾರೆ.

ನಾಟಕದ ಸಂಪೂರ್ಣ ರಚನೆಯನ್ನೇ ಹೊಂದಿದ್ದರೂ, ಚಿತ್ರದಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಸಾಫ್ಟ್‌ವೇರ್ ಕ್ಷೇತ್ರದಲ್ಲಾದ ಅಲ್ಲೋಲಕಲ್ಲೋಲ, ಕೊಳ್ಳುಬಾಕ ಸಂಸ್ಕೃತಿ, ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ವೇಗದಲ್ಲಿ ಪತ್ನಿಯರನ್ನೇ ವಿನಿಮಯ ಮಾಡಿಕೊಳ್ಳುವ ವಿಕೃತಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ನಿರ್ದೇಶಕರು ಪ್ರಸ್ತಾಪಿಸಿದ್ದಾರೆ.

ಚಿತ್ರದಲ್ಲಿ ಸಾಫ್ಟ್‌ವೇರ್ ಉದ್ಯೋಗಿ, ರಿಯಲ್ ಎಸ್ಟೇಟ್ ದಲ್ಲಾಳಿ, ಕಳ್ಳ ಹಾಗೂ ಪೊಲೀಸನ ಕುಟುಂಬಗಳು ಒಟ್ಟು ಪಾತ್ರಗಳು. ಸಾಫ್ಟ್‌ವೇರ್ ಉದ್ಯೋಗಿ ಹಾಗೂ ರಿಯಲ್ ಎಸ್ಟೇಟ್ ದಲ್ಲಾಳಿ ಕುಟುಂಬಗಳು ತಮಗೇ ಅರಿವಿಲ್ಲದೆ ಪತಿ-ಪತ್ನಿಯರನ್ನು ವಿನಿಮಯ ಮಾಡಿಕೊಂಡಿರುತ್ತವೆ.

ಈ ವಿನಿಮಯ ಪ್ರಕ್ರಿಯೆ ನಿರ್ದೇಶಕರ ಗಡಿಬಿಡಿಯಿಂದಾಗಿ ಕೆಲವೇ ನಿಮಿಷಗಳಲ್ಲಿ ನಡೆದುಬಿಡುತ್ತದೆ. ಹೀಗಾಗಿ ಚಿತ್ರದ ಮೊದಲ ಅರ್ಧ ನಿರ್ದೇಶಕರ ಉದ್ದೇಶ ಅಸ್ಪಷ್ಟವಾಗಿದೆ. ದ್ವಿತಿಯಾರ್ಧದಲ್ಲಿ ಒಂದೇ ಮನೆಯಲ್ಲಿ ಎಲ್ಲರೂ ಸೇರಿಕೊಂಡು ಆಗುವ ಗಲಿಬಿಲಿ ಚಿತ್ರಕ್ಕೆ ತುಸು ಚೇತರಿಕೆ ನೀಡುತ್ತದೆ.

ಚಿತ್ರದ ಬಹುತೇಕ ದೃಶ್ಯಗಳು ನಾಟಕದಂತಿವೆ. ಮೊದಲ ಬಾರಿಗೆ ನಟಿಸಿರುವ ಪ್ರಕಾಶ್ (ರಿಯಲ್ ಎಸ್ಟೇಟ್ ದಲ್ಲಾಳಿ) ಅಭಿನಯ ಗಮನ ಸೆಳೆಯುತ್ತದೆ. ಕಳ್ಳನ ಹಾಸ್ಯಪಾತ್ರದಲ್ಲಿ ಮುನ್ನ ಅವರ ನಟನೆ ಚಿತ್ರಕ್ಕೊಂದಿಷ್ಟು ಜೀವಕಳೆ ನೀಡಿದೆ. ಮನಃಸಾಕ್ಷಿಯಂತಿರುವ ಈ ಪಾತ್ರ ಚಿತ್ರದ ಹೈಲೈಟ್ ಕೂಡ.

ಕಳ್ಳನ ಹೆಂಡತಿ ಹೇಳುವ ‘ತೂತು ಸಿಕ್ಕರೆ ಸಾಕು ನಾಲಿಗೆ ತೂರಿಸ್ತೀಯಾ’ ಎಂಬ ಕೀಳು ಅಭಿರುಚಿಯ ಸಂಭಾಷಣೆಯನ್ನು ಶಶಿಧರ ಭಟ್ ಬರೆದಿದ್ದಾರೆ. ಅಲ್ಲಲ್ಲಿ ಪಂಚ್ ಇದ್ದರೂ ಸಂಭಾಷಣೆಯಲ್ಲಿ ಅತಿರೇಕವಿದೆ. ಪಶ್ಚಿಮಘಟ್ಟವನ್ನು ಉತ್ತಮವಾಗಿ ಸೆರೆಹಿಡಿದಿರುವ ಆರ್.ಮಂಜುನಾಥ್ ಛಾಯಾಗ್ರಹಣ ಚೇತೋಹಾರಿಯಾಗಿದೆ. ಎಸ್.ಜೆ.ಪ್ರಸನ್ನ ಸಂಗೀತದಲ್ಲಿ ಒಂದು ಹಾಡು ಕೇಳುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT