ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯ ಶಾರ್ಧ

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಶಾಲೆಯ ಮೂರನೆ ಪೀರಿಯೆಡ್ ಮುಗಿಯುತ್ತಲೆ ವಿಶುನ ದೃಷ್ಟಿ ಶಾಲೆಯ ಗೇಟಿನ ಕಡೆಗೆ ಸುಳಿಯಿತು. ಈಗ ದೊಡ್ಡಪ್ಪನ ಮನೆಗೆ ಶಾರ್ಧಕ್ಕೆ ಹೋಗಲಿಕ್ಕೆ ಇದೆ ಎಂದು ಅವನು ಖುಷಿಯಲ್ಲಿದ್ದ. ಅವನ ಅಕ್ಕ ಸುಮತಿ ತಂಗಿಯರ ಜೊತೆಗೆ ಸರಿಯಾಗಿ ಹನ್ನೊಂದು ಮುಕ್ಕಾಲಿಗೆ ಬರುತ್ತೇನೆಂದು ಹೇಳಿರುವುದರಿಂದ ಅವನು ಪದೇ ಪದೇ ಗೇಟಿನತ್ತ ನೋಡುತ್ತಿದ್ದ.

ಆದರೆ ಮೂರನೆ ಪೀರಿಯೆಡ್ ಮುಗಿದು ಇಂಗ್ಲಿಷ್ ಮೇಷ್ಟ್ರು ಹೊರಗೆ ನಿಂತಿದ್ದರೂ ಡೇನಿಸ್ ಮೇಷ್ಟ್ರು ಲೆಕ್ಕದ ಸಮಸ್ಯೆಗಳನ್ನು ಕರಿಹಲಗೆಯ ಮೇಲೆ ಬಿಡಿಸುತ್ತಾ, ಇನ್ನೂ ಉತ್ತರ ಸಿಗದಿರುವಾಗ ಮಕ್ಕಳೆಲ್ಲ ಸೇರಿ ಮೇಷ್ಟ್ರಿಗೆ ಕಿವಿ ಕೇಳಿಸಲಿಲ್ಲವೆನ್ನುವಂತೆ, ‘ಸಾರ್, ಬೆಲ್ ಆಗಿದೆ’ ಅಂದರೆ, ಅದಕ್ಕವರು- ‘ಹೌದಾ’ ಅನ್ನುತ್ತಾ ಕರಿಹಲಗೆಯ ಮೇಲೆ ಬಿಡಿಸಲಾಗದ ಸಮಸ್ಯೆಯನ್ನು ಬಟ್ಟೆಯ ತುಂಡಿನಿಂದ ಒರೆಸಿ ಹೊರಗೆ ಬರುವಾಗ ವಿಶು ಕೂಡ ಅವರ ಜೊತೆಗೆ ಹೊರಗೆ ಬಂದ.
 
ಅಲ್ಲಿ ನಿಂತಿದ್ದ ಇಂಗ್ಲಿಷ್ ಮೇಷ್ಟ್ರು ಅವನನ್ನು, ‘ಎಲ್ಲಿಗೋ’ ಅಂದ್ರೆ, ‘ಸಾರ್, ಇವತ್ತು ಅಜ್ಜಿಯ ಶಾರ್ಧ’ ಅಂದಾಗ ಅವರು ಉದ್ದನೆಯ ತುಟಿಗಳನ್ನು ಎರಡು ಕಿವಿಗಳವರೆಗೂ ಎಳೆದಂತೆ ನಕ್ಕರು. ಮೇಷ್ಟ್ರು ಗ್ರೀನ್ ಸಿಗ್ನಲ್ ನೀಡುತ್ತಲೇ ಅಂಗಳಕ್ಕೆ ಹಾರಿ ಗೇಟಿನ ಬಳಿ ನಿಂತರೆ ಸುಮತಿ ಮತ್ತು ಅವನ ಇಬ್ಬರು ತಂಗಿಯಂದಿರು ಅವನಿಗಾಗಿ ಕಾಯುತ್ತಾ ನಿಂತಿದ್ದರು. ಆಗ ಮಳೆಗೆ ಹೊಟ್ಟೆಕಿಚ್ಚಾಗಿ ಅವರನ್ನೆಲ್ಲಾ ಒದ್ದೆ ಮಾಡುವಂತೆ ಸುರಿಯಿತು.

ಆಷಾಢದ ಅಮವಾಸ್ಯೆಯ ಮರುದಿನ ಭಾಗ್ಯಕ್ಕನ ಶಾರ್ಧ ಹಿರಿಯ ಮಗ ವಾಸುದೇವನ ಮನೆಯಲ್ಲಿ ನಡೆಯುವುದಕ್ಕೆ ವಾಸುದೇವನ ತಮ್ಮ ನಾರಾಯಣ ಅಂಗಡಿಯಿಂದ ಉಪ್ಪು, ಮೆಣಸುಗಳೆಂದು ದಿನಸಿ ಸಾಮಾನುಗಳನ್ನೆಲ್ಲ ಕಟ್ಟಿ ಪುಡಾಯಿಯಲ್ಲಿ ತುಂಬಿ ರಾಮನ ತಲೆಗೇರಿಸಿದ್ದೆ; ಅವನು ಮನೆಯ ಅಂಗಳದಲ್ಲಿ ತಂದಿಟ್ಟ.

ಆಗ ಮನೆಯ ಬಲೆ, ಕಸಗಳನ್ನು ಗುಡಿಸಿ ಅಂಗಳಕ್ಕೊಂದಿಷ್ಟು ಸೆಗಣಿ ಸಾರಿಸಿದ ಕಮಲಮ್ಮ ನಡು ಸರ್ತ ಮಾಡಿ ಮಗಳು ನಳಿನಿಗೆ, ‘ಇಕಾ ನಳಿನಿ, ಸಾಮಾನು ಬಂತು. ಅದನ್ನು ಒಪ್ಪ ಮಾಡಿ ಒಂದೊಂದನ್ನೆ ಅಡುಗೆ ಕೋಣೆಯಲ್ಲಿಟ್ಟು ಬಿಡು’ ಅಂದಿದ್ದೇ, ಸೊಸೆ ಯಮುನಾ ಮಾತಿಲ್ಲದೆ, ಅಂಗಳದಲ್ಲಿದ್ದ ಭಾರವಾದ ಪುಡಾಯಿಯನ್ನು ಎತ್ತಿ ಜಗುಲಿಯಲ್ಲಿರಿಸಿ ಒಂದೊಂದೇ ಸಾಮಾನನ್ನು ಹೊರಗೆ ತೆಗೆದು ಕಟ್ಟು ಬಿಡಿಸಿ,
 
ತಡ್ಪೆಯಲ್ಲಿ ಹಾಕಿ ಕಲ್ಲುಕಸ ಹೆಕ್ಕುವಾಗ ಮುಖ ದುಮ್ಮಿಖಿಸಿಕೊಂಡು ಬಂದ ನಳಿನಿ ಲಂಗವನ್ನು ಟಪ್ಪನೆ ಜಾಡಿಸಿ ಕುಳಿತಾಗ ತಡ್ಪೆಯಲ್ಲಿದ್ದ ಕೊತ್ತಂಬರಿಯ ಬೀಜದ ತುಣುಕೊಂದು ಯಮುನೆಯ ಮೂಗಿನೊಳಗೆ ತೂರಿ ಅವಳು ಸೆರಗು ಮೂಗಿಗೆ ಹಿಡಿಯುವುದಕ್ಕೂ ಪುರುಸೊತ್ತಿಲ್ಲದಂತೆ ಬೆನ್ನು ಬೆನ್ನಿಗೆ ಆಕ್ಶೀ ತೆಗೆದದ್ದೇ, ಕಮಲಮ್ಮ ಗಾಬರಿಗೆ ಬಿದ್ದರು. ಸೊಸೆಯ ಸೀನಿಗೆ ಬೆದರಿದ ಕಮಲಮ್ಮ ಆತಂಕದಿಂದ ಆಕಾಶದತ್ತ ನೋಡಿದವರೆ ದಟ್ಟೈಸಿದ ಮೋಡಗಳನ್ನು ಕಂಡು ಚಿಂತಿತರಾದರು.
 
ಧರ್ಬೆಯನ್ನು ತಂದು ಮಾಡಿನ ಜಂತಿಗೆ ಸಿಕ್ಕಿಸಿದ ವಾಸುದೇವ ಮಡದಿಯನ್ನು ನೋಡುತ್ತಾ, ‘ಸೆಗಣಿ ಸಾರಿಸಿದ ಗಳಿಗೆ ಒಳ್ಳೆಯದುಂಟು. ಆಟಿಯ ಅಮವಾಸ್ಯೆಯೆಂದರೆ ಸುಮ್ಮನೆಯಾ? ರಾತ್ರಿಯಲ್ಲಿ ಮಳೆ ಸುರಿದರೂ ತೋಡಿನಲ್ಲಿ ಬೊಳ್ಳ ಬರುವುದು ಗ್ಯಾರಂಟಿ’ ಅಂತ ತಮಾಷೆಯಾಡಿದ. ಕಮಲಮ್ಮ ಬಾಲ್ದಿಯ ನೀರಲ್ಲಿ ಕೈಕಾಲು ಮುಖ ತೊಳೆದು ಜಗುಲಿಯ ಮೇಲೆ ಕುಳಿತರು.

‘ಇದೆಂತ, ಚಿಕ್ಕಪ್ಪನಿಗೆ ಬುದ್ಧಿಯಿಲ್ವಾ? ಸಾಮಾನು ಕೊಡುವುದು ಒಂದು ಶಾರ್ಧಕ್ಕೆ... ಇಡೀ ಸಂತಾನ ಪಿಂಡ ಹಾಕುವ ನೆಪದಲ್ಲಿ ಇಲ್ಲಿ ಬಂದು ಊಟ ಮಾಡಿ ಹೋಗ್ತದೆ. ಗೋಧಿಕಡಿ ಕಳಿಸಿದ್ದೆಂತಕ್ಕೆ, ಪಾಯಸಕ್ಕಾ? ಸಾಬಕ್ಕಿ ಕೊಟ್ರೆ ಏನಾಗ್ತಿತ್ತು, ಅವರ ಗಂಟು ಹೋಗ್ತದಾ?’- ನಳಿನಿ ಗೋಧಿ ಕಡಿಯ ಕಸವನ್ನು ಹೆಕ್ಕುತ್ತಾ ದುಡುದುಡು ಮಾತನಾಡುವಾಗ ಸುಸ್ತಾಗಿ ಕುಳಿತಿದ್ದ ಕಮಲಮ್ಮ ನಿಡುಸುಯ್ದು, ‘ನೀನು ಬಾಯ್ಮುಚ್ಚು. ನಿನ್ನ ಅಜ್ಜಿ ಭಾಗ್ಯಕ್ಕಂಗೆ ಗೋಧಿ ಪಾಯಸಂದ್ರೆ ಇಷ್ಟ.
 
ಅದಕ್ಕೆ ಅವನು ಕಳ್ಸಿದ್ದಾನೆ. ಪಾಪ, ಅವನೂ ಎಂಟು ಮಕ್ಕಳಿರುವವನು. ಸಾಮಾನು ಧರ್ಮಾರ್ಥ ತಂದು ಸುರಿತಾನೆ. ಅವನಿಗಾದ್ರೂ ಆ ಸಣ್ಣ ಅಂಗಡಿಯಿಂದ ಎಂತ ಸಿಗ್ತದೆ? ಅಥವಾ ಅವನಿಗೆ ದುಡ್ಡೇನು ಮರದಿಂದ ಉದುರ್ತದಾ ಹೇಗೆ?’ ಅಂದ್ರೆ ವಾಸುದೇವನಿಗದು ಸರಿ ಕಾಣಲಿಲ್ಲ. ಅವರು ಸೊಂಟಕ್ಕೆ ಸುತ್ತಿದ್ದ ಬೈರಾಸನ್ನು ತೊಡೆಯ ಸಂದಿಗೆ ತೂರಿಸಿಕೊಂಡು ಗೋಡೆಗೆ ಒರಗಿ, ವಿಳ್ಯದೆಲೆಯ ತಾಟು ತೆಗೆದು ಒಂದಷ್ಟು ಸುಣ್ಣವನ್ನು ಬೆರಳ ತುದಿಗೆ ಒರೆಸಿ, ‘ಊರಲ್ಲಿರುವವನು ಅವನೊಬ್ಬನೆ.

ಒಂದೇ ಊರಲ್ಲಿರುವಾಗ ಎಂತದಕ್ಕೆ ಎರಡೆರಡು ಕಡೆ ಶಾರ್ಧ ಹಾಕೋದು? ಊರಿನವರಿಗೂ ಯಾರ ಮನೆಗೆ ಹೋಗುವುದೂಂತ ಗೊಂದಲ. ಅದಕ್ಕೆಂತ್ಲೆ ಅವನು ಅಗ್ರಜ, ತಾಯಿಯ ಶಾರ್ಧ ನಿನ್ನ ಮನೆಯಲ್ಲಿ ತಂದೆಯದು ನನ್ನ ಮನೆಯಲ್ಲಿ, ಖರ್ಚು ನಾನೇ ಹಾಕ್ತೇನೆ ಅಂದಿದ್ದಲ್ವಾ? ನಳಿನಿ ಹೇಳುವುದರಲ್ಲಿ ತಪ್ಪೇನಿದೆ? ಅವನ ಇಡೀ ಸಂಸಾರವೇ ಕಾಗೆಯ ಗುಂಪಿನ ಹಾಗೆ ಊಟಕ್ಕೆ ಬರುವುದಿಲ್ವಾ?’ ಅಂತ ವಿಳ್ಯದೆಲೆಯನ್ನು ಸಂಪನ್ನಗೊಳಿಸಿ ಬಾಯಿಯನ್ನು ಅಗಲಕ್ಕೆ ತೆರೆದು ತೂರಿಸಿಕೊಂಡು ಹಲ್ಲುಗಳನ್ನು ಮಸೆಯತೊಡಗಿದರು.

‘ಹೌದಪ್ಪ, ಅವನೇನೋ ನಮ್ಮನೆಯಲ್ಲಿ ನಡೆಯೊ ಶಾರ್ಧಕ್ಕೆ ಸಾಮಾನು ಕಳಿಸಿಕೊಡ್ತಾನೆ. ಹಾಗಂತ ಇನ್ನೊಂದು ಶಾರ್ಧ ಅವನ ಮನೆಯಲ್ಲಿ ನಡೆಯುವುದಲ್ವಾ, ಅವನ ಮನೆಗೆ ನೀವೇನು ಕೊಡ್ತೀರಾ?’ ಕುಳಿತಲ್ಲಿಂದಲೇ ಕಿಟಕಿಯತ್ತ ಹೊರಳಿ ಕೆಂಪು ರಸವನ್ನು ತುಳಕ್ಕನೆ ತುಪ್ಪಿ, ‘ನಾನ್ಯಾಕೆ ಕೊಡ್ಬೇಕು? ಅವನು ನನಗಿಂತ ಕಿರಿಯವನು. ಅಲ್ದೆ ಅವನ ಹಾಗೆ ನಂಗೇನು ಅಂಗಡಿಯಾ? ಆದಾಯನಾ?’ ಅಂತ ತಮ್ಮ ಮನಸಿನಲ್ಲಿದ್ದದ್ದನ್ನು ಉಗುಳಿಕೊಂಡರು.

ಮಾತಿನ ಕಿಚ್ಚು ಹಚ್ಚಿದ ನಳಿನಿ, ‘ನಂಗೆ ಸುಸ್ತಾಯ್ತಪ್ಪಾ. ಅತ್ತಿಗೆ ನೀವೇ ಮಾಡ್ಕೊಳ್ಳಿ’ ಅಂತ ಎದ್ದು ಯಮುನಾಳಿಗೆ ಜವಾಬ್ದಾರಿ ಕೊಟ್ಟು ಹೊರಟಾಗ ಕಮಲಮ್ಮ ಸೊಸೆಯ ಕೆಲಸಕ್ಕೆ ಕೈ ಹಚ್ಚಿದರು. ಏನಿಲ್ಲವೆಂದರೂ ಶಾರ್ಧಕ್ಕೆ ಊರಿನ ಹತ್ತು ಹದಿನೈದು ಮನೆ, ನಾರಾಯಣನ ಸಂಸಾರವೆಂದು ನೂರು ನೂರೈವತ್ತು ಜನರ ಅಟ್ಟಣೆಯಂತು ಆಗಲೇಬೇಕು. ನಾರಾಯಣನ ಹೆಂಡತಿ ರತ್ನೆ, ಬೆಳಗ್ಗೆ ಬಂದು ಅಡುಗೆ ಕೋಣೆಯನ್ನು ಒಪ್ಪವಾಗಿ ಮಾಡಿಟ್ಟು ಅಡುಗೆ ಭಟ್ಟರಾದ ಶ್ರೀನಿವಾಸಣ್ಣನಿಗೆ ಅದನ್ನು ಬಿಟ್ಟುಕೊಟ್ಟರೆ ಬಂದವರಿಗೆಲ್ಲಾ ಕಾಫಿ, ತಿಂಡಿಯ ವ್ಯವಸ್ಥೆಯಿಂದ ಹಿಡಿದು ಊಟಕ್ಕೆ ಎಲೆ ಹಾಕುವ ಮುನ್ನ ನೆಲವನ್ನು ಗುಡಿಸುವವರೆಗೆ ಲವಲವಿಕೆಯಿಂದ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವ ಹೆಂಗಸು.

ಸೆಗಣಿಸಾರಿಸಿದ ಪಡಸಾಲೆಯಲ್ಲಿ ರಂಗೋಲಿ ಬರೆದು ಪಿಂಡ ಪ್ರದಾನದ ಕೆಲಸಗಳನ್ನು ಅಣಿಗೊಳಿಸಿ ಪುರೋಹಿತರು ಕುಳಿತರೆ ಅಡುಗೆ ಮನೆಯಲ್ಲಾಗಲಿ; ಹೊರಗೆ ಬರುವ ಅತಿಥಿಗಳಾದಿಯಾಗಿ ಏನು, ಎತ್ತವೆನ್ನುವುದು ವಾಸುದೇವನಿಗಾಗಲಿ, ನಾರಾಯಣನಿಗಾಗಲಿ ತಿಳಿಯಲೊಲ್ಲದು. ತಿಲೋದಕವನ್ನು ಊರ್ಧ್ವಮುಖಿಯಾಗಿ ಹಾರಿಸಿದ ಬಳಿಕ ಮತ್ತೆ ಪಡಸಾಲೆ ಕೂಡ ರತ್ನೆಯ ಸುರ್ಪದಿಗೆ.

ಮಡಿಯ ಪಾತ್ರೆಗಳನ್ನು ತೊಳೆಯುವಲ್ಲಿಂದ ಹಿಡಿದು ಎಲ್ಲ ನೈರ್ಮಲ್ಯಗಳನ್ನು ಶುಚಿಗೊಳಿಸಿ ಬರುವಷ್ಟರಲ್ಲಿ, ‘ಊಟಕ್ಕೆ ರೆಡಿಯಾಯ್ತು. ಎಲೆ ಹಾಕಿಬಿಡಿ’ ಅಂತ ಶ್ರೀನಿವಾಸಣ್ಣ ಅಡುಗೆ ಮನೆಯ ಬಾಗಿಲಿಗೆ ಬಂದು ಸೇರಿದ ತಲೆಗಳನ್ನು ಲೆಕ್ಕ ಹಾಕುವಷ್ಟರಲ್ಲಿ ಅಸಿಸ್ಟೆಂಟ್ ಮುರಳಿಯನ್ನು ಕರೆದು, ‘ಅನ್ನ ಕಡಿಮೆಯಾಗ್ತದ ಏನೋ ಮಾರಾಯಾ. ಇನ್ನೊಂದು ದೊಡ್ಡ ಚರಿಗೆಯಲ್ಲಿ ನೀರು ಇಟ್ಟುಬಿಡು’ ಎಂದು ಹೇಳಿ ಅಕ್ಕಿಯನ್ನು ದೊಡ್ಡ ಪಾತ್ರೆಗೆ ಹಾಕಿ ನೀರು ಸುರಿದು, ‘ನೀರು ಕುದಿ ಬಂದ್ರೆ ಹಾಕಿ ಬಿಡು’ ಅಂತಂದು ಉಪ್ಪು, ಉಪ್ಪಿನ ಕಾಯಿ, ಕೊಸಂಬ್ರಿ, ಚಟ್ನಿ, ಮೂಡೆ, ಪಲ್ಯಗಳನ್ನೆಲ್ಲಾ ಬಡಿಸಲು ಅಣಿಗೊಳಿಸಿ ಗೋಗ್ರಸಕ್ಕೆ ಇಡುವಷ್ಟರಲ್ಲಿ ರತ್ನೆ, ‘ಮಕ್ಕಳು ಶಾಲೆಯಿಂದ ಇನ್ನೂ ಬಂದಿಲ್ಲ’ ಅಂತ ಇಣುಕುಹಾಕುವುದಕ್ಕೆ ಶುರು. ಅಷ್ಟೊತ್ತಿಗೆ ಮಳೆ ಆರಂಭವಾಯಿತು.

‘ಮಕ್ಕಳು ಬರುವುದಕ್ಕೆ ಮೇಷ್ಟ್ರು ಬಿಟ್ರು ಮಳೆಗೆಂತ ಹೊಟ್ಟೆಕಿಚ್ಚಪ್ಪಾ?’ ಎಂದು ಮಳೆಗೆ ಬೈದುಕೊಂಡು ಎಲೆಗಳನ್ನೆಲ್ಲಾ ಒರೆಸುವ ಹೊತ್ತಿಗೆ ತನ್ನ ತಾಯಿ ಅಪ್ಪಿಯಕ್ಕನ ನೆನಪಾಗದಿರಲಿಲ್ಲ. ಹೀಗೆ ಜೋರು ಸುರಿಯುವ ಮಳೆಗೆ ಮಗಳಿಗೊಂದು ಬಳ್ಕೆ ಗುಜ್ಜೆಯನ್ನು ತೆಗೆದುಕೊಂಡು ಹೋಗಬೇಕೆಂದುಕೊಂಡು ಕಟ್ಟಿಂಗೇರಿಯಿಂದ ನದಿ ತೀರಕ್ಕೆ ಬಂದ ಅಪ್ಪಿಯಕ್ಕನನ್ನು ಇಮಾಮು ಸಾಹೇಬ್ರು, ‘ಅಕ್ಕೆರೆ, ನದಿಯಲ್ಲಿ ಒಯ್ಲು ಉಂಟಲ್ವಾ? ದೋಣಿ ಬಿಡುವುದಕ್ಕೆ ಆಗ್ತದಾ, ಇಲ್ವಾ?’ ಅಂತ ಅನುಮಾನಿಸುವಾಗ, ‘ಸಾಯಿಬರೆ, ಇವತ್ತು ಮಗಳ ಮನೆಗೆ ಹೋಗ್ಲೇಬೇಕು.

ಗುಜ್ಜೆಯಲ್ಲಿ ಬೇರೆ ಕಣ್ಣು ಬಿದ್ದಿದೆ. ನಾಳೆಗೇಂತ ಹೇಳಿದ್ರೆ ಎಲ್ಲಾ ಹಾಳಾಗ್ತದೆ. ಆ ಮಕ್ಕಳಾದರೂ ತಿನ್ನಲಿ. ಹೇಗಾದ್ರೂ ಮಾಡಿ ನನ್ನನ್ನು ಆಚೆ ಮುಟ್ಟಿಸು ಮಾರಾಯಾ’ ಅಂತ ಗೋಗರೆದಿದ್ದೇ ಇಮಾಮಿಗೆ ಕನಿಕರ ಮೂಡಿ, ‘ಆಯ್ತು ಅಕ್ಕೆರೆ, ನೀವು ಧೈರ್ಯದಿಂದ ಕುಳಿತರೆ ಆಯ್ತು’ ಎಂದು ಅವರ ಕೈಯಲ್ಲಿದ್ದ ದೊಡ್ಡ ಗುಜ್ಜೆಯನ್ನು ತೆಗೆದುಕೊಂಡು ದೋಣಿಯಲ್ಲಿರಿಸಿ ಅವರು ದೋಣಿಯೇರಿದ ಬಳಿಕ ಗೂಟದಿಂದ ತಪ್ಪಿಸಿ ಜಲ್ಲೆಯನ್ನು ನೀರಿನೊಳಗೆ ತೂರಿಸಿದ್ದೇ, ದೋಣಿ ನದಿಯ ಒಯ್ಲಿಗೆ ಅಕಳಂಕ ಪಕಳಂಕವಾಗಿ ಸಮುದ್ರದ ದಾರಿಗೆ ತಿರುಗಿದ್ದೇ ಅಪ್ಪಿಯಕ್ಕ- ‘ಅಯ್ಯಯ್ಯೋ, ಗುಜ್ಜೆಯನ್ನು ಗಟ್ಟಿ ಹಿಡ್ಕೋ ಮಾರಾಯಾ...

ದೋಣಿ ಬೊಳ್ಳದಲ್ಲಿ ಹೋಗ್ತದಾ ಎಂತದಾ?’ ಅಂತ ದೋಣಿಯ ಒಳಗೆ ನಿಲ್ಲಲಾಗದೆ ತಕತಕ ಕುಣಿದದ್ದೆ ಸಾಹೇಬ್ರು ಜಲ್ಲೆಯನ್ನು ದೋಣಿಯ ಮೂತಿಗೆ  ಹಿಡಿದು ಬಲವಾಗಿ ಬದಿಗೆ ಸೆಳೆದದ್ದೇ ಅದು ಕರಿಯದ ಬಾಗಿಲಿನತ್ತ ಮುಖ ಮಾಡಿದಾಗ ಗುಜ್ಜೆ ಮೂರು ಉರುಳು ಉರುಳಿ ರೊಯ್ಯಂತ ಅಪ್ಪಿಯಕ್ಕನ ಕಾಲ ಮೇಲೆ ನಿಂತು ಅದರ ಮುಳ್ಳುಗಳು ಕಾಲಿಗೆ ಚುಚ್ಚುತ್ತಲೆ, ‘ಅಯ್ಯೋ ಶನಿಯೆ, ಎತ್ತಿ ನದಿಗೆ ಹಾಕಿ ಬಿಡ್ತೇನೆ’ ಅಂದಾಗ ಇಮಾಮ ಸಾಹೇಬ್ರು ಆ ಪರಿಸ್ಥಿತಿಯಲ್ಲಿಯೂ ನಕ್ಕು, ‘ಅಕ್ಕೆರೆ, ನೀವು ಅದನ್ನು ನದಿಗೆ ಹಾಕ್ತೀರೀಂತ ಮೊದಲೇ ಹೇಳಿದ್ರೆ, ಆಯರೆಯಲ್ಲಿಯೆ ನಿಂತು ಬಿಸಾಡ್ಬಹುದಿತ್ತಲ್ಲ? ಇಷ್ಟು ಕಷ್ಟಪಡ್ಬೇಕಿತ್ತಾ?’ ಅಂದಾಗ ಅವರು ದೋಣಿಯ ದಡೆಯ ಮೇಲೆ ಕುಳಿತು ನಿಟ್ಟುಸಿರಿಟ್ಟರು.

‘ಎಂತ ಮಾಡುವುದು, ಮಗಳ ಮನೆಯಲ್ಲಿ ಒಂದಾದರು ಹಲಸಿನ ಮರ ಉಂಟಾ? ಆ ಮಕ್ಕಳು ಗುಜ್ಜೆಗೆ ಆಸೆ ಪಡ್ತಾವೆ. ಮನೆಗೆ ಬಂದು ಹೋಗು ಅಂದರೆ ಸಣ್ಣ ಮಕ್ಕಳನ್ನು ಬಿಟ್ಟು ಬರೋದು ಹೇಗೆ ಅಂತಾಳೆ. ನಮ್ಮಳಿಯ ನಾರಾಯಣನಿಗೆ ಹೆಂಡತಿ ಮನೆ ಬಿಟ್ಟು ಹೋಗುವುದೆಂದರೆ ಆಗುವುದಿಲ್ಲ. ಮನೆಯಲ್ಲಿ ರಾಶಿ ಗುಜ್ಜೆಯಿದೆ. ಯಾರೂ ಮೂಸುವುದಿಲ್ಲ. ಮಕ್ಕಳಾದ್ರೂ ತಿನ್ಲಿ’ ಅಂದಾಗ ಇಮಾಮ ದೋಣಿಯನ್ನು ಮೆಲ್ಲಗೆ ದಂಡೆಯತ್ತ ನಿಲ್ಲಿಸಿ, ಕೆಳಗಿಳಿದು, ಎಳೆದು ಹಿಡಿದು ನಿಲ್ಲಿಸಿದಾಗ ಅವರು ಮೆಲ್ಲನೆ ಕಾಲನ್ನು ಎತ್ತಿ ಇಡುತ್ತಾ ನೀರಿಗಿಳಿದು ದಂಡೆಯತ್ತ ನಡೆದಾಗ ಇಮಾಮ ಒಳಗಿದ್ದ ಗುಜ್ಜೆಯನ್ನು ತೆಗೆದು ಅವರ ಕೈಗೆ ಕೊಡುತ್ತಾ, ‘ಈ ಪ್ರಾಯದಲ್ಲಿಯೂ ಭಾರ ಹೊತ್ಕೊಂಡು ಮಗಳು ಪುಳ್ಳೀಂತ ಮಮತೆ ತೋರಿಸ್ತಿದ್ದೀರಲ್ಲಾ. ನಮ್ಮನೆ ಅವಸ್ಥೆ ಕೇಳಿದ್ರೆ ಯಾರಿಗೂ ಬೇಡ’ ಎಂದು ನಿಡುಸುಯ್ದ.

ಅಪ್ಪಿಯಕ್ಕ ಎಂಟಾಣೆಯ ಒಂದು ಬಿಲ್ಲೆಯನ್ನು ಕೈಗಿಡುತ್ತಾ, ‘ಏನು ಮಾಡುವುದು. ಸಂಬಂಧಗಳನ್ನು ಬಿಟ್ಟು ಬಿಡುವುದಕ್ಕೆ ಆಗ್ತದಾ? ಎಲ್ಲರೂ ಬೇಕು ಮಾರಾಯ. ಜೀವನ ಅಂದ್ರೆ ಹೀಗೆ ಅಲ್ವಾ? ನೀನೂ ಬೇಕಾದವನೆ... ಇಲ್ಲದಿದ್ರೆ ನಾನು ಈ ತೀರಕ್ಕೆ ಬರ್ಲಿಕ್ಕೆ ಉಂಟಾ? ಮನುಷ್ಯ ಮನುಷ್ಯನ ಅರ್ಥಮಾಡಿಕೊಂಡ್ರೆ ಎಂತ ಕಷ್ಟ ಉಂಟು ಮಾರಾಯ?’ ಅಂದವರೆ, ‘ಬರ್ತೇನೆ, ಇನ್ನು ಮಳೆ ಸುರಿದ್ರೆ ಕಷ್ಟ’ ಅಂದು ನಿಧಾನಕ್ಕೆ ಹೆಜ್ಜೆಗಳನ್ನು ಕಟ್ಟಪುಣಿಯತ್ತ ಎತ್ತಿಟ್ಟು ಮಗಳ ಮನೆಯ ಕಡೆಗೆ ಹೊರಟರು.

ಅರ್ಧ ದಾರಿ ಸವೆಸಿದರೋ ಇಲ್ವೊ, ಗುಜ್ಜೆಯ ಭಾರ ತಾಳಲಾರದೆ ಭುಜ ಬದಲಿಸಿಕೊಂಡು ಹೇಗೋ ಶಾಲೆಯ ಹತ್ತಿರ ಬರುವಾಗ ಪಿರಿಪಿರಿ ಮಳೆ ಶುರುವಾಯಿತು. ಗುಜ್ಜೆಯನ್ನು ಒಂದು ಮರದ ಕೆಳಗೆ ಇಟ್ಟು ಮಳೆ ಕಡಿಮೆಯಾಗಬಹುದೆನ್ನುವ ನಿರೀಕ್ಷೆಯಿಂದ ನಿಂತದ್ದೇ ಮಳೆಹನಿಗಳು ದಪ್ಪವಾಗುತ್ತಲೇ ಆತಂಕಕ್ಕಿಳಿದ ಅವರು ಗುಜ್ಜೆಯನ್ನು ಎತ್ತಿ ಹೆಗಲ ಮೇಲೆ ಇಟ್ಟಿದ್ದೇ, ಬೆನ್ನು ಹಿಂದಕ್ಕೆ ಬಾಗಿ ಉಳುಕು ಬಿದ್ದು, ಗುಜ್ಜೆಯನ್ನು ಕೈ ಬಿಟ್ಟದ್ದೆ ಅದು ಬೆನ್ನಿನಿಂದ ಜಾರಿ ಕಲ್ಲಿನ ಮೇಲೆ ಬಿದ್ದು ಉದ್ದಕ್ಕೆ ಸೀಳಿತು.

ಮುಂದಕ್ಕೆ ಬಾಗಲೂ ಆಗದೆ, ಹಿಂದಕ್ಕೆ ಕುಳಿತುಕೊಳ್ಳಲೂ ಸಾಧ್ಯವಾಗದೆ, ‘ರಾಮ! ಕೃಷ್ಣ!’ ಅಂತ ನೆಟ್ಟಗೆ ನಿಂತವರನ್ನು ಶಾಲೆಯ ಹೆಡ್‌ಮಾಸ್ಟರ್ ನೋಡಿ, ‘ಏನಾಯ್ತು ನಿಮಗೆ? ನಿಮ್ಮದು ಯಾವೂರು?’ ಅಂದರು. ‘ಅಯ್ಯೋ! ರಾಮ. ಅಯ್ಯೋ ಕೃಷ್ಣ!’ ಅನ್ನುವುದನ್ನು ಬಿಟ್ಟರೆ ಅವರು ಮತ್ತೇನೂ ಹೇಳರು. ಹೆಡ್ಮಾಷ್ಟ್ರು ಶಾಲೆಗೆ ಹೋಗಿ ಒಂದಿಬ್ಬರು ಮಕ್ಕಳನ್ನು ಕರೆದುಕೊಂಡು ಬಂದು, ಅವರನ್ನು ಆಫೀಸು ಕೋಣೆಗೆ ನಡೆಸಿಕೊಂಡು ತಂದಾಗ ರತ್ನೆಯ ಮಗ ವಿಶುವಿಗೆ ‘ಅದು ತನ್ನ ಅಜ್ಜಿ’ ಎಂದು ತಿಳಿಯುತ್ತಲೇ, ಮೇಷ್ಟ್ರ ಅನುಮತಿ ಪಡೆದು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರಲು ಮುಂದಾದ. ಅವರು, ‘ಅಯ್ಯೋ ಮಾಣಿ, ನಾನು ಹೇಗೂ ಬರ್ತೇನೆ. ಆ ಗುಜ್ಜೆ... ಓ, ಆ ಮರದ ಕೆಳಗೆ ಬಿದ್ದಿದೆ. ಅದನ್ನು ತಾ ಮಾರಾಯಾ... ನನ್ನ ಕೈ ಬಿಡು...

ನಾನು ಬರ್ತೇನೆ. ನೀನು ಗುಜ್ಜೆ ತಾ’ ಅಂದಾಗ, ವಿಶು ಸೀಳಿದ ದೊಡ್ಡ ಗುಜ್ಜೆಯನ್ನು ಓಡಿ ಹೋಗಿ ಹೆಗಲಿಗೆ ಸೇರಿಸಿ ಅಜ್ಜಿಯ ಮುಂದೆ ನಡೆದ.
ಅಜ್ಜಿಯ ಜೊತೆಗೆ ಅರ್ಧ ಗಂಟೆಯ ದಾರಿ ಒಂದು ಗಂಟೆಯಾದಾಗ ಸೀಳಿದ ಗುಜ್ಜೆಯ ಭಾರವನ್ನು ತಾಳಲಾರದೆ ಬುಡಕ್ಕನೆ ಕಿದಪಾನೆಯಲ್ಲಿ  ಹಾಕಿ, ‘ಅಮ್ಮಾ, ಅಜ್ಜಿ... ಅಜ್ಜಿ...’ ಅಂತ ಏದುಸಿರು ಬಿಡುತ್ತಾ ಕೂಗಿದ.

ರತ್ನೆ ಗಾಬರಿ ಬಿದ್ದು ನೋಡಿದರೆ ಬೆರ್ಚಪ್ಪನಂತೆ ಸೊಂಟಕ್ಕೆ ಕೈ ಹಚ್ಚಿ ನಿಂತ ತಾಯಿಯನ್ನು ಕಂಡು ಕಂಗಾಲಾಗಿ, ‘ಎಂತಮ್ಮಾ ಇದು?’ ಅಂದಳು. ಆಕೆ, ‘ಗುಜ್ಜೆ ಮಾರಾಯ್ತಿ. ಒಳ್ಳೆ ಗುಜ್ಜೆ...’ ಎನ್ನುತ್ತಾ ಸೊಂಟ ಮುಂದೆ ಮಾಡಿ, ಮೆಲ್ಲಗೆ ಮನೆಯ ಮೆಟ್ಟಿಲು ಏರುವಾಗ ರತ್ನೆಗೆ ಎದೆ ಧಸಕ್ಕೆಂದಿತು.ಅವರನ್ನು ಒಳಗೆ ಮಲಗಿಸಿ ವಿಶುನನ್ನು ಕರೆದು ಬೆನ್ನಿನ ಉದ್ದಕ್ಕೂ ತ್ಯಾಂಪಣ್ಣ ಭಂಡಾರಿಯವರ ನೋವಿನ ಎಣ್ಣೆಯನ್ನು ತಿಕ್ಕಿದ್ದೇ ತಿಕ್ಕಿದ್ದು. ಕೊನೆಗೆ,  ನೋವು ಕಡಿಮೆಯಾಗದೆ ಆಸ್ಪತ್ರೆ ಸೇರಬೇಕಾಯಿತು. ದೊಡ್ಡ ಡಾಕ್ಟ್ರು ಎರಡು ಮೂರು ದಿನ ಪರಿಶೀಲಿಸಿದರು. ಕೊನೆಗೆ, ‘ಬೆನ್ನು ಮೂಳೆ ಮುರಿದಿದೆ.

ಈ ಪ್ರಾಯದಲ್ಲಿ ಸರ್ಜರಿ ಆಗುವುದಿಲ್ಲ. ಔಷಧಿಯಲ್ಲಿಯೆ ಕಡಿಮೆಯಾಗಬೇಕು. ನೀವು ಹಿಂದಕ್ಕೆ ಕರೆದುಕೊಂಡು ಹೋಗುವುದು ಒಳ್ಳೆಯದು’ ಅಂದಾಗ ರತ್ನೆಗೆ ತಲೆಬಿಸಿಯಾಯಿತು. ಹಾಗೆ ಹಾಸಿಗೆ ಹಿಡಿದ ಅಪ್ಪಿಯಕ್ಕ ಮಲಗಿದಲ್ಲಿಯೇ ಉಸಿರು ಖಾಲಿ ಮಾಡಿದ್ದು ಈಗಲೂ ಹಸಿ ಹಸಿ ನೆನಪು. ಆನಂತರ ರತ್ನೆ ಹಲಸಿನ ಮರ, ಹಲಸು ಅಂದ್ರೆ ಹೆದರಿ ಬಿಡೋಳು. ‘ರತ್ನೆ, ಸುಮತಿ, ಮಕ್ಕಳು ಬಂದಿಲ್ವೇನೆ?’ ಅಂತ ಕಮಲಮ್ಮ ಕರೆದಾಗ ನೆನಪಿನಿಂದ ಹೊರಗೆ ಬಂದ ರತ್ನೆ, ಪಡಸಾಲೆಯಲ್ಲಿ ಮಕ್ಕಳಿಗಾಗಿ ನಾಲ್ಕು ಎಲೆಯನ್ನು ಕಾದಿರಿಸಿ ಹೊರಗೆ ಬರುವಷ್ಟರಲ್ಲಿ ಸುಮತಿಯ ಜೊತೆಗೆ ಮಕ್ಕಳು ಬರುತ್ತಿರುವುದು ಕಂಡಿತು.

‘ಯಾಕೋ, ಒಂದರ್ಧ ಗಂಟೆ ಬೇಗ ಕೇಳಿ ಬರ್ಲಿಕ್ಕೆ ಆಗ್ಲಿಲ್ವಾ?’ ಅಂದಾಗ. ಸುಮತಿ- ‘ಅಯ್ಯೋ! ಆ ಮೇಷ್ಟ್ರು ಬಿಡ್ತಾರಾ? ಎಲ್ಲಿ ಊಟ, ಏನು ವಿಶೇಷ? ನಮ್ಮನ್ನು ಕರೆಯೋದಿಲ್ವಾ? ಅಬ್ಬಬ್ಬಾ ಎಷ್ಟು ಪ್ರಶ್ನೆಗಳು... ಬೇಕಾ? ಜೊತೆಗೆ ಇವನ ಗೆಳೆಯರದ್ದು ‘ಶಾಲೆಗೆ ಚಕ್ಕರ್ ಊಟಕ್ಕೆ ಹಾಜರ್’ ಅಂತ ತಮಾಷೆ ಬೇರೆ’ ಎಂದು ವರದಿ ಒಪ್ಪಿಸಿದಳು. ರತ್ನೆ, ‘ಹೋಗಿ, ಪಡಸಾಲೆಯಲ್ಲಿ ಎಲೆ ಉಂಟು ಕುಳಿತುಕೊಳ್ಳಿ’ ಅಂದಳು. ಮಕ್ಕಳು ಅಳುವಂತೆ ಮಳೆ ಸುರಿಯುತ್ತಲೇ ಇತ್ತು.

ಮಕ್ಕಳಿಗೆ ತಲೆ ಒರೆಸಲು ಬೈರಾಸ ಕೊಟ್ಟ ಕಮಲಮ್ಮ ಅಂಗಳವನ್ನು ನೋಡುತ್ತಲೆ ದಿಗಿಲಾದರು. ಹಿಂದಿನ ದಿನ ಸೆಗಣಿಸಾರಿಸಿದ ನೆಲ ಕೆಸರು ಗದ್ದೆಯಂತೆ ರಾಡಿಯಾಗಿ ಚಿತ್ರಗಳಲ್ಲಿನ ಚಂದ್ರಲೋಕದ ಗುಳಿಯಂತೆ ಕಾಣುತ್ತಿತ್ತು. ಅವರು ಸಮಾಧಾನವಾಗದೆ ಕೊರಂಬು ತಲೆಗೇರಿಸಿ ಮಳೆಗೆ ಇಳಿದಾಗ ಊಟದ ಪಂಕ್ತಿಯ ನಡುವೆ ವಾಸುದೇವ ತಂಬಿಗೆಯಲ್ಲಿ ನೀರು ಹಿಡಿದುಕೊಂಡು, ‘ಸಾವಕಾಶ ಸಾವಕಾಶ, ನಿಧಾನಕ್ಕೆ ಊಟ ಮಾಡಿ’ ಎಂದು ಉಪಚರಿಸುವ ಮಾತನಾಡಿದ. ಕಮಲಮ್ಮನಿಗೆ ಕೊರಂಬಿನ ಮೇಲೆ ಬೀಳುವ ಮಳೆಯ ಸದ್ದಿಗೆ ತನ್ನ ಗಂಡನ ಮಾತುಗಳು, ‘ಸಾವು ಸಾವು’ ಅಂತ ಕೇಳಿದ್ದೆ ತಟಕ್ಕನೆ ನಿಂತು ತೋಡಿನತ್ತ ನೋಡಿದರೆ ಕೆನ್ನೀರು ಉಕ್ಕೇರಿ ಗದ್ದೆಗಳೆಲ್ಲಾ ಮುಳುಗಿಹೋಗಿದ್ದವು. ಅವರಿಗೆ ದಿಗಿಲಾಗಿ ಆ ನೀರನ್ನು ನೋಡುವುದು ಬೇಡವಾಗಿ ಕೊರಂಬನ್ನು ಅಲ್ಲಿಯೇ ಎಸೆದು ಮೇಲೆ ಬಂದರು.
 
ಇಂತಹ ಬೊಳ್ಳವೇ ಭಾಗ್ಯಕ್ಕನನ್ನು ಬಲಿ ತೆಗೆದುಕೊಂಡದ್ದಲ್ವಾ? ಆಗ ಮದುವೆಯಾಗಿ ಆ ಮನೆಯ ಸೊಸೆಯಾಗಿ ಬಂದ ಕಮಲಮ್ಮನನ್ನು ಅತ್ತೆ ಭಾಗ್ಯಕ್ಕ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಭಾಗ್ಯಕ್ಕನಿಗೆ ಗಂಡನೆಂದರೆ ಮೈತುಂಬಾ ಸೆರಗು ಮುಚ್ಚಿ ತಲೆ ತಗ್ಗಿಸಿಕೊಂಡು ನಿಲ್ಲುವಷ್ಟು ಹೆದರಿಕೆ. ಅವರು ಹೂಂಕರಿಸಿದರೆ ಬೆಚ್ಚಿ ಬೀಳೋರು. ಮಾತಾಡಿದರೆ ಕೇಳಿಸದಷ್ಟು ಹಗುರ ಅವರ ಮಾತು. ಸೊಸೆಯ ಜೊತೆಗೆ ಮಾತನಾಡುವುದಿದ್ದರೂ ಮೆಲ್ಲವೆ. ಕಮಲಮ್ಮನಿಗಾದರೂ ಅಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿ.

ಮಳೆಗಾಲಕ್ಕಿಂತ ಮೊದಲು ದೂಮನನ್ನು ಕರೆದು ತೆಂಗಿನ ಕಾಯಿ ಕೊಯ್ಯಿಸುವುದು ವೆಂಕಟರಮಣನ ಇರಾದೆ. ದೂಮನಾದರೂ ಮರ ಹತ್ತಿ ಇಳಿಯಬೇಕಾದರೆ, ‘ಅಣ್ಣೆರೆ, ಹತ್ತಿದ್ದಕ್ಕೆ ಒಂದು ಕಾಯಿ, ಇಳಿಯುವುದಕ್ಕೆ ಒಂದು ಕಾಯಿ’ ಅಂತ ತಗಾದೆ ತೆಗೆದರೆ ವೆಂಕಟರಮಣ ದೂರ್ವಾಸನೆ. ‘ಒಟ್ಟು ಇಪ್ಪತ್ತು ಮರ ಇದೆ. ನಿಂಗೆ ಹತ್ತುವುದಕ್ಕೊಂದು ಇಳಿಯುವುದಕ್ಕೊಂದು ಕಾಯಿ ಕೊಡುವ. ನೀನು ಆ ಇಪ್ಪತ್ತನೇ ಮರ ಹತ್ತಿ ಕಾಯಿಗಳನ್ನು ಕಿತ್ತು ಹಾಕಿದ್ರೆ ಸಾಕು.
 
ಇಳಿಯುವುದು ಬೇಡ, ಮರದಲ್ಲಿಯೇ ಕೂತ್ಕೋ. ನಿನಗೆ ಕೊಡುವ ಆ ಕಾಯಿಗಳು ನನಗೆ ಉಳಿಯುತ್ತದೆ’ ಎಂದು ಬೈದರೆ, ದೂಮ ‘ಹ್ಹೆ ಹ್ಹೆ ಹ್ಹೆ’ ಅಂತ ನಕ್ಕು ಅವರ ಕೋಪವನ್ನು ಕಡಿಮೆ ಮಾಡುತ್ತಿದ್ದ. ಇಪ್ಪತ್ತು ಮರಗಳಲ್ಲಿ ಸಿಗುವುದೇ ಇನ್ನೂರು ಮುನ್ನೂರು ಕಾಯಿಗಳು. ಕೊಯ್ಯುವವನಿಗೆ ಅಷ್ಟೊಂದು ಕೊಟ್ಟರೆ ಲಾಭ ಎಂತ ಉಂಟು? ಕೊಪ್ಪರಕ್ಕೆ ಇನ್ನೂರು ಕಾಯಿ ಹೋದರೆ ಉಳಿದದ್ದು ದಿನನಿತ್ಯ ಮತ್ತು ವಿಶೇಷ ಕಟ್ಲೆಗೆ ಸಾಕಾಗ್ಲಿಕಿಲ್ಲ ಅನ್ನುವುದು ಅವರ ಅಭಿಪ್ರಾಯ. ಅವರು ಒಂದು ತೆಂಗಿನ ಕಾಯಿಯನ್ನು ಹಾಳು ಮಾಡುವವರಲ್ಲ.

ದೂಮನೇನಾದರೂ ಕಾಯಿ ಕೊಯ್ಯುವ ವಿಷಯದಲ್ಲಿ ತಕರಾರು ಮಾಡಿದರೆ ತಾವೇ ಲಂಗೋಟಿಯನ್ನು ಗಟ್ಟಿಯಾಗಿ ಕಟ್ಟಿ ಚಕಚಕ ಮರವೇರಿ ಕಾಯಿ ಕೀಳುವುದಕ್ಕೆ ಶುರುವೆ. ಅವರು ಕಿತ್ತ ಕಾಯಿಗಳನ್ನು ಕನ್ನಡಿ ಪುಡಾಯಿಯಲ್ಲಿ ತುಂಬಿಸಿ ಕೊಟ್ಟಿಗೆಯಲ್ಲಿ ತುಂಬಿಸುವ ಕೆಲಸ ಭಾಗ್ಯಕ್ಕನಿಗೆ. ಅವರು ಭಾರವಾದ ಪುಡಾಯಿಗಳನ್ನು ಎತ್ತಿ ಎತ್ತಿ ಸುಸ್ತಾಗಿ ಬಿಡೋರು. ಆ ಕೆಲಸ ಮಾಡದಿದ್ದರೆ ಮರದಿಂದಲೆ ಕೆಳಗೆ ಹಾರಿ ಬಿಡುವ ದೂರ್ವಾಸ ಮುನಿ ವೆಂಕಟರಮಣ.

ಐದಾರು ಮರ ಹತ್ತಿ ಇಳಿಯುವುದರಲ್ಲಿ ಸುಸ್ತಾದ ವೆಂಕಟರಮಣ ಮಡದಿಗೆ, ‘ಇವತ್ತಿಗೆ ಸಾಕು ಮಾರಾಯ್ತಿ. ನಂಗೆ ಸುಸ್ತಾಯ್ತು’ ಅಂದ್ರೆ ಭಾಗ್ಯಕ್ಕ ನಿರಾಳವಾಗಿ ಉಸಿರಾಡುವರು. ಆದರೆ ಅದೇ ಭಾಗ್ಯಕ್ಕನಿಗೆ ಮುಳುವಾಯಿತೇನೋ. ಆಷಾಢದ ಮೋಡಗಳೆಲ್ಲಾ ಒಟ್ಟು ಸೇರುವಷ್ಟರಲ್ಲಿ ಬಾಕಿ ಉಳಿದ ತೆಂಗಿನ ಮರದ ಕಾಯಿಗಳನ್ನು ಕೊಯ್ಯಲು ದೂಮ ಬರುತ್ತಾನೆಂದು ವೆಂಕಟರಮಣ ಕಾದದ್ದೇ ಅವನು ಕಳ್ಳು ಮಾರುವ ಕೆಲಸ ಶುರು ಹಚ್ಚಿದ್ದಾನೆಂದು ತಿಳಿಯುತ್ತಲೆ ತೆಂಗಿನ ಕಾಯಿಗಳೆಲ್ಲಾ ಮರದಲ್ಲಿ ಬಾಕಿಯಾದವು.
 
ಒಂದೆರಡು ದಿನಗಳಲ್ಲಿಯೆ ಮಳೆ ಶುರುವಾಗಿ ತೋಡಿನಲ್ಲಿ ಬೊಳ್ಳ ಏರಿದ್ದೇ ಗದ್ದೆಗಳೆಲ್ಲಾ ಮುಳುಗಿ ಏನೂ ಮಾಡಲಾಗದ ಸ್ಥಿತಿಯಾಯಿತು. ನಾಲ್ಕನೇ ದಿನಕ್ಕೆಲ್ಲಾ ಬೊಳ್ಳ ಇಳಿದರೂ ತೋಡಿನ ಒಯ್ಲು ಕಡಿಮೆಯಾಗಲಿಲ್ಲ. ವೆಂಕಟರಮಣ ಸೊಂಟಕ್ಕೊಂದು ಬೈರಾಸು ಸುತ್ತಿಕೊಂಡು ತೋಡಿನ ಕಡೆಗೆ ನಡೆದವನೇ ತೆಂಗಿನ ಕಾಯಿಯೊಂದು ಬೊಳ್ಳದಲ್ಲಿ ಹೋಗುವುದನ್ನು ಕಂಡ. ಕೊಯ್ಯದೆ ಬಿಟ್ಟ ತೆಂಗಿನ ಕಾಯಿಗಳೆಲ್ಲಾ ಬೊಳ್ಳದಲ್ಲಿ ನದಿಯನ್ನು ಸೇರುವುದೆಂದು ತಿಳಿಯಿತು.

ಮಳೆ ಬಂದರೆ ಮರ ಜಾರುವುದರಲ್ಲಿ ಕಾಯಿ ಕೊಯ್ಯುವುದಕ್ಕೆ ಆಗುವುದಿಲ್ಲವೆಂದು ತಿಳಿದಿದ್ದ ಅವನು ಮನೆಗೆ ಬಂದು ಭಾಗ್ಯಕ್ಕನಿಗೆ ಪಿರಿಪಿರಿ ಮಾಡುವುದಕ್ಕೆ ಶುರು ಮಾಡಿದ. ಅವರು ಬೆದರುತ್ತಲೇ ಮನೆ ಕೆಲಸ ಮುಗಿಸುವುದರಲ್ಲಿಯೇ ಜೀವ ತೇಯುತ್ತಿದ್ದರು. ಒಂದು ದಿನ ತೋಡಿನ ನೀರು ತಿಳಿಯಾಯಿತೆಂದು ಪಕ್ಕದ ಮನೆಯ ಅಂಬಕ್ಕ ಹೇಳಿದ್ದೇ ಭಾಗ್ಯಕ್ಕ ಒಂದಷ್ಟು ಹೊದಿಕೆಗಳನ್ನು ಒಗೆಯುವುದಕ್ಕೆ ತೋಡಿಗೆ ಹೊರಟರು. ನೀರಿಗಿಳಿದು ಬಟ್ಟೆಗಳನ್ನು ಒಗೆಯುತ್ತಿದ್ದರೆ ಒಂದು ತೆಂಗಿನಕಾಯಿ ಎಲ್ಲಿತ್ತೋ, ಹರಿಯುವ ನೀರಿನಲ್ಲಿ ಆಟವಾಡುತ್ತಾ ಬರುತ್ತಿರುವುದು ಅವರ ಕಣ್ಣಿಗೆ ಬಿತ್ತು.
 
ರಪ್ಪನೆ ಬಟ್ಟೆಯನ್ನು ಬಿಟ್ಟು ತೆಂಗಿನಕಾಯಿ ಹಿಡಿಯುವುದಕ್ಕೆ ತೋಡಿನ ನಡುವೆ ಇಳಿದರು. ಕಾಲು ಜಾರಿತೋ ಒಯ್ಲು ಎಳೆಯಿತೋ ಭಾಗ್ಯಕ್ಕ ಆಯ ತಪ್ಪಿ ನೀರಿಗೆ ಬಿದ್ದರು. ಒಯ್ಲು ಎಳೆದುಕೊಂಡು ಅವರನ್ನು ಕೇದಗೆಯ ಗಿಡಗಳ ನಡುವೆ ಸಿಕ್ಕಿಸಿತು. ಮೊದಲೆ ಪೀಚಲು ದೇಹ. ಒಂದು ಮುಳುಗು ಮುಳುಗಿದ್ದೇ ಹೊಟ್ಟೆ, ಎದೆಗೂಡಿಗೆಲ್ಲ ನೀರು ತುಂಬಿ ಅಲ್ಲಿಯೇ ನೇತಾಡುತ್ತಿದ್ದರು.

ವಿಷಯ ವೆಂಕಟರಮಣನಿಗೆ ಗೊತ್ತಾಗಿದ್ದು ಪೂಜೆ ಮುಗಿಸಿ ಹೊರಗೆ ಬಂದಾಗ. ಯಾವತ್ತೂ ಪೂಜೆ ಮುಗಿಯುವ ಹೊತ್ತಿಗೆ ಆರತಿಗೆ ಬರುವ ಅವಳು ಕಾಣಿಸಲಿಲ್ಲವೆಂದು ಕರೆದರೆ ಉತ್ತರವಿಲ್ಲ. ಕೊನೆಗೆ ಸೊಸೆ ಕಮಲಮ್ಮ ಓಡೋಡಿ ಬಂದು ಮಾವನಿಗೆ ಸುದ್ದಿ ಮುಟ್ಟಿಸಿದಲ್ಲಿಗೆ ಒಂದು ಕವಲಿನ ಅಂತ್ಯ ಕಂಡಿತು. ಮನೆಯ ಪಾರುಪತ್ಯೆಯ ಜವಾಬ್ದಾರಿಯೆಲ್ಲಾ ಕಮಲಮ್ಮನ ಮೇಲೆ ಬಿತ್ತು. ಇದನ್ನೆಲ್ಲಾ ನೆನಪಿಸಿಕೊಂಡ ಕಮಲಮ್ಮ ಮೋಡ ತಿಳಿಯಾಗುತ್ತಲೇ ತೋಡಿನಲ್ಲಿ ಇಳಿಯುವ ಬೊಳ್ಳದಂತೆ ನಿರಾಳರಾದಾಗ ಅವರಿಗೆ ಭಾಗ್ಯಕ್ಕ ತೋಡಿನ ಬಳಿ ನಿಂತು ಕರೆಯುವಂತೆ ಕಂಡಿತು. ಮೆಟ್ಟಿಲುಗಳನ್ನು ಇಳಿದು ಶುದ್ಧ ಬಟ್ಟೆಗಳನ್ನು ಹಿಡಿದುಕೊಂಡು ಅತ್ತ ಹೊರಟರೆ ಕಾಗೆಗಳು ಪಿಂಡದ ಅನ್ನವನ್ನು ಕೆದಕಿ ತಿನ್ನುವುದು ಗೋಚರಿಸಿತು. ಅವುಗಳನ್ನೇ ನೋಡುತ್ತಾ ನಿಂತು ಬಿಟ್ಟವರ ಕೈಯಿಂದ ಬಟ್ಟೆಗಳೆಲ್ಲಾ ಜಾರಿ ಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT