ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಬೆಳೆಗಾರರ ಬೃಹತ್‌ ಪ್ರತಿಭಟನೆ

ಸಾಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ, ಸರ್ಕಾರದ ವಿರುದ್ಧ ರೈತರ ಆಕ್ರೋಶ
Last Updated 19 ಡಿಸೆಂಬರ್ 2013, 9:36 IST
ಅಕ್ಷರ ಗಾತ್ರ

ಸಾಗರ:  ಅಡಿಕೆ ನಿಷೇಧ ಪ್ರಸ್ತಾವ ವಿರೋಧಿಸಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಕರೆ ನೀಡಿದ್ದ ‘ಸಾಗರ ಬಂದ್‌’ಗೆ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್‌ ಬಹುತೇಕ ಯಶಸ್ವಿಯಾಗಿತ್ತು. ಸಾಗರ, ಸೊರಬ, ಹೊಸನಗರ ಈ ಮೂರು ತಾಲ್ಲೂಕುಗಳ ವಿವಿಧ ಗ್ರಾಮಗಳ ಅಡಿಕೆ ಬೆಳೆಗಾರರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗಾಂಧಿ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ,  ಸುಪ್ರೀಂ ಕೋರ್ಟ್‌ನಲ್ಲಿ ಸ್ವಯಂ ಸೇವಾ ಸಂಘಟನೆಯೊಂದು ಗುಟ್ಕಾ ಕಂಪೆನಿಗಳ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಕೇಂದ್ರದ ಸಾಲಿಸಿಟರ್‌ ಜನರಲ್‌ ಅವರು ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಮೌಖಿಕವಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.  

‘ಬೆಳೆಗಾರರ ಜತೆಗೆ ಮಾರಾಟ, ಪರಿಷ್ಕರಣೆ, ಸಾರಿಗೆ, ಕೃಷಿ ಕೂಲಿ ಕಾರ್ಮಿಕರು ಹೀಗೆ ವಿವಿಧ ವಿಭಾಗಗಳಲ್ಲಿ ಅಡಿಕೆಯನ್ನೇ ಅವಲಂಬಿಸಿರುವ 3 ಕೋಟಿ ಜನರಿದ್ದಾರೆ. ಅಡಿಕೆಗೆ ಸಂಬಂಧಿಸಿದಂತೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಸ್ಪಷ್ಟ ನಿಲುವು ತಾಳಿರುವುದು 3 ಕೋಟಿ ಜನರ ತಲೆಯ ಮೇಲೆ ಅಡಿಕೆ ನಿಷೇಧದ ಕತ್ತಿ ತೂಗುವಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್‌ ಮಾತನಾಡಿ, 2002ನೇ ಸಾಲಿನಿಂದಲೆ ಅಡಿಕೆ ಬೆಳೆಯನ್ನು ನಿಷೇಧಿಸಬೇಕು ಎಂಬ ಹುನ್ನಾರ ನಡೆಯುತ್ತಿದೆ. ಇದರ ಹಿಂದೆ ಸಿಗರೇಟ್‌ ಕಂಪೆನಿಗಳ ಪ್ರಬಲವಾದ ಲಾಬಿ ಇದೆ ಎಂದು ಆರೋಪಿಸಿದರು.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಕಾವೇರಿ ನದಿ ವಿವಾದದಲ್ಲಿ ರಾಜ್ಯ ಸರ್ಕಾರ ಕರ್ನಾಟಕದ ಹಿತವನ್ನು ಕಾಪಾಡಲು ಹೇಗೆ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಸ್ವಂತ ಖರ್ಚಿನಿಂದ ಹಿರಿಯ ವಕೀಲರನ್ನು ನೇಮಿಸಿದೆಯೋ ಅದೇ ರೀತಿ ಅಡಿಕೆಗೆ ಸಂಬಂಧಪಟ್ಟ ಪ್ರಕರಣದಲ್ಲಿ ಬೆಳೆಗಾರರ ಹಿತವನ್ನು ಕಾಪಾಡಲು ವಕೀಲರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನ ಕಿಸಾನ್‌ ಸೆಲ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಸಚಿನ್‌ ಮಿಗಾ ಮಾತನಾಡಿದರು.   

ಆಪ್ಸ್‌ಕೋಸ್‌ ಅಧ್ಯಕ್ಷ ಆರ್.ಎಸ್‌.ಗಿರಿ, ಉಪಾಧ್ಯಕ್ಷ ಬಿ.ಎ.ಇಂದೂಧರ ಗೌಡ, ತೋಟಗಾರ್ಸ್‌ ಅಧ್ಯಕ್ಷ ಕೆ.ಸಿ.ದೇವಪ್ಪ, ಟಿಎಪಿಎಂಸಿಎಸ್‌ ಅಧ್ಯಕ್ಷ ಎಂ.ಸಿ.ರತ್ನಾಕರ ಗೌಡ, ಮ್ಯಾಮ್ಕೋಸ್‌ ನಿರ್ದೇಶಕ ಎಲ್‌.ಟಿ.ತಿಮ್ಮಪ್ಪ, ಬಿ.ಎಚ್‌.ರಾಘವೇಂದ್ರ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕೆ.ಎಸ್.ಸುಬ್ರಾವ್, ಪಿ.ಎನ್.ಸುಬ್ರಾವ್‌, ಈಳಿ ನಾರಾಯಣಪ್ಪ, ಎಂ.ಕೆ.ತಿಮ್ಮಪ್ಪ, ಬಿಜೆಪಿ ಮುಖಂಡರಾದ ಶರಾವತಿ ಸಿ.ರಾವ್, ಯು.ಎಚ್.ರಾಮಪ್ಪ, ಚೇತನ್‌ರಾಜ್ ಕಣ್ಣೂರು,

ವಕೀಲರ ಸಂಘದ ಅಧ್ಯಕ್ಷ ಎಚ್.ಕೆ.ಅಣ್ಣಪ್ಪ, ನಮೋ ಬ್ರಿಗೇಡ್‌ನ ಕೆ.ಎಲ್.ಭೋಜರಾಜ್, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯ ವಿಜಯ ಕುಮಾರ್‌, ಕರವೇ (ಪ್ರವೀಣ್‌ ಶೆಟ್ಟಿ ಬಣ) ಕೆ.ಮಂಜುನಾಥ್‌, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸರಸ್ವತಿ ನಾಗರಾಜ್, ಕಲಸೆ ಚಂದ್ರಪ್ಪ, ವರ್ತಕರ ಸಂಘದ ಅಧ್ಯಕ್ಷಯು.ಜೆ.ಮಲ್ಲಿಕಾರ್ಜುನ, ದಲಾಲರ ಸಂಘದ ಅಧ್ಯಕ್ಷ  ಮೋಹನಗೌಡ್ರು,  ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT