ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿವೇಶ್ ಆರೋಪ ಅಲ್ಲಗಳೆದ ಅಣ್ಣಾತಂಡ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಅಣ್ಣಾ ಚಳವಳಿ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ದೇಣಿಗೆ ಯನ್ನು ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಅವರು ನುಂಗಿಹಾಕಿದ್ದಾರೆ ಎನ್ನುವ ಸಾಮಾಜಿಕ ಕಾರ್ಯಕರ್ತ, ಚಿಂತಕ ಸ್ವಾಮಿ ಅಗ್ನಿವೇಶ್ ಅವರ ಆರೋಪವನ್ನು ಅಣ್ಣಾ ತಂಡ ಸ್ಪಷ್ಟವಾಗಿ ಅಲ್ಲಗಳೆದಿದೆ.

ಸ್ವಾಮಿ ಅಗ್ನಿವೇಶ್ ಅವರು ಆವೇಶ ಮತ್ತು ಸಿಟ್ಟಿನಿಂದ ಇಂತಹ ಆರೋಪ ಮಾಡಿದ್ದಾರೆ ಎಂದು ತಂಡದವರು ಪ್ರತ್ಯಾರೋಪ ಮಾಡಿದ್ದಾರೆ.

ದೇಣಿಗೆ ಹಣ ಸಂಗ್ರಹಿಸಿರುವ ಬಗ್ಗೆ ಪೂರ್ಣ ಲೆಕ್ಕಪತ್ರ ಹಾಗೂ ವಿವರಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಷನ್ (ಪಿಸಿಆರ್‌ಎಫ್) ವೆಬ್‌ಸೈಟ್‌ನಲ್ಲಿ ಪ್ರಕ ಟಿಸಲಾಗುವುದು ಎಂದೂ ತಿಳಿಸಿದ್ದಾರೆ.

`ನಮ್ಮ ಲೆಕ್ಕಪತ್ರಗಳು ಈಗಾಗಲೇ ವೆಬ್‌ಸೈಟ್‌ನಲ್ಲಿ ಇವೆ. ಕಳೆದ ಆರು ತಿಂಗಳಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾವು ವಿಶೇಷ ಲೆಕ್ಕಪರಿಶೋಧನೆ ನಡೆಸಿದ್ದೇವೆ. ಈ ವಿವರವನ್ನು ಈ ತಿಂಗಳ ಅಂತ್ಯದ ವೇಳೆಗೆ ಪ್ರಕಟಿಸಲಾಗುವುದು ಎಂದು ಕೇಜ್ರಿವಾಲ್ ನಿಕಟವರ್ತಿ ಮನೀಶ್ ಸಿಸೋಡಿಯಾ ತಿಳಿಸಿದರು.

ಸ್ವಾಮಿ ಅಗ್ನಿವೇಶ್ ಕುರಿತು ಮಾತನಾಡಿದ ಅವರು, `ನಾವು ಅವರ ಬಗ್ಗೆ ಯಾವುದೇ ದ್ವೇಷ ಮನೋಭಾವನೆ ಹೊಂದಿಲ್ಲ. ಅವರು (ಅಗ್ನಿವೇಶ್) ಸಿಟ್ಟಿನಿಂದ ಆರೋಪ ಮಾಡಿರಬಹುದು. ಹಿರಿಯರಾದ ಅವರ ಸಲಹೆ ಸ್ವೀಕರಿಸುತ್ತೇವೆ ಹಾಗೂ ಅವರೊಬ್ಬ ಒಳ್ಳೆಯ ವ್ಯಕ್ತಿ. ಅವರನ್ನು ಗೌರವಿಸುತ್ತೇವೆ~ ಎಂದರು.

ಅರವಿಂದ ಕೇಜ್ರಿವಾಲ್ ಅವರು ದೇಣಿಗೆಯಿಂದ ಸಂಗ್ರಹವಾಗಿದ್ದ ಸುಮಾರು ರೂ 80 ಲಕ್ಷ ನುಂಗಿ ಹಾಕಿದ್ದಾರೆ ಎಂದು ಅಗ್ನಿವೇಶ್ ಆರೋಪ ಮಾಡಿದ್ದರು.

ಹಣ ಠೇವಣಿ ಮಾಡಿರುವ ಟ್ರಸ್ಟ್‌ನಲ್ಲಿ ಅಣ್ಣಾ ಸೇರಿದಂತೆ ತಂಡದ ಪ್ರಮುಖ ಸದಸ್ಯರು ಸದಸ್ಯತ್ವ ಪಡೆದಿಲ್ಲ ಎಂದೂ ಆರೋಪ ಮಾಡಿದ್ದರು.

ಪಿಸಿಆರ್‌ಎಫ್ ಟ್ರಸ್ಟ್‌ನ ಹೆಸರಿನಲ್ಲಿಯೇ ದೇಣಿಗೆ ಸಂಗ್ರಹಿಸಲಾಗಿದೆ. ಈ ಕುರಿತು ಈಚೆಗೆ ರಾಳೆಗಣಸಿದ್ಧಿಯಲ್ಲಿ ನಡೆದ ಉನ್ನತ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದೂ ಸಿಸೋಡಿಯಾ ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT