ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅನಾಹುತ: ಸುರಕ್ಷತೆ ಅನುಮಾನ

Last Updated 28 ಜನವರಿ 2013, 19:59 IST
ಅಕ್ಷರ ಗಾತ್ರ

ಸಾಂಟಾ ಮರಿಯಾ/ಬ್ರೆಜಿಲ್(ಎಎಫ್‌ಪಿ): ಇಲ್ಲಿನ ನೈಟ್‌ಕ್ಲಬ್‌ನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತರಾದವರಿಗೆ ಬ್ರೆಜಿಲ್ ಜನತೆ ಸೋಮವಾರ ಸಂತಾಪ ಸೂಚಿಸಿದರು. ಘಟನೆಯ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆಗೆ ಅಧ್ಯಕ್ಷೆ ಡಿಲ್ಮಾ ರೌಸೆಫ್ ಘೋಷಿಸಿದ್ದಾರೆ.

ಭಾನುವಾರ ನಡೆದ ಘಟನೆಯಲ್ಲಿ 230 ವಿದ್ಯಾರ್ಥಿಗಳು ಮೃತಪಟ್ಟ್ದ್ದಿದು, 100 ಜನ ಗಂಭೀರವಾಗಿ ಗಾಯಗೊಂಡ್ದ್ದಿದರು.
ವಿಶ್ವವಿದ್ಯಾಲಯದ ಔತಣಕೂಟವನ್ನು ನೈಟ್‌ಕ್ಲಬ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಬಹುತೇಕ ವಿಜ್ಞಾನ ವಿಷಯದ ವಿದ್ಯಾರ್ಥಿಗಳೇ ಭಾಗವಹಿಸಿದ್ದರು ಎಂದು ಘಟನೆಯಲ್ಲಿ ಬದುಕುಳಿದವರು ತಿಳಿಸಿದ್ದಾರೆ.

ಬೆಂಕಿ ಹತ್ತಿಕೊಂಡು ಭಾರಿ ಪ್ರಮಾಣದಲ್ಲಿ ಹೊಗೆ ಜಮಾಯಿಸಿದ್ದರಿಂದ ಹೊರಗೆ ಹೋಗುವ ದಾರಿ ಕಾಣದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಯುರೋಪ್-ಲ್ಯಾಟಿನ್ ಅಮೆರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚಿಲಿಗೆ ತೆರಳಿದ್ದ ಅಧ್ಯಕ್ಷರು ಘಟನೆಯ ಸುದ್ದಿ ತಿಳಿಯುತ್ತಲೇ ಪ್ರವಾಸ ಮೊಟಕುಗೊಳಿಸಿ ತಾಯ್ನಾಡಿಗೆ ಹಿಂತಿರುಗಿದ್ದಾರೆ.

ದುರಂತದ ಹಿನ್ನೆಲೆಯಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ 500 ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಘಟನೆಯು 2016ರ ಒಲಿಂಪಿಕ್ ಕ್ರೀಡಾಕೂಟದ ಸಿದ್ಧತೆಯಲ್ಲಿ ತೊಡಗಿರುವ ಬ್ರೆಜಿಲ್‌ನಲ್ಲಿನ ಸುರಕ್ಷತೆ ಕುರಿತಂತೆ ಹಲವು ಪ್ರಶ್ನೆಗಳನ್ನು ಎತ್ತಿದೆ. 

ಬೆಂಕಿ ಕಾಣಿಸಿಕೊಂಡ ಬಳಿಕ ದಟ್ಟ ಹೊಗೆ ಆವರಿಸಿಕೊಂಡಿತ್ತು ಎಂದು ಘಟನೆಯಲ್ಲಿ ಬದುಕುಳಿದಿರುವ ನೈಟ್‌ಕ್ಲಬ್ ಬ್ಯಾಂಡ್ ತಂಡದ ಸದಸ್ಯೆ ಮಿಶೆಲ್ ಪೆರೆರಾ ತಿಳಿಸಿದ್ದಾರೆ.

`ಪ್ರತಿಯೊಬ್ಬರು ಪರಸ್ಪರ ತಳ್ಳಾಟದಲ್ಲಿ ತೊಡಗಿ, ನೂಕು ನುಗ್ಗಲು ಉಂಟಾಗಿ ಗೊಂದಲ ನಿರ್ಮಾಣವಾಗಿತ್ತು' ಎಂದು ಘಟನೆಯಲ್ಲಿ ಬದುಕುಳಿದ ಟಾಯೆನ್ನ್ ವೆಂಡೂರುಸ್ಕೊಲೊ ಹೇಳಿದ್ದಾರೆ.

`ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕೆಲ ಕ್ಷಣಗಳ ಬಳಿಕ ಸ್ಫೋಟವಾಯಿತು. ಇದರಿಂದ ವೇದಿಕೆ ಸನಿಹದಲ್ಲಿದ್ದವರು ಹೊರಬರಲು ಆಗಲಿಲ್ಲ' ಎಂದು ತಿಳಿಸಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಎಲ್ಲರೂ ಏಕಾಏಕಿ ಹೊರಗಡೆ ಓಡಿ ಹೋಗಲು ಪ್ರಯತ್ನಿಸಿದ್ದರಿಂದ ಹಲವರು ಒಳಗಡೆ ಸಿಕ್ಕಿಕೊಂಡರು. ಕೆಲವರು ಹೊಗೆಯಿಂದಾಗಿ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಾಂಟಾ ಮರಿಯಾ ಅಗ್ನಿಶಾಮಕ ದಳದ ಮುಖ್ಯಸ್ಥ ಗೈಡೊ ಡಿ ಮೆಲೊ ತಿಳಿಸಿದ್ದಾರೆ.

ನೈಟ್‌ಕ್ಲಬ್‌ನಲ್ಲಿ ಮದ್ಯ ಕುಡಿದು ಹಣ ಪಾವತಿಸದೇ ಜನ ಹೋಗುವುದನ್ನು ತಡೆಗಟ್ಟುವುದಕ್ಕಾಗಿ ತುರ್ತು ಹೊರಹೋಗುವ ಬಾಗಿಲಿಗೆ ಬೀಗ ಜಡಿಯಲಾಗಿತ್ತು ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.

`ಅದೊಂದು ಭಯಾನಕ ಘಟನೆಯಾಗಿದ್ದು ತುರ್ತು ಹೊರಹೋಗುವ ಬಾಗಿಲು ತೆರೆಯಲಿಲ್ಲ. ಇದರಿಂದಾಗಿ ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡೆ. ನಂತರ ನನ್ನ ಸಮೀಪದಲ್ಲಿಯೇ ಇದ್ದ ಯುವತಿಯೊಬ್ಬಳು ಸಾವನ್ನಪ್ಪಿದಳು' ಎಂದು ದಂತ ವೈದ್ಯ ಮ್ಯಾಥ್ಯೂಸ್  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT