ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ: ಪರಿಹಾರಕ್ಕೆ ಒತ್ತಾಯ

ಕೊಳೆ ರೋಗದಿಂದ ಬೆಳೆ ಹಾನಿ
Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕನ್ನು ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಬೇಕು, ಕೊಳೆ ರೋಗದಿಂದ ಅಡಿಕೆ, ಕಾಫಿ ಹಾಗೂ ಕಾಳುಮೆಣಸು ಫಸಲು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಬೆಳೆಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊಳೆ ರೋಗ ಹರಡಿರುವ ಅಡಿಕೆಯನ್ನು ಸೋಮವಾರ ತಾಲ್ಲೂಕು ಕಚೇರಿ ಎದುರು ಸುರಿದು ತಾಲ್ಲೂಕು ಆಡಳಿತದ ಗಮನ ಸೆಳೆದ ರೈತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಆರು ದಶಕಗಳಿಂದ ಕಂಡರಿಯದ ಮಳೆ ಆಗಿದ್ದು, 70 ದಿನ ನಿರಂತರ ಸುರಿದ ಮಳೆಯಿಂದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗೆ ಕೊಳೆ ರೋಗ ಆವರಿಸಿ ಶೇ. 80ರಷ್ಟು ಫಸಲು ನಷ್ಟವಾಗಿದೆ. ಬೆಳೆದ ಬೆಳೆ ಕೈಗೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದು, ಆತ್ಮಹತ್ಯೆಯ ದಾರಿ ತುಳಿಯುವ ಆತಂಕವಿದೆ. ಕೂಡಲೇ ಸರ್ಕಾರ ಕೊಳೆ ರೋಗದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ನಿರಂತರ ಮಳೆಯಿಂದಾಗಿ ಕೊಳೆ ನಿಯಂತ್ರಕ ಬೋರ್ಡೋ ದ್ರಾವಣ ಸಿಂಪಡಣೆ ಸಾಧ್ಯವಾಗಿಲ್ಲ. ಜೀವನೋಪಾಯವಾಗಿ ಅಡಿಕೆ ಬೆಳೆಯುತ್ತಿರುವ ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ಅಡಿಕೆ ಬೆಳೆ ಅವಲಂಬಿತ ಕೃಷಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ತತ್‌ಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಎಲ್ಲಾ ರಾಜಕೀಯ ಪಕ್ಷ, ಸಂಘಟನೆಗಳ ಪ್ರಮುಖರು ರೈತರ ಪರನಿಂತು ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದರು.

ಅಹವಾಲು ಸ್ವೀಕರಿಸಿದ ತಹಶೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್ ಅವರು ಮಾತನಾಡಿ, ಬೆಳೆಹಾನಿ ಬಗ್ಗೆ ತೋಟಗಾರಿಕಾ ಇಲಾಖೆ ಅಂದಾಜು ವರದಿ ಸಲ್ಲಿಸಿದ್ದು, ಸಮಗ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ರೈತ ಮುಖಂಡರಾದ ಕುಪ್ಪಳಿ ಸುಧಾಕರ್, ಜೆಡಿಎಸ್‌ನ ಎಚ್.ಟಿ. ರಾಜೇಂದ್ರ, ಸುಭದ್ರಮ್ಮ, ಬಿ.ಎಚ್. ದಿವಾಕರ್ ಭಟ್, ಬೆಳ್ಳಪ್ಪ ಗೌಡ, ಕಾಂಗ್ರೆಸ್‌ನ ಅಸಗೋಡು ನಾಗೇಶ್, ಓಣಿತೋಟ ರತ್ನಾಕರ್, ಎನ್.ಕೆ. ವಿಜಯ್, ಬಿಜೆಪಿಯ ಪದ್ಮಾವತಿ ರಮೇಶ್, ಬೆಳಗೊಳ ರಮೇಶ್, ಎಚ್.ಡಿ. ಜಯಂತ್, ಬಿ.ಸಿ. ನರೇಂದ್ರ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT